ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ನಲ್ಲಿ ಹೆಸರು, ಉದ್ದು ಬೆಳೆಗೆ ತಾಮ್ರ ರೋಗ ಬಾಧೆ

ನಿರ್ವಹಣೆಗೆ ರೈತರಿಗೆ ಕೃಷಿ ವಿಜ್ಞಾನಿಗಳ ಸಲಹೆ
Last Updated 7 ಜುಲೈ 2020, 14:31 IST
ಅಕ್ಷರ ಗಾತ್ರ

ಜನವಾಡ: ಬೀದರ್ ತಾಲ್ಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ಹೆಸರು ಹಾಗೂ ಉದ್ದಿನಲ್ಲಿ ತಾಮ್ರ ರೋಗ (ತುಕ್ಕು ರೋಗ) ಬಾಧೆ ಲಕ್ಷಣಗಳು ಕಂಡು ಬಂದಿವೆ.

ರೈತರು ತಾಮ್ರ ರೋಗ ನಿರ್ವಹಣೆಗೆ ಹೆಕ್ಷಾಕೋನೊಜೊಲ್ 1 ಮಿಲಿ ಲೀಟರ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ಜನವಾಡ ಸಮೀಪದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸುನೀಲಕುಮಾರ ಎನ್.ಎಂ. ಸಲಹೆ ನೀಡಿದ್ದಾರೆ.

ಮೂಲ ಗೊಬ್ಬರ ಹಾಕದ ರೈತರ ಹೊಲಗಳ ಹೆಸರು ಮತ್ತು ತೊಗರಿ ಬೆಳೆಯಲ್ಲಿ ಪೋಷಕಾಂಶಗಳ ಕೊರತೆ ಕಂಡು ಬಂದಿದ್ದು, ನಿರ್ವಹಣೆಗಾಗಿ 19:19:19 ಎನ್.ಪಿ.ಕೆ. 10 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ತಿಳಿಸಿದ್ದಾರೆ.

ಈಗಾಗಲೇ ಬಿತ್ತನೆ ಮಾಡಿರುವ ತೊಗರಿ 15 ರಿಂದ 25 ದಿನಗಳ ಅವಧಿಯದ್ದಾಗಿದೆ. ಭೂಮಿಯಲ್ಲಿ ತೇವಾಂಶ ಇರುವುದನ್ನು ದೃಢಪಡಿಸಿಕೊಂಡು ಕಳೆನಾಶಕವಾದ ಇಮ್ಯಾಝೆತಾಪೈರ್ 10 ಎಸ್.ಎಲ್. 400 ಮಿಲಿ ಲೀಟರ್ ಪ್ರತಿ ಎಕರೆಗೆ ಸಿಂಪಡಿಸಬೇಕು. ಕಳೆನಾಶಕ ಬಳಸುವಾಗ ತಪ್ಪದೆ ಸಿಂಪರಣಾ ಹುಡ್ ಬಳಸಬೇಕು ಎಂದು ಹೇಳಿದ್ದಾರೆ.

ಇನ್ನೂ ಬಿತ್ತನೆ ಮಾಡದೆ ಇರುವ ಅಥವಾ ಮರು ಬಿತ್ತನೆ ಮಾಡುವ ರೈತರು ಸೋಯಾ ಅವರೆ ಹಾಗೂ ತೊಗರಿಯನ್ನು ಜುಲೈ 15 ರ ವರೆಗೆ ಬಿತ್ತಬಹುದಾಗಿದೆ ಎಂದು ತಿಳಿಸಿದ್ದಾರೆ.
ಮೊದಲು ಬಿತ್ತನೆ ಮಾಡಿರುವ ಉದ್ದು, ಹೆಸರು, ತೊಗರಿ ಹಾಗೂ ಸೊಯಾಅವರೆ ಬೆಳೆಗಳು 25 ದಿನಗಳ ಅವಧಿಯದ್ದಾಗಿವೆ. ಈಗ ಸೈಕಲ್ ಅಥವಾ ಎತ್ತುಗಳಿಂದ ಎಡೆ ಹೊಡೆದ ನಂತರ ಬೆಳೆ ಸಾಲುಗಳ ಮಧ್ಯದಲ್ಲಿ ಕಳೆ ತೆಗೆಯುವುದು ಅಗತ್ಯವಾಗಿದೆ ಎಂದಿದ್ದಾರೆ.

ಬಿತ್ತನೆ ಮಾಡುವಾಗ ಕೆಲ ರೈತರು ಬೆಳೆಗಳನ್ನು ದಟ್ಟವಾಗಿ ಬಿತ್ತಿರುವುದು ಕಂಡು ಬಂದಿದ್ದು, ಅಂಥವರು ಎರಡು ಸಸಿಗಳ ಮಧ್ಯೆ 10 ಸೆಂ.ಮಿ. ನಂತೆ ಅಂತರ ಬಿಟ್ಟು ಉಳಿದ ಮಧ್ಯ ಗಿಡಗಳನ್ನು ಕೀಳಬೇಕು. ಇದರಿಂದ ಸಸಿಗಳು ಸಧೃಡವಾಗಿ ಬೆಳೆಯಲು ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.

ಅಲ್ಲಲ್ಲಿ ಕಬ್ಬು ಮತ್ತು ತೊಗರಿ ಹೊಲದಲ್ಲಿ ಗೊಣ್ಣೆ ಹುಳುವಿನ ಬಾಧೆ ಕಂಡು ಬಂದಿದೆ. ನಿರ್ವಹಣೆಗಾಗಿ 200 ಲೀಟರ್ ನೀರಿನಲ್ಲಿ 2 ಕಿ.ಗ್ರಾಂ ಬೆಲ್ಲ, 28 ಗ್ರಾಂ ಮೆಟರಾಯಜಿಯಮ್ ಅನಿಸೊಡ್ಲಮೆ, 2 ಕಿ.ಗ್ರಾಂ ದ್ವಿದಳ ಧಾನ್ಯದ ಹಿಟ್ಟು ಮಿಶ್ರಣ ಮಾಡಿ ಮಿಶ್ರಣದಲ್ಲಿ ಎರಡು ದಿನ ಜೀವಿಗಳು ವೃದ್ಧಿಯಾಗಲು ಬಿಟ್ಟ ನಂತರ ಹೊಲದಲ್ಲಿ ಗೊಣ್ಣೆ ಹುಳುಗಳಿರುವ ಕಡೆ ಅಥವಾ ಬೆಳೆಗಳ ಸಾಲುಗಳಲ್ಲಿ ಸುರಿಯಬೇಕು ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮೇಲಿಂದ ಮೇಲೆ ಮಳೆ ಬೀಳುತ್ತಿರುವದರಿಂದ ರಸಹೀರುವ ಕೀಟ ಭಾಷ್ಪ ನುಸಿ ಅಥವಾ ಹೇನಿನ ಬಾಧೆ ಕಂಡು ಬಂದಿಲ್ಲ. ಹೀಗಾಗಿ ಈ ಕೀಟಗಳ ನಿರ್ವಹಣೆಗಾಗಿ ಯಾವುದೇ ಸಿಂಪರಣೆ ಅವಶ್ಯಕತೆ ಇಲ್ಲ. ಆದರೂ ರೈತರು ಹೆಸರು, ಉದ್ದು ಮತ್ತು ಹತ್ತಿ ಬೆಳೆಗಳನ್ನು ಆಗಾಗ ವೀಕ್ಷಣೆ ಮಾಡಿ ಕೀಟಗಳ ಇರುವಿಕೆ ದೃಢಪಡಿಸಿಕೊಂಡು ನಂತರ ಅಂತರವ್ಯಾಪಿ ಕೀಟನಾಶಕಗಳಾದ ಡೈಮಿಥೊಯೇಟ್ 1.7 ಮಿಲಿ ಲೀಟರ್ ಅಥವಾ ಇಮಿಡಾಕ್ಲೊಪ್ರಿಡ್ 0.3 ಮಿಲಿ ಲೀಟರ್ ಅಥವಾ ಎಸಿಟಾಮಪ್ರಿಡ್ 0.2 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ಹೇಳಿದ್ದಾರೆ.

ಕೆಲ ಕಡೆ ಜೋಳ ಮತ್ತು ಮೆಕ್ಕೆ ಜೋಳದಲ್ಲಿ ಸೈನಿಕ ಹುಳುವಿನ ಬಾಧೆ ಇರುವುದು ಕಂಡು ಬಂದಿದೆ. ನಿರ್ವಹಣೆಗಾಗಿ ಕೀಟನಾಶಕಗಳಾದ ಇಮಾಮೆಕ್ಟಿನ್ ಬೆಂಜೋಯೇಟ್ 0.4 ಗ್ರಾಂ ಅಥವಾ ಕ್ಲೊರ್ಯಾಂಟ್ರಿನಿರಿಪ್ರೋಟ್ 0.2 ಮಿಲಿ ಲೀಟರ್ ಅಥವಾ ಪ್ಲೂಬೆಂಡಿಮಾಯಿಡ್ 0.75 ಮಿಲಿ ಲೀಟರ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಇದು ಸಕಾಲವಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT