ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರಮಿಕರನ್ನು ಸಂಕಷ್ಟಕ್ಕೆ ದೂಡಿದ ‘ಕೊರೊನಾ’

ವ್ಯಾಪಾರವಿಲ್ಲದೆ ಕಷ್ಟ ಅನುಭವಿಸುತ್ತಿರುವ ‘ಕುಂಬಾರ’ರು: ನೆರವಿಗೆ ಮನವಿ
Last Updated 6 ಮೇ 2020, 11:09 IST
ಅಕ್ಷರ ಗಾತ್ರ

ಔರಾದ್ (ಬೀದರ್): ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕುಂಬಾರಿಕೆಯನ್ನು ನೆಚ್ಚಿಕೊಂಡ ತಾಲ್ಲೂಕಿನ ಅನೇಕ ಕುಟುಂಬಗಳು ಸಂಕಷ್ಟದಲ್ಲಿ ಸಿಲುಕಿವೆ.

ಪಟ್ಟಣದ ದೇಶಮುಖ ಗಲ್ಲಿಯಲ್ಲಿ 50ಕ್ಕೂ ಹೆಚ್ಚು ಕುಟುಂಬಗಳು ಕುಂಬಾರಿಕೆಯಲ್ಲಿ ತೊಡಗಿವೆ. ಗ್ರಾಮೀಣ ಪ್ರದೇಶದ ಬಹುಪಾಲು ಜನ ಈಗಲೂ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಮಣ್ಣಿನ ಮಡಿಕೆ ನೆಚ್ಚಿಕೊಂಡಿದ್ದಾರೆ. ಈ ಬಾರಿ ಲಾಕ್‌ಡೌನ್‌ನಿಂದ ಕಷ್ಟಪಟ್ಟು ಬೆವರು ಸುರಿಸಿ ತಯಾರಿಸಿದ ಮಡಿಕೆಗಳು ಮಾರಾಟವಾಗದೆ ಮನೆಯಲ್ಲಿಯೇ ಉಳಿದಿವೆ.

‘ದೂರದ ಪ್ರದೇಶದಿಂದ ಮಣ್ಣು ತಂದು ಇಡೀ ವರ್ಷ ತಯಾರಿಸಿದ ಮಡಿಕೆಯನ್ನು ಬೇಸಿಗೆಯಲ್ಲಿ ಮಾರಾಟ ಮಾಡಿ ಅದರಿಂದ ಬಂದ ದುಡ್ಡಿನಿಂದ ಬದುಕು ಸಾಗಿಸುತ್ತೇವೆ. ಆದರೆ ಈ ವರ್ಷ ತಯಾರಿಸಿದ ಮಡಿಕೆಗಳಲ್ಲಿ ಶೇ.10ರಷ್ಟೂ ಮಾರಾಟವಾಗಿಲ್ಲ. ಹೀಗಾಗಿ ನಾವು ತೀರಾ ನಷ್ಟ ಅನುಭವಿಸಿದ್ದೇವೆ. ಮುಂದೆ ಕುಟುಂಬ ನಿರ್ವಹಣೆ ಹೇಗೆ ಎಂಬುವ ಚಿಂತನೆಯಲ್ಲಿದ್ದೇವೆ’ ಎಂದು ಪಟ್ಟಣದ ಮಡಿಕೆ ವ್ಯಾಪಾರಿ ವಿಠಲ್ ಕುಂಬಾರ ಅಸಹಾಯಕತೆ ವ್ಯಕ್ತಪಡಿಸಿದರು.

‘ಗಡಿ ಭಾಗದ ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲೂ ನಮ್ಮ ಮಡಿಕೆಗಳಿಗೆ ಸಾಕಷ್ಟು ಬೇಡಿಕೆ ಇದೆ. ಪ್ರತಿ ವರ್ಷ ನಮ್ಮದೆ ಕತ್ತೆಗಳ ಮೇಲೆ ಹೋಯ್ದು ಮಾರಾಟ ಮಾಡುತ್ತಿದ್ದೆವು. ಕೈತುಂಬ ಹಣ ಬರುತ್ತಿತ್ತು. ಈಗ ಕೊರೊನಾ ಅನ್ನ ಕಿತ್ತುಕೊಂಡಿದೆ’ ಎಂದು ಅವರು ಅಳಲು ತೋಡಿಕೊಂಡರು.

‘ತಾಲ್ಲೂಕಿನ ಯನಗುಂದಾ, ಔರಾದ್, ಚಿಂತಾಕಿ, ಎಕಂಬಾದಲ್ಲಿ ಸುಮಾರು 300 ಕುಟುಂಬಗಳು ಕುಂಬಾರಿಕೆ ವೃತ್ತಿ ನೆಚ್ಚಿಕೊಂಡಿವೆ. ಲಾಕ್‌ಡೌನ್‌ನಿಂದ ಈ ಎಲ್ಲ ಕುಟುಂಬಗಳು ಆರ್ಥಿಕ ನಷ್ಟ ಅನುಭವಿಸಿವೆ. ಕುಂಬಾರ ಸಮಾಜದ ಅಭಿವೃದ್ಧಿಗೆ ಮೀಸಲಿಡಲಾದ ₹20 ಕೋಟಿ ಹಣವನ್ನು ಇವರ ಬದುಕಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಖರ್ಚು ಮಾಡಬೇಕು’ ಎಂದು ಬಾಲಾಜಿ ಕುಂಬಾರ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT