ಶನಿವಾರ, ಡಿಸೆಂಬರ್ 4, 2021
20 °C

ಬೀದರ್‌: ಸಮಯದ ಪಾಠ ಕಲಿಸಿದ ಕೋವಿಡ್

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಜಗತ್ತನ್ನೇ ತಲ್ಲಣಗೊಳಿಸಿದ ಕೋವಿಡ್‌ನಿಂದಾಗಿ ಜಾರಿಗೊಳಿಸಿದ ಲಾಕ್‌ಡೌನ್‌ ಪ್ರತಿಕಾ ಏಜೆಂಟರು ಹಾಗೂ ವಿತರಕರಲ್ಲಿ ಬಹಳಷ್ಟು ಬದಲಾವಣೆ ತಂದಿದೆ. ಸರ್ಕಾರ ಲಾಕ್‌ಡೌನ್‌ ಅವಧಿಯಲ್ಲಿ ಹೊರಡಿಸಿದ ಕಟ್ಟಳೆಗಳು ಕಾರ್ಯವಿಧಾನವನ್ನೂ ಪರಿವರ್ತಿಸಿಕೊಳ್ಳುವಂತೆ ಮಾಡಿವೆ.

ಕಲಬುರ್ಗಿಯಿಂದ ಬೆಳಿಗ್ಗೆ 4 ಗಂಟೆಗೆ ಪತ್ರಿಕೆಗಳು ಬೀದರ್‌ ಜಿಲ್ಲೆಗೆ ಬರುತ್ತಿದ್ದರೂ 6 ಗಂಟೆಯ ನಂತರವೇ ವಿತರಣೆಯಾಗುತ್ತಿದ್ದವು. ಲಾಕ್‌ಡೌನ್‌ ಅವಧಿಯಲ್ಲಿ ಹೊರಡಿಸಲಾದ ನಿಯಮಾವಳಿಗಳಿಂದಾಗಿ ವಿತರಕರು ಇನ್ನಷ್ಟು ಬೇಗ ಬಂದು ಮನೆ ಮನೆಗಳಿಗೆ ತಲುಪಲು ಸಾಧ್ಯವಾಗಿದೆ.

ಲಾಕ್‌ಡೌನ್‌ನಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಂಡು ವ್ಯಾಪಾರಿಗಳು, ಸರ್ಕಾರಿ ಹಾಗೂ ಅನೇಕ ಖಾಸಗಿ ಕಚೇರಿಗಳ ನೌಕರರು, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಮನೆಯಲ್ಲೇ ಇದ್ದ ಕಾರಣ ಪತ್ರಿಕೆಗಳನ್ನು ಬೇಗ ಬಯಸುತ್ತಿದ್ದರು. ಟಿವಿಗಳಲ್ಲಿ ಸುದ್ದಿ ಪ್ರಸಾರವಾದರೂ ನಿಖರ ಹಾಗೂ ವಿಸ್ತೃತ ಮಾಹಿತಿಗಾಗಿ ಪತ್ರಿಕೆಗಳನ್ನೇ ಓದಲು ಬಯಸುತ್ತಿದ್ದರು. ಅಂತಹ ಸಂದರ್ಭದಲ್ಲಿ ಪತ್ರಿಕೆಯ ಏಜೆಂಟರು ಹಾಗೂ ವಿತರಕರು ಬೆಳಗಾಗುವ ಮೊದಲೇ ಪತ್ರಿಕೆಗಳನ್ನು ತಲುಪಿಸಿ ಅವರ ಬೇಸರ ನೀಗುವಂತೆ ಮಾಡಿದ್ದಾರೆ.

ಜನ ಇನ್ನೂ ಮನೆಗಳಿಂದ ಹೊರಗೆ ಬರುವ ಮೊದಲೇ ಓದುಗರ ಕೈಗೆ ಪತ್ರಿಕೆಗಳನ್ನು ನೀಡಿ ಕೋವಿಡ್‌ ಸೋಂಕು ಹರಡುವಿಕೆ ಭಯ ಹೋಗುವಂತೆ ಮಾಡಿದ್ದಾರೆ. ಲಾಕ್‌ಡೌನ್‌ ಅವಧಿಯಲ್ಲಿ ವದಂತಿಗಳು ಹರಿದಾಡಿದರೂ ಅದೆಲ್ಲವೂ ಸುಳ್ಳು ಎಂದು ಧೈರ್ಯದಿಂದಲೇ ಹೇಳುವ ಮೂಲಕ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಜಿಲ್ಲೆಯ ಯಾವುದೇ ಏಜೆಂಟ್‌ ಹಾಗೂ ವಿತರಕರಿಗೆ ಕೋವಿಡ್ ಸೋಂಕು ತಗುಲಿಲ್ಲ. ಎಲ್ಲರೂ ಆರೋಗ್ಯದಿಂದಲೇ ಇದ್ದಾರೆ.

ವದಂತಿಗಳಿಂದಾಗಿಯೇ ಲಾಕ್‌ಡೌನ್‌ ಅವಧಿಯಲ್ಲಿ ಹೈದರಾಬಾದ್‌ನಿಂದ ಬರುತ್ತಿದ್ದ ಇಂಗ್ಲಿಷ್, ಉರ್ದು, ತೆಲುಗು ಹಾಗೂ ಲಾತೂರ್‌ನಿಂದ ಬರುತ್ತಿದ್ದ ಮರಾಠಿ ಪತ್ರಿಕೆಗಳು ನಿಂತು ಹೋದವು. ಕನ್ನಡ ಪತ್ರಿಕೆಗಳಿಗೆ ಮಾತ್ರ ಸಮಸ್ಯೆಯಾಗಿರಲಿಲ್ಲ. ಆದರೆ, ಕೆಲ ಓದುಗರು ಪತ್ರಿಕೆಗಳನ್ನು ಪಡೆದರೂ ಬಿಲ್‌ ಪಾವತಿಸಲು ಹಿಂದೇಟು ಹಾಕಿದರು. ಏಜೆಂಟರು ಓದುಗರ ಮೇಲೆ ಭಾರ ಹಾಕದೆ ಉದಾರ ಮನಸ್ಸು ತೋರಿ ಹಂತ ಹಂತವಾಗಿ ಹಣ ಪಡೆದುಕೊಂಡರು.

ಕೆಲವು ವಿತರಕರು ಸೋಂಕು ಹರಡುವ ಭಯದಿಂದ ಪತ್ರಿಕೆ ವಿತರಣೆಯನ್ನೇ ನಿಲ್ಲಿಸಿದ್ದರು. ಓದುಗರು ಪತ್ರಿಕೆ ಕಚೇರಿಗಳಿಗೆ ಫೋನ್‌ ಮಾಡಿದಾಗ ಕೆಲ ವಿತರಕರು ಮಾತ್ರ ಯಾವುದಕ್ಕೂ ಹಿಂಜರಿಯದೆ ಓದುಗರ ಮನೆಗಳಿಗೆ ಪತ್ರಿಕೆಗಳನ್ನು ತಲುಪಿಸಿ ಮೆಚ್ಚುಗೆಗೆ ಪಾತ್ರರಾದರು.

‘ನನ್ನ ಮನೆಗೆ ಮೊದಲು ಬೆಳಿಗ್ಗೆ 9 ಗಂಟೆಗೆ ಪತ್ರಿಕೆ ಬರುತ್ತಿತ್ತು. ಲಾಕ್‌ಡೌನ್‌ ಅವಧಿಯಲ್ಲಿ 10 ದಿನ ಪತ್ರಿಕೆಗಳೇ ಬರಲಿಲ್ಲ. ಪ್ರಜಾವಾಣಿ ಕಚೇರಿಗೆ ಫೋನ್‌ ಮಾಡಿ ವಿಚಾರಿಸಿದಾಗ ಎಲ್ಲ ಪತ್ರಿಕೆಗಳು ಬೀದರ್‌ ಜಿಲ್ಲೆಗೆ ಬರುತ್ತಿರುವುದು ಖಚಿತವಾಯಿತು. ಕೋವಿಡ್‌ ಅವಧಿಯಲ್ಲಿ ಪತ್ರಿಕೆ ವಿತರಕ ಗುರುನಾಥ ಅವರು ಬೆಳಿಗ್ಗೆ 6ಕ್ಕೆ ಪತ್ರಿಕೆ ತಲುಪಿಸಿದರು. ಅದೊಂದು ಮರೆಯಲಾಗದ ಕ್ಷಣ’ ಎಂದು ಓದುಗ ಶ್ರೀಕಾಂತ ಸ್ವಾಮಿ ಹೇಳುತ್ತಾರೆ.

‘ಓದುಗರಿಗೆ ಸಮಯಕ್ಕೆ ಸರಿಯಾಗಿ ಪತ್ರಿಕೆ ತಲುಪಿಸಿದರೆ ಮಾತ್ರ ಅವರಿಗೆ ತೃಪ್ತಿ ಇರುತ್ತದೆ. ನಮ್ಮ ಸೇವೆಯೂ ಸಾರ್ಥಕವಾಗುತ್ತದೆ. ಸಮಯಪ್ರಜ್ಞೆಯೊಂದಿಗೆ ಓದುಗರಿಗೆ ಪತ್ರಿಕೆಗಳನ್ನು ತಲುಪಿಸಿದರೆ ಓದುಗರು ಗೌರವ ಭಾವನೆಯಿಂದ ತಿಂಗಳ ಮೊದಲ ವಾರದಲ್ಲೇ ಬಿಲ್‌ ಪಾವತಿಸುತ್ತಾರೆ. ಇದು ನನ್ನ ಅನುಭವ’ ಎಂದು ಪತ್ರಿಕೆ ವಿತರಕ ಆನಂದ ಸ್ವಾಮಿ ಹೇಳುತ್ತಾರೆ.
 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು