ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ವಿಧಿಸಿದ ಕರ್ಫ್ಯೂ ಪಾಲನೆ ಮಾಡುವುದು ಕಡ್ಡಾಯ: ಪುರೋಹಿತ್‌

ಜನರ ಮನವೊಲಿಕೆಗೆ ಪುರಸಭೆ ಸಿಬ್ಬಂದಿ ಸಾಹಸ
Last Updated 4 ಮೇ 2021, 5:32 IST
ಅಕ್ಷರ ಗಾತ್ರ

ಚಿಟಗುಪ್ಪ: ಕೊರೊನಾ ವೈರಸ್ ಸೋಂಕು ತಡೆಯಲು ಪಟ್ಟಣದಲ್ಲಿ ಸೋಮವಾರ ನಾಗರಿಕರನ್ನು ಚದುರಿಸಲು, ವ್ಯಾಪಾರಿಗಳಿಗೆ ಅಂಗಡಿ ಮುಚ್ಚಿಸಲು ಪುರಸಭೆ ಸಿಬ್ಬಂದಿ ಹರಸಹಾಸ ಪಡಬೇಕಾಯಿತು.

ಪಟ್ಟಣದಲ್ಲಿ ನಿತ್ಯ ಬೆಳಿಗ್ಗೆ 10 ಗಂಟೆವರೆಗೂ ವ್ಯವಹಾರ ನಡೆಸಲು ಅವಕಾಶ ಒದಗಿಸಲಾಗಿದೆ. ಕರ್ಫ್ಯೂ ಸಮಯ ಆರಂಭ ಆಗುತ್ತಿದ್ದಂತೆ ನಾಗರಿಕರನ್ನು ಮನೆಗೆ ಕಳಿಸಲು, ಅಂಗಡಿ ಮುಚ್ಚಿಸಲು, ಬೀದಿ ಬದಿಯಲ್ಲಿ ಬೇರೆ ಊರುಗಳಿಂದ ಬಂದಿರುವ ಮಾವು ಮಾರಾಟ ಮಾಡುವ ಮಹಿಳೆಯರಿಗೆ ಊರುಗಳಿಗೆ ಕಳಿಸಲು ಪೊಲೀಸರು, ಪುರಸಭೆ ಸಿಬ್ಬಂದಿಯವರು ವಿವಿಧ ಬಗೆಯ ಕಸರತ್ತು ಮಾಡಬೇಕಾಗಿದೆ.

ಈ ನಿಟ್ಟಿನಲ್ಲಿ ಪುರಸಭೆ ಸಿಬ್ಬಂದಿ ಲಾಠಿ ಹಿಡಿದು ನಾಗರಿಕರಿಗೆ, ಬೀದಿ ಬದಿಯ ವ್ಯಾಪಾರಿಗಳಿಗೆ ಚದುರಿಸುವ ಕಾರ್ಯ ಮಾಡಿದರು.

‘ನಾಗರಿಕರು ಅಧಿಕಾರಿಗಳ ಮಾತುಗಳಿಗೆ ತಕ್ಷಣ ಸ್ಪಂದನೆ ಮಾಡುತ್ತಿಲ್ಲ. ಅಂತರ ಕಾಯ್ದುಕೊಳ್ಳುತ್ತಿಲ್ಲ. ಜನಜಂಗುಳಿ ಉಂಟಾಗುತ್ತಿದೆ. ಇದರಿಂದ ಕೋವಿಡ್‌ ಹೆಚ್ಚಾಗುವ ಭಯ ಕಾಡುತ್ತಿದೆ’ ಎಂದು ಹಿರಿಯ ನಾಗರಿಕರಾದ ವಿಠಲರಾವ್‌ ತಿಳಿಸಿದ್ದಾರೆ.

‘ನಾಗರಿಕರು ಸರ್ಕಾರದ ಕರ್ಫ್ಯೂ ಉದ್ದೇಶವನ್ನು ಅರಿತು ಸ್ಥಳೀಯ ಆಡಳಿತಕ್ಕೆ ಸಹಕಾರ ನೀಡಬೇಕು. ಕೋವಿಡ್‌ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಅಂತರ ಕಾಯ್ದುಕೊಂಡು, ಮಾಸ್ಕ್‌ ಧರಿಸಿ ನಿಗದಿತ ಸಮಯದ ಒಳಗಡೆ ನಿತ್ಯದ ವ್ಯವಹಾರ ಮುಗಿಸಿಕೊಂಡು ಬೇಗ ಮನೆ ಸೇರಬೇಕು’ ಎಂದು ಮುಖ್ಯಾಧಿಕಾರಿ ಶ್ರೀಪಾದ್‌ ಪುರೋಹಿತ್‌ ತಿಳಿಸಿದ್ದಾರೆ.

ಗ್ರಾಮಗಳಲ್ಲಿ ನಿರಾಸಕ್ತಿ: ತಾಲ್ಲೂಕಿನ ನಿರ್ಣಾ, ಉಡಬಾಳ್‌, ಕುಡಂಬಲ್‌, ಮನ್ನಾಎಖ್ಖೇಳಿ, ಬೇಮಳಖೇಡಾ ಇತರ ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ವೈರಸ್ ತಡೆಗೆ ಜಾಗೃತಿ ಕಾರ್ಯಕ್ರಮ ಅಷ್ಟಾಗಿ ನಡೆಯುತ್ತಿಲ್ಲ. ಸ್ಥಳೀಯ ಆಡಳಿತ ನಾಗರಿಕರಿಗೆ ಎಚ್ಚರಿಕೆ ನೀಡುವ ಕಾರ್ಯ ನಡೆಸುತ್ತಿಲ್ಲ ಎಂದು ನಾಗರಿಕರು ದೂರಿದ್ದಾರೆ.

ಮಾಧ್ಯಮಗಳಲ್ಲಿ ಬರುತ್ತಿರುವ ಮಾಹಿತಿಯನ್ನು ಆಧರಿಸಿ ಜನರು ಮುಂಜಾಗ್ರತೆ ಕ್ರಮ ವಹಿಸುತ್ತಿದ್ದಾರೆ. ಸಮಾರಂಭಗಳು ಯಾವುದೇ ಅಡೆತಡೆಯಿಲ್ಲದೆ ನಡೆಯುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT