ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

30 ಅಪರಾಧ ಪ್ರಕರಣ ಭೇದಿಸಿದ ಪೊಲೀಸರು: ₹75 ಲಕ್ಷ ಸ್ವತ್ತು ಜಪ್ತಿ, 36 ಜನರ ಬಂಧನ

Published 15 ಜೂನ್ 2024, 15:23 IST
Last Updated 15 ಜೂನ್ 2024, 15:23 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ದಾಖಲಾಗಿದ್ದ 30 ಅಪರಾಧ ಪ್ರಕರಣಗಳನ್ನು ಭೇದಿಸಿರುವ ಬೀದರ್‌ ಜಿಲ್ಲಾ ಪೊಲೀಸರು ₹75.13 ಲಕ್ಷ ಮೊತ್ತದ ಸ್ವತ್ತು ಜಪ್ತಿ ಮಾಡಿ, 36 ಜನ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಒಂದು ಸುಲಿಗೆ ಪ್ರಕರಣ, ಚಿನ್ನಾಭರಣ, ನಗದು ಕಳವಿನ 15 ಪ್ರಕರಣ, ಎಂಟು ದ್ವಿಚಕ್ರ ವಾಹನ ಕಳವು, ಒಂದು ಪಂಪ್‌ಸೆಟ್‌, ಮೂರು ಸೆಂಟ್ರಿಂಗ್‌ ಪ್ಲೇಟ್‌, ಒಂದು ಪ್ರಿಂಟ್‌ ಸೂಟ್‌, ಸ್ಪೀಕರ್‌, ಮೈಕ್‌, ಸೌಂಡ್‌ ಬಾಕ್ಸ್‌ಗಳ ಕಳವಿನ ಒಂದು ಪ್ರಕರಣ ಇದರಲ್ಲಿ ಸೇರಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ಅವರು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

₹26.72 ಲಕ್ಷ ಮೌಲ್ಯದ 495 ಗ್ರಾಂ ಚಿನ್ನಾಭರಣ, ₹18 ಸಾವಿರ ಬೆಲೆಬಾಳುವ 390 ಗ್ರಾಂ ಬೆಳ್ಳಿ, ₹24.70 ಲಕ್ಷದ ದ್ವಿಚಕ್ರ ವಾಹನಗಳು ಸೇರಿವೆ. ಬಸವಕಲ್ಯಾಣದ ಬಟ್ಟೆ ಮಳಿಗೆಯೊಂದರಲ್ಲಿ ಅದೇ ಮಳಿಗೆಯಲ್ಲಿ ಕೆಲಸಕ್ಕಿದ್ದ ವ್ಯಕ್ತಿ ಕಳವು ಮಾಡಿದ್ದ ₹19.50 ಲಕ್ಷ ಮೌಲ್ಯದ ಸೀರೆಗಳನ್ನು ಜಪ್ತಿ ಮಾಡಲಾಗಿದೆ. ಒಟ್ಟು 30 ಪ್ರಕರಣಗಳಲ್ಲಿ 15 ಮನೆಕಳ್ಳತನ ಸೇರಿವೆ. ಎಲ್ಲ ಕಡೆಗಳಲ್ಲಿ ‘ನಿಗರಾಣಿ’ ವ್ಯವಸ್ಥೆ ಜಾರಿಗೆ ತರಲಾಗಿದೆ. ಆದರೆ, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿಲ್ಲ. ಎಲ್ಲೆಲ್ಲಿ ಜನ ‘ನಿಗರಾಣಿ’ ವ್ಯವಸ್ಥೆಯ ಪ್ರಯೋಜನ ಪಡೆದಿದ್ದಾರೆ ಅಲ್ಲಿ ಕಳವು ಆಗಿಲ್ಲ ಎಂದು ತಿಳಿಸಿದರು.

ನಗರದ ಗುರುನಾನಕ ದೇವ್‌ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ನಡೆದ ಮಾರಾಮಾರಿ ಘಟನೆಗೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದೆ. ಕಾಲೇಜು ಆಡಳಿತ ಮಂಡಳಿಯವರು ಈಗಾಗಲೇ ಕೆಲ ವಿದ್ಯಾರ್ಥಿಗಳ ವಿರುದ್ಧ ಕ್ರಮ ಜರುಗಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾದ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಅದಕ್ಕೆ ಸಮನಾಗಿ ನಮ್ಮ ತನಿಖೆಯೂ ಮುಂದುವರೆದಿದೆ ಎಂದು ಹೇಳಿದರು.

ಮಹಾರಾಷ್ಟ್ರದ ಉಮರ್ಗಾ ಸಮೀಪ ಇತ್ತೀಚೆಗೆ ಬಿಜೆಪಿ ಮುಖಂಡ ಧೋಂಡಿರಾಮ ಚಾಂದಿವಾಲೆ ಅವರ ಮೃತ ಶರೀರ ಸಿಕ್ಕಿದೆ. ಈ ಸಂಬಂಧ ನಾನು ಉಸ್ಮಾನಾಬಾದ್‌ ಎಸ್ಪಿ ಅವರೊಂದಿಗೆ ಮಾತನಾಡಿದ್ದೇನೆ. ಚಾಂದಿವಾಲೆ ಅವರ ಕುಟುಂಬದವರನ್ನು ಉಸ್ಮಾನಾಬಾದ್‌ ಪೊಲೀಸರು ಕರೆಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತನಿಖೆ ನಂತರ ಘಟನೆಗೆ ಕಾರಣ ಗೊತ್ತಾಗಲಿದೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ ಈಗಾಗಲೇ 18 ರೌಡಿಗಳ ವಿರುದ್ಧ ಕ್ರಮ ಜರುಗಿಸಲಾಗಿದೆ. ಒಬ್ಬ ವ್ಯಕ್ತಿಯನ್ನು ಈಗಾಗಲೇ ಗೂಂಡಾ ಕಾಯ್ದೆಯಡಿ ಸೇರಿಸಿ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ. ಇಡೀ ರಾಜ್ಯದಲ್ಲಿ ಗೂಂಡಾ ಕಾಯ್ದೆಗೆ ಸೇರಿದ್ದು ಬೀದರ್‌ ಜಿಲ್ಲೆಯಿಂದ ಮಾತ್ರ ಎಂದು ತಿಳಿಸಿದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿಗಳಾದ ಮಹೇಶ ಮೇಘಣ್ಣನವರ, ಚಂದ್ರಕಾಂತ ಪೂಜಾರಿ, ಡಿವೈಎಸ್ಪಿಗಳಾದ ಜೆ.ಎಂ. ನ್ಯಾಮೆಗೌಡ, ಶಿವನಗೌಡ ಪಾಟೀಲ ಹಾಜರಿದ್ದರು.

ಆಟೋ ಚಾಲಕರಿಗೆ ₹37 ಸಾವಿರ ದಂಡ

‘ಚಾಲಕನ ಅಕ್ಕಪಕ್ಕದಲ್ಲಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಸಾರ್ವಜನಿಕರನ್ನು ಕೂರಿಸಿಕೊಂಡು ಹೋಗುತ್ತಿದ್ದ 375 ಆಟೋ ಚಾಲಕರಿಗೆ ಒಟ್ಟು ₹37500 ದಂಡ ವಿಧಿಸಲಾಗಿದೆ. ಮುಂಬದಿಯಲ್ಲಿ ಅಳವಡಿಸಿದ್ದ ಸೀಟ್‌ಗಳನ್ನು ತೆಗೆದು ಜಪ್ತಿ ಮಾಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ವಿತರಿಸಲಾಗಿದೆ. ಅಂಗನವಾಡಿಗಳಲ್ಲಿ ಮಕ್ಕಳು ಕುಳಿತುಕೊಳ್ಳಲು ಸಹಾಯವಾಗಲಿದೆ’ ಎಂದು ಎಸ್ಪಿ ಚನ್ನಬಸವಣ್ಣ ಎಸ್‌.ಎಲ್‌. ತಿಳಿಸಿದರು.

ಶಾಲಾ ಮಕ್ಕಳ ಸುರಕ್ಷತೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕಡಿಮೆ ಹಣಕ್ಕೆ ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಾರೆ ಎಂದು ಪೋಷಕರು ಆಟೋಗಳಲ್ಲಿ ಕಳಿಸುತ್ತಾರೆ. ಆದರೆ ಹೆಚ್ಚಿನ ಹಣದಾಸೆಗೆ ಆಟೋ ಚಾಲಕರು ಮುಂಬದಿಯಲ್ಲಿ ಸೀಟ್‌ಗಳನ್ನು ಜೋಡಿಸಿಅಪಾಯದಲ್ಲಿ ಕರೆದೊಯ್ಯುತ್ತಿದ್ದರು. ಇದು ನಿಯಮಕ್ಕೆ ವಿರುದ್ಧವಾಗಿರುವುದರಿಂದ ಕ್ರಮ ಕೈಗೊಳ್ಳಲಾಗಿದೆ. ಈ ರೀತಿ ಯಾರೂ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. 3.5 ಸಾವಿರ ಆಟೋ ಚಾಲಕರನ್ನು ಒಳಗೊಂಡಿರುವ ವಾಟ್ಸ್ಯಾಪ್‌ ಗ್ರುಪ್‌ ರಚಿಸಿ ಚಾಲಕರಿಗೆ ತಿಳಿವಳಿಕೆ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT