ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಪೀಳಿಗೆಯಲ್ಲಿ ಕನ್ನಡ ಪ್ರೇಮ ಬೆಳೆಸಿ

ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹೇಳಿಕೆ
Last Updated 1 ನವೆಂಬರ್ 2022, 12:38 IST
ಅಕ್ಷರ ಗಾತ್ರ

ಬೀದರ್‌: ‘ಇಂದಿನ ಆಧುನಿಕ ಶಿಕ್ಷಣ ಪದ್ಧತಿ ಹಾಗೂ ಇಂಗ್ಲಿಷ್‌ ಪ್ರಭಾವದಿಂದ ಕನ್ನಡಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಯುವ ಜನಾಂಗ ಹಾಗೂ ಮಕ್ಕಳಲ್ಲಿ ಕನ್ನಡದ ಬಗ್ಗೆ ಪ್ರೀತಿ ಹಾಗೂ ಕಾಳಜಿ ಮೂಡುವಂತೆ ಮಾಡಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯವಾಗಿದೆ’ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹೇಳಿದರು.

ಜಿಲ್ಲಾಡಳಿತದ ವತಿಯಿಂದ ನಗರದ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.


‘ಕನ್ನಡ ಭಾಷೆ ಸಮೃದ್ಧವಾಗಿದೆ ಎಂದು ಕೈಕಟ್ಟಿ ಕುಳಿತರೆ ಆಗದು. ಕನ್ನಡದ ಹಿರಿಮೆ, ಗರಿಮೆ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು.

ಭಾಷೆಯನ್ನು ಹೆಚ್ಚು ಹೆಚ್ಚು ಬಳಸಿದಾಗ ಮಾತ್ರ ಕನ್ನಡದ ಬೆಳವಣಿಗೆ ಸಾಧ್ಯ. ಮಕ್ಕಳಿಗೆ ಕನ್ನಡದ ಅಕ್ಷರ ಜ್ಞಾನ ನೀಡಬೇಕು. ಇದರಿಂದ ಭಾಷೆ ಗಟ್ಟಿಯಾಗಿ ನೆಲೆಗೊಳ್ಳಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.


‘ಗುದ್ಲೆಪ್ಪ ಹಳ್ಳಿಕೇರಿ, ಸಿದ್ದಪ್ಪ ಕಂಬಳಿ, ಗಂಗಾಧರರಾವ್ ದೇಶಪಾಂಡೆ, ರಂಗರಾವ್ ದಿವಾಕರ್, ಶ್ರೀನಿವಾಸ್ ಕೌಜಲಗಿ, ಕೆಂಗಲ್ ಹನುಮಂತಯ್ಯ, ಗೋರೂರು ರಾಮಸ್ವಾಮಿ ಅಯ್ಯಂಗಾರ್, ಎಸ್. ನಿಜಲಿಂಗಪ್ಪ, ಜಯದೇವಿ ಲಿಗಾಡೆ, ಭಾಲ್ಕಿಯ ಚನ್ನಬಸವ ಪಟ್ಟದೇವರು, ಪ್ರಭುರಾವ್ ಕಂಬಳಿವಾಲೆ, ಆರ್.ವಿ ಬಿಡಪ್, ಚಿಟಗುಪ್ಪದ ವಿಠ್ಠಲರಾವ್ ಹುಕಡಾಲ್, ಭೀಮಣ್ಣ ಖಂಡ್ರೆ ಸೇರಿದಂತೆ ಸಾವಿರಾರು ಕನ್ನಡಾಭಿಮಾನಿಗಳ ಹೋರಾಟದ ಫಲವಾಗಿ 1956ರ ನವೆಂಬರ್ 1ರಂದು ಮೈಸೂರು ರಾಜ್ಯ ಉದಯವಾಯಿತು’ ಎಂದು ತಿಳಿಸಿದರು.


‘ದೇವರಾಜ ಅರಸು 1973ರ ನವೆಂಬರ್ 1 ರಂದು ಗಟ್ಟಿ ನಿರ್ಧಾರ ಮಾಡಿ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರು ನಾಮಕರಣ ಮಾಡಿದರು. ವಿಜಯನಗರ ಸಾಮ್ರಾಜ್ಯ ಪತನವಾದ ಬಳಿಕ ಕನ್ನಡ ನಾಡು ಏಕೀಕರಣವಾಗುವುದಕ್ಕೆ 391 ವರ್ಷ ಕಾಯಬೇಕಾಯಿತು. ನಾಡಿನ ಏಕೀಕರಣಕ್ಕಾಗಿ ಹೋರಾಡಿದ ಅನೇಕ ಮಹನೀಯರನ್ನು ಇಂದು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದು ಹೇಳಿದರು.


‘ಕನ್ನಡ ನಾಡಿನ ಇತಿಹಾಸ, ಪರಂಪರೆ, ಸಂಸ್ಕೃತಿ ವಿಶಿಷ್ಟವಾಗಿದೆ. ರಾಷ್ಟ್ರಕವಿ ಕುವೆಂಪು ಅವರು ಹೇಳಿದಂತೆ ಕರ್ನಾಟಕವು ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಇಲ್ಲಿ ಹಲವಾರು ಧರ್ಮ, ಜಾತಿ, ಬುಡಕಟ್ಟು ಜನಾಂಗ ವಾಸವಾಗಿದ್ದಾರೆ.

ಭಾವೈಕ್ಯತೆಯ ನಾಡಾಗಿರುವ ಕರ್ನಾಟಕದಲ್ಲಿ ಎಲ್ಲರೂ ಸಾಮರಸ್ಯದಿಂದ ಬದುಕುತ್ತಿದ್ದಾರೆ, ಸರ್ವ ಧರ್ಮಗಳ ಸಮನ್ವಯತೆ, ಸೌಹಾರ್ದತೆ ಇಲ್ಲಿ ಮನೆ ಮಾಡಿವೆ’ ಎಂದು ತಿಳಿಸಿದರು.


‘ದೇಶಕ್ಕೆ ಕನ್ನಡ ಸಾಹಿತ್ಯದ ಕೊಡುಗೆ ಅಪಾರವಾಗಿದೆ. ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಬಂದಿರುವುದು ಹೆಮ್ಮೆಯ ವಿಷಯ. ಕನ್ನಡದ ಜಾನಪದ ಕಲೆಯೂ ಶ್ರೀಮಂತವಾಗಿದ್ದು, ಗ್ರಾಮೀಣ ಭಾಗದ ಜನಸಮುದಾಯದಿಂದಲೇ ಜನಪದ ಕಲೆ ಗಟ್ಟಿಯಾಗಿ ಬೇರೂರಿದೆ’ ಎಂದರು.

ಶಾಸಕ ರಹೀಮ್ ಖಾನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ರಾಜ್ಯ ಹಜ್ ಸಮಿತಿ ಅಧ್ಯಕ್ಷ ರೌಫೋದ್ದಿನ್‌ ಕಚೇರಿವಾಲೆ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಕಿಶೋರಬಾಬು, ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಎಂ., ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಹೇಶ ಮೇಘಣ್ಣವರ್, ಬೀದರ್‌ ಉಪ ವಿಭಾಗಾಧಿಕಾರಿ ಮೊಹಸಿನ್‌ ಮೋಮಿನ್, ತಹಶೀಲ್ದಾರ್ ಅಣ್ಣಾರಾವ್ ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂದೆ, ಅಬಕಾರಿ ಇಲಾಖೆಯ ಉಪ ಆಯುಕ್ತ ಮಂಜುನಾಥ ಇದ್ದರು. ಚೆನ್ನಬಸವ ಹೇಡೆ ಕಾರ್ಯಕ್ರಮ ನಿರೂಪಿಸಿದರು.


ಜಿಲ್ಲಾ ಮಟ್ಟದ ಪ್ರಶಸ್ತಿ ಪ್ರದಾನ

ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ವಿಜಯಲಕ್ಷ್ಮಿ ಕೌಟಗೆ, ವಿದ್ಯಾವತಿ ಬಲ್ಲೂರ, ಶಕೀಲ್ ಐ.ಎಸ್. (ಸಾಹಿತ್ಯ ಕ್ಷೇತ್ರ), ಶಿವಾನಿ ಸ್ವಾಮಿ (ಹಿಂದೂಸ್ತಾನಿ ಸಂಗೀತ ಕ್ಷೇತ್ರ), ಮಧುಕರ ಘೋಡ್ಕೆ (ಜಾನಪದ ಕ್ಷೇತ್ರ), ಸಂಗಪ್ಪ (ಆರೋಗ್ಯ ಕ್ಷೇತ್ರ), ದಿಲೀಪ್ ಗೀರ (ಶಿಕ್ಷಣ ಕ್ಷೇತ್ರ), ದೀಪಕ್ (ಕ್ರೀಡಾ ಕ್ಷೇತ್ರ), ಹಣಮಂತ (ಚಿತ್ರಕಲೆ ಕ್ಷೇತ್ರ), ಪ್ರಜಾವಾಣಿ ಜಿಲ್ಲಾ ಹಿರಿಯ ವರದಿಗಾರ ಚಂದ್ರಕಾಂತ ಮಸಾನಿ, ಪತ್ರಕರ್ತ ಬಸವರಾಜ ಕಾಮಶೆಟ್ಟಿ, ಟಿವಿ9 ಜಿಲ್ಲಾ ವರದಿಗಾರ ಸುರೇಶ ನಾಯಕ್ (ಮಾಧ್ಯಮ), ಡಾ.ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಷನ್ (ಸಂಘ ಸಂಸ್ಥೆ ಕ್ಷೇತ್ರ), ಪ್ರಶಾಂತ ಭಾವಿಕಟ್ಟಿ (ಸಮಾಜ ಸೇವೆ ಕ್ಷೇತ್ರ) ಅವರಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.


ಸಾಂಸ್ಕೃತಿಕ ಕಾರ್ಯಕ್ರಮ

ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಸರಸ್ವತಿ ಶಿಕ್ಷಣ ವಿಕಾಸ ಸಮಿತಿಯ ಮಂಗಲಪೇಟೆಯ ಮಡಿವಾಳೇಶ್ವರ ಪ್ರೌಢ ಶಾಲೆ, ಗೋರನಳ್ಳಿಯ ಶರಣಬಸವ ಪಬ್ಲಿಕ್ ಶಾಲೆ, ಗುಂಪಾದ ಇಂದಿರಾಬಾಯಿ ಗುರುತಪ್ಪ ಶೆಟಕಾರ್ ಪ್ರೌಢ ಶಾಲೆ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.

ಇದಕ್ಕೂ ಮೊದಲು ನಾಗರಿಕ ಪೊಲೀಸ್, ಮಹಿಳಾ ಪೊಲೀಸ್‌, ಜಿಲ್ಲಾ ಸಶಸ್ತ್ರಪಡೆ, ಗೃಹ ರಕ್ಷಕ ದಳ, ಅಬಕಾರಿ ಇಲಾಖೆ, ಅರಣ್ಯ ಇಲಾಖೆ, ಎನ್‌ಸಿಸಿ, ಸ್ಕೌಟ್ಸ್‌ ಮತ್ತು ಗೈಡ್ಸ್ ಸಿಬ್ಬಂದಿ ಆಕರ್ಷಕ ಪಥ ಸಂಚಲನ ನಡೆಸಿದರು.

ಭುವನೇಶ್ವರಿ ದೇವಿ ಮೆರವಣಿಗೆ:

ಬೀದರ್‌: ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ನಗರದ ಬಸವೇಶ್ವರ ವೃತ್ತದಿಂದ ನೆಹರೂ ಕ್ರೀಡಾಂಗಣದ ವರೆಗೆ ಭುವನೇಶ್ವರಿ ದೇವಿಯ ಭಾವಚಿತ್ರದ ಮೆರವಣಿಗೆ ನಡೆಯಿತು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ನೇತೃತ್ವದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳ ಪ್ರಮುಖರು, ಜಿಲ್ಲಾ ಮಟ್ಟದ ಅಧಿಕಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಅರಣ್ಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸ್ತಬ್ಧ ಚಿತ್ರಗಳು ಗಮನ ಸೆಳೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT