ಬುಧವಾರ, ಅಕ್ಟೋಬರ್ 28, 2020
18 °C
ಜೀವ ಕೈಲಿಡಿದು ರಸ್ತೆ ಗುಂಡಿಗಳಲ್ಲಿಯೇ ಸಂಚರಿಸಬೇಕಾದ ಅನಿವಾರ್ಯತೆ

ಔರಾದ್‌: ದಶಕದ ಸಂಕಷ್ಟಕ್ಕಿಲ್ಲ ಮುಕ್ತಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಔರಾದ್: ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಅವರ ಕ್ಷೇತ್ರ ವ್ಯಾಪ್ತಿಯ ವಿವಿಧ ರಸ್ತೆಗಳು ಹಾಳಾಗಿ ಸಂಚಾರಕ್ಕೆ ಜನ ತೊಂದರೆ ಅನುಭವಿಸುತ್ತಿದ್ದಾರೆ.

ತಾಲ್ಲೂಕು ಕೇಂದ್ರದ ಏಕೈಕ ಮುಖ್ಯರಸ್ತೆ ದಶಕದಿಂದ ದುರಸ್ತಿ ಕಂಡಿಲ್ಲ. ಜನ ಮೊಳಕಾಲುದ್ದದ ಗುಂಡಿಯಲ್ಲಿ ಓಡಾಡಬೇಕಾಗಿದೆ. ಪಟ್ಟಣದ ಜನ ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಸಾಕಷ್ಟು ಸಲ ಮನವಿ ಮಾಡಿದ್ದಾರೆ. ಆದರೂ ಬವಣೆ ತಪ್ಪಿಲ್ಲ. ಪಟ್ಟಣದ ಇತರೆ ರಸ್ತೆಗಳು ಸಹ ಹಾಳಾಗಿವೆ. ಈಚೆಗೆ ಸುರಿದ ಮಳೆಯಿಂದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಚರಂಡಿ ಹೂಳು ತುಂಬಿ ಗಬ್ಬು ನಾರುತ್ತಿದೆ. ಪಟ್ಟಣ ಪಂಚಾಯಿತಿ ಸದಸ್ಯರನ್ನು ಕೇಳಿದರೆ ಇನ್ನು ನಮ್ಮ ಆಡಳಿತ ಮಂಡಳಿ ರಚನೆಯಾಗಿಲ್ಲ. ಹೀಗಾಗಿ ನಮ್ಮ ಕೈಯಲ್ಲಿ ಏನು ಇಲ್ಲ ಎಂದು ಹೇಳುತ್ತಿದ್ದಾರೆ ಎಂದು ಜನ ತಿಳಿಸುತ್ತಾರೆ.

ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿಯ ರಸ್ತೆಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಕಳೆದ ಆರು ತಿಂಗಳಿನಿಂದ ಬೀದರ್-ಔರಾದ್ ರಸ್ತೆ ಹಾಳಾಗಿದೆ. ರಸ್ತೆ ಮೇಲೆ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ. ಇಂಥ ಕೆಟ್ಟ ರಸ್ತೆಯಿಂದ ಇಲ್ಲಿ ಆಡಳಿತ ವ್ಯವಸ್ಥೆ ಏನಾದರೂ ಇದೆಯಾ ಎಂದು ಜನ ಪ್ರಶ್ನಿಸುವಂತಾಗಿದೆ.

ಈಚೆಗೆ ಕೌಠಾ ಸೇತುವೆ ಬಳಿ ರಸ್ತೆ ಬಿರುಕು ಕಾಣಿಸಿಕೊಂಡ ಪರಿಣಾಮ ಬೀದರ್-ಔರಾದ್ ನಡುವಿನ ವಾಹನ ಸಂಚಾರ ಸ್ಥಗಿತ ಮಾಡಲಾಗಿದೆ. ಇನ್ನು ಜನವಾಡ ವಡಗಾಂವ್ ಮಾರ್ಗವಾಗಿ ಸಂಚರಿಸುವ ಬದಲಿ ರಸ್ತೆಯ ಸ್ಥಿತಿಯೂ ತುಂಬಾ ಕೆಟ್ಟದಾಗಿದೆ. ಅನಾರೋಗ್ಯದಂತಹ ತುರ್ತು ಸಂದರ್ಭದಲ್ಲಿ ಜನ ಬೀದರ್ ನಗರಕ್ಕೆ ಹೋಗಲು ಹರಸಹಾಸ ಪಡಬೇಕಾಗಿದೆ. ಸಮಯಕ್ಕೆ ಸರಿಯಾಗಿ ರೋಗಿಗಳು ಆಸ್ಪತ್ರೆಗೆ ಹೋಗುವ ಮೊದಲೇ ಪ್ರಾಣ ಕಳೆದುಕೊಳ್ಳುವ ಕೆಟ್ಟ ವ್ಯವಸ್ಥೆ ನಿರ್ಮಾಣ ಆಗಿದೆ.

‘ಪ್ರಭು ಚವಾಣ್ ಅವರು ಮೂರು ಬಾರಿ ಶಾಸಕರಾಗಿದ್ದಾರೆ. ಅವರು ಈಗ ಸಚಿವರಾಗಿ ಒಂದು ವರ್ಷ ಕಳೆದಿದೆ. ಕನಿಷ್ಠ ತಾಲ್ಲೂಕಿನ ರಸ್ತೆಗಳ ಗುಂಡಿ ತುಂಬಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಏಕೆ ಸಾಧ್ಯವಾಗುತ್ತಿಲ್ಲ’ ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ಧನರಾಜ ಮುಸ್ತಾಪುರ ದೂರಿದ್ದಾರೆ.

‘ಜನ ನಿತ್ಯ ಸರ್ಕಾರ ಹಾಗೂ ಸಚಿವರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ನಾವು ಸಹ ಸಾಕಷ್ಟು ಸಲ ಹೋರಾಟ ಮಾಡಿದ್ದೇವೆ. ಆದರೂ ಜನರ ಬೇಡಿಕೆಗೆ ಸ್ಪಂದನೆ ಸಿಗುತ್ತಿಲ್ಲ’ ಎಂದು ಅವರು ಅಸಮಾಧಾನ ಹೊರ ಹಾಕಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು