ಸೋಮವಾರ, ಡಿಸೆಂಬರ್ 5, 2022
22 °C
ಬಹುತೇಕ ತರಕಾರಿ ಬೆಲೆಗಳಲ್ಲಿ ಇಳಿಕೆ

ಏರಿದ ಬೆಳ್ಳುಳ್ಳಿ, ಮೆತ್ತಗಾದ ನುಗ್ಗೆಕಾಯಿ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಸಾಲು ಸಾಲು ಹಬ್ಬ ಆಚರಿಸಿ ಹಲವು ಬಗೆಯಲ್ಲಿ ಖರ್ಚು ಮಾಡಿಕೊಂಡಿರುವ ಗ್ರಾಹಕ ಖರೀದಿಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ. ಹೀಗಾಗಿ ಬಹುತೇಕ ತರಕಾರಿ ಬೆಲೆಗಳಲ್ಲಿ ಇಳಿಕೆಯಾಗಿದೆ.

 ಹಬ್ಬದಲ್ಲಿ ಖರ್ಚು ಮಾಡಿ ವಿಜೃಂಭಿಸಿ ನಂತರ ಗ್ರಾಹಕ ಸೋತು ಸುಣ್ಣವಾಗಿದ್ದಾನೆ. ಏರಿದ ಮೇಲೆ ಇಳಿಯಲೇ ಬೇಕು ಎನ್ನುವ ಪ್ರಕೃತಿ ನಿಯಮಕ್ಕೆ ತಲೆಬಾಗಿರುವ ನುಗ್ಗೆಕಾಯಿ ಮೆತ್ತಗಾಗಿದೆ. ಬೀನ್ಸ್‌ ಬಳಲಿದೆ. ತರಕಾರಿ ರಾಜ ಸಹ ತನ್ನ ಕಿರೀಟ ಕೆಳಗಿಟ್ಟಿದ್ದಾನೆ. ಹಿರೇಕಾಯಿ ಹಿರೇತನದ ಹೊಣೆಯಿಂದ ಸ್ವಲ್ಪ ಮಟ್ಟಿಗೆ ಹಿಂದೆ ಸರಿದಿದೆ.

ಈ ವಾರ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ ಮಾತ್ರ ಪ್ರತಿ ಕ್ವಿಂಟಲ್‌ಗೆ ₹ 1 ಸಾವಿರ ಹೆಚ್ಚಾಗಿದೆ. ಈರುಳ್ಳಿ, ಆಲೂಗಡ್ಡೆ, ಮೆಣಸಿನಕಾಯಿ, ಎಲೆಕೋಸು, ಟೊಮೆಟೊ, ಕರಿಬೇವು, ಪಾಲಕ್ ಬೆಲೆ ಸ್ಥಿರವಾಗಿದೆ.
ನುಗ್ಗೆಕಾಯಿ ಬೆಲೆ ಪ್ರತಿಕ್ವಿಂಟಲ್‌ಗೆ ₹ 12 ಸಾವಿರ, ಬದನೆಕಾಯಿ ₹ 6 ಸಾವಿರ, ಬೀನ್ಸ್ ₹ 5 ಸಾವಿರ, ಮೆಂತೆ ₹ 4 ಸಾವಿರ, ಹಿರೇಕಾಯಿ, ಡೊಣಮೆಣಸಿನ ಕಾಯಿ, ಹೂಕೋಸು, ಸಬ್ಬಸಗಿ ₹ 2 ಸಾವಿರ, ತುಪ್ಪದ ಹಿರೇಕಾಯಿ ₹ 3 ಸಾವಿರ, ಬೆಂಡೆಕಾಯಿ, ಚವಳೆಕಾಯಿ, ಸೌತೆಕಾಯಿ, ಕೊತಂಬರಿ ₹ 1 ಸಾವಿರ ಇಳಿಕೆಯಾಗಿದೆ.

‘ದೀಪಾವಳಿ, ತುಳಸಿ ವಿವಾಹ ಹಾಗೂ ಹುಣ್ಣಿಮೆಯ ನಂತರ ಅನೇಕ ತರಕಾರಿಗಳ ಬೆಲೆ ಕಡಿಮೆಯಾಗಿದೆ. ಮುಂದಿನ ಎರಡು ವಾರ ತರಕಾರಿ ಬೆಲೆ ಸಮನಾಂತರವಾಗಿ ಮುಂದುವರಿಯುವ ಸಾಧ್ಯತೆ ಇದೆ’ ಎಂದು ತರಕಾರಿ ವ್ಯಾಪಾರಿ ಶಿವಕುಮಾರ ಮಾಡಗೂಳ ಅಭಿಪ್ರಾಯ ಪಡುತ್ತಾರೆ.

ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಿಂದ ಈರುಳ್ಳಿ, ಬೆಳ್ಳುಳ್ಳಿ ಕಡಿಮೆ ಪ್ರಮಾಣದಲ್ಲಿ ಬಂದಿದೆ. ಇದೇ ಕಾರಣಕ್ಕೆ ಬೆಳ್ಳುಳ್ಳಿ ಬೆಲೆ ಏರಿದೆ. ಹೈದರಾಬಾದ್‌ನಿಂದ ಬೀನ್ಸ್, ಬೀಟ್‌ರೂಟ್‌, ಡೊಣ ಮೆಣಸಿನಕಾಯಿ, ತೊಂಡೆಕಾಯಿ, ಗಜ್ಜರಿ, ನುಗ್ಗೆಕಾಯಿ, ಚವಳೆಕಾಯಿ, ಪಡವಲಕಾಯಿ, ಹಾಗಲಕಾಯಿ ನಗರದ ತರಕಾರಿ ಸಗಟು ಮಾರುಕಟ್ಟೆಗೆ ಆವಕವಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.