ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್ತಿನಲ್ಲಿ ಕ್ರೈಸ್ತರಿಗೆ ಪ್ರಾತಿನಿಧ್ಯಕ್ಕೆ ಆಗ್ರಹ

Published 27 ಮೇ 2024, 15:58 IST
Last Updated 27 ಮೇ 2024, 15:58 IST
ಅಕ್ಷರ ಗಾತ್ರ

ಬೀದರ್‌: ವಿಧಾನ ಪರಿಷತ್ತಿನಲ್ಲಿ ಕ್ರೈಸ್ತ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕೆಂದು ಹೈದರಾಬಾದ್‌ ಕರ್ನಾಟಕ ಕ್ರಿಶ್ಚಿಯನ್‌ ಡೆವಲಪಮೆಂಟ್‌ ಅಸೋಸಿಯೇಷನ್‌ ವಕ್ತಾರ ಈ. ಕುಮಾರ ಒತ್ತಾಯಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರೈಸ್ತ ಸಮುದಾಯದ ಮುಖಂಡ, ಕಾಂಗ್ರೆಸ್‌ ಪಕ್ಷದ ಸಂಘಟನೆಗೆ ಅನೇಕ ವರ್ಷಗಳಿಂದ ಹಗಲಿರುಳು ಶ್ರಮಿಸುತ್ತಿರುವ ಎಸ್‌.ಪಿ. ರಾಜಶೇಖರ್‌ ಅವರನ್ನು ಕಾಂಗ್ರೆಸ್‌ ಪಕ್ಷವು ವಿಧಾನ ಪರಿಷತ್‌ ಸದಸ್ಯರಾಗಿ ನೇಮಕ ಮಾಡಬೇಕೆಂದು ಒತ್ತಾಯಿಸಿದರು.

ರಾಜಶೇಖರ್‌ ಅವರು 40 ವರ್ಷಗಳಿಂದ ಕಾಂಗ್ರೆಸ್‌ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಹಿರಿತನ, ಅನುಭವ ನೋಡಿಕೊಂಡು ಎಂಎಲ್‌ಸಿ ಮಾಡಬೇಕು ಎಂದರು.

ಅಸೋಸಿಯೇಷನ್‌ ಜಿಲ್ಲಾ ಕಾರ್ಯದರ್ಶಿ, ನಗರಸಭೆ ನಾಮನಿರ್ದೇಶಿತ ಸದಸ್ಯ ಸುನೀಲ ಬಚ್ಚನ್ ಮಾತನಾಡಿ, ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಕ್ರೈಸ್ತ ಧರ್ಮೀಯರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುತ್ತ ಬಂದಿದ್ದಾರೆ. ಕಾಂಗ್ರೆಸ್ ಅಂದರೆ ಕ್ರೈಸ್ತರು, ಕ್ರೈಸ್ತರೆಂದರೆ ಕಾಂಗ್ರೆಸ್‌ ಎಂಬಂತೆ ಅವಿನಾಭಾವ ಸಂಬಂಧವಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುಮಾರು 10 ಲಕ್ಷಕ್ಕೂ ಅಧಿಕ ಕ್ರೈಸ್ತ ಧರ್ಮೀಯರಿದ್ದಾರೆ. ಆದರೆ, ಸಮುದಾಯಕ್ಕೆ ರಾಜಕೀಯವಾಗಿ ಪ್ರಾತಿನಿಧ್ಯ ಸಿಕ್ಕಿಲ್ಲ. ಈ ಸಲ ಸಮಾಜಕ್ಕೆ ಪ್ರಾತಿನಿಧ್ಯ ಕೊಟ್ಟು ಆಗಿರುವ ಅನ್ಯಾಯ ಸರಿಪಡಿಸಬೇಕೆಂದು ಒತ್ತಾಯಿಸಿದರು.

ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಅನಿಲ ನಿಡೋದಾ ಮಾತನಾಡಿ, ಸಮಾಜಕ್ಕೆ ಕಾಂಗ್ರೆಸ್‌ ಪ್ರಾತಿನಿಧ್ಯ ಕೊಡದಿದ್ದರೆ ‌ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಇದರ ಪರಿಣಾಮ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯ ಮೇಲೆ ಆಗಬಹುದು ಎಂದು ಎಚ್ಚರಿಕೆ ನೀಡಿದರು.

ಪ್ರಮುಖರಾದ ಶರದ್ ಘಂಟೆ, ಸಾವನ್ ಕೋಟೆ, ತಿಮೋತಿ ಸೈಮನ್, ರಾಬರ್ಟ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT