ಪ್ಯಾರಾಮೆಡಿಕಲ್, ನರ್ಸಿಂಗ್ ಅಭ್ಯರ್ಥಿಗಳಿಗೆ ಬೇಡಿಕೆ

7
ವೃತ್ತಿ ಸಮಾಲೋಚನಾ ಶಿಬಿರದಲ್ಲಿ ಪ್ರಾಚಾರ್ಯ ರಾಜಕುಮಾರ ಮಾಳಗೆ ಅಭಿಮತ

ಪ್ಯಾರಾಮೆಡಿಕಲ್, ನರ್ಸಿಂಗ್ ಅಭ್ಯರ್ಥಿಗಳಿಗೆ ಬೇಡಿಕೆ

Published:
Updated:
Deccan Herald

ಬೀದರ್: ‘ಪ್ಯಾರಾಮೆಡಿಕಲ್ ಹಾಗೂ ನರ್ಸಿಂಗ್ ಕೋರ್ಸ್ ಪೂರೈಸಿದ ಅಭ್ಯರ್ಥಿಗಳಿಗೆ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಬೇಡಿಕೆ ಇದೆ’ ಎಂದು ಸರ್ಕಾರಿ ಸ್ಕೂಲ್ ಆಫ್ ನರ್ಸಿಂಗ್ ಪ್ರಾಚಾರ್ಯ ರಾಜಕುಮಾರ ಮಾಳಗೆ ಹೇಳಿದರು.

ಸರ್ಕಾರಿ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರು ಹಾಗೂ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರಿಗೆ ನಗರದ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ಪ್ಯಾರಾಮೆಡಿಕಲ್ ಹಾಗೂ ನರ್ಸಿಂಗ್ ಕೋರ್ಸ್‌ಗಳ ಕುರಿತ ವೃತ್ತಿ ಸಮಾಲೋಚನಾ ಶಿಬಿರದಲ್ಲಿ ಅವರು ಮಾತನಾಡಿದರು.

‘ಖಾಸಗಿ ಹಾಗೂ ಸರ್ಕಾರಿ ವಲಯದಲ್ಲಿ ಬಹಳಷ್ಟು ಉದ್ಯೋಗ ಅವಕಾಶಗಳು ಇವೆ. ದೇಶ, ವಿದೇಶದ ಆಸ್ಪತ್ರೆಗಳಲ್ಲಿ ನೌಕರಿ ಪಡೆಯಬಹುದಾಗಿದೆ’ ಎಂದು ತಿಳಿಸಿದರು.

‘ನರ್ಸಿಂಗ್ ಕೋರ್ಸ್ ಮುಗಿಸಿದವರಿಗೆ ಸರ್ಕಾರಿ ಉದ್ಯೋಗ ದೊರಕುವವರೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಮಾಸಿಕ ₹ 20 ಸಾವಿರ ವೇತನ ಕೊಡಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಇದು ಈಗಾಗಲೇ ಕೇರಳ ಹಾಗೂ ದೆಹಲಿಯಲ್ಲಿ ಜಾರಿಗೂ ಬಂದಿದೆ’ ಎಂದರು.

‘ಪ್ಯಾರಾಮೆಡಿಕಲ್‌ನಲ್ಲಿ ಎಸ್ಸೆಸ್ಸೆಲ್ಸಿ ಉತ್ತೀರ್ಣರಾದವರಿಗೆ ಮೂರು ವರ್ಷಗಳ ಹಾಗೂ ಪಿಯು ತೇರ್ಗಡೆಯಾದವರಿಗೆ ಎರಡು ವರ್ಷಗಳ ಕೋರ್ಸ್‌ಗಳು ಇವೆ. ಡಿಪ್ಲೊಮಾ ಇನ್ ಮೆಡಿಕಲ್ ಲ್ಯಾಬೊರೆಟರಿ ಟೆಕ್ನಾಲಜಿ, ಡಿಪ್ಲೊಮಾ ಇನ್ ಎಕ್ಸ್‌ರೆ ಟೆಕ್ನಾಲಜಿ, ಡಿಪ್ಲೊಮಾ ಇನ್ ಹೆಲ್ತ್ ಇನ್‌ಸ್ಪೆಕ್ಟರ್‌, ಡಿಪ್ಲೊಮಾ ಇನ್ ಮೆಡಿಕಲ್ ರೆಕಾರ್ಡ್ಸ್‌ ಟೆಕ್ನಾಲಜಿ, ಡಿಪ್ಲೊಮಾ ಇನ್ ಅಪ್ಥಾಲ್ಮಿಕ್ ಟೆಕ್ನಾಲಜಿ ಹಾಗೂ ಡಿಪ್ಲೊಮಾ ಇನ್ ಆಪರೇಷನ್ ಥಿಯೇಟರ್ ಟೆಕ್ನಾಲಜಿ ಕೋರ್ಸ್‌ಗಳಲ್ಲಿ ಅಧ್ಯಯನ ಮಾಡಬಹುದಾಗಿದೆ’ ಎಂದು ವಿವರಿಸಿದರು.

‘ಪಿಯುಸಿಯಲ್ಲಿ ವಿಜ್ಞಾನ, ಕಲೆ ಹಾಗೂ ವಾಣಿಜ್ಯ ವಿಭಾಗದಲ್ಲಿ ಇಂಗ್ಲಿಷ್‌ ಅನ್ನು ಒಂದು ವಿಷಯವಾಗಿ ತೆಗೆದುಕೊಂಡು ಉತ್ತೀರ್ಣರಾದ ವಿದ್ಯಾರ್ಥಿಗಳು ಜಿಎನ್‍ಎಂ ಕೋರ್ಸ್‌ಗೆ ಪ್ರವೇಶ ಪಡೆಯಬಹುದು. ಮೂರು ವರ್ಷಗಳ ಅವಧಿಯ ಕೋರ್ಸ್ ವಾರ್ಷಿಕ ಶುಲ್ಕ ಕೇವಲ ₹ 800 ಇದೆ. ವಿದ್ಯಾರ್ಥಿಗಳಿಗೆ ಉಚಿತ ವಸತಿ ಸೌಲಭ್ಯದ ಜತೆಗೆ ಶಿಷ್ಯವೇತನವೂ ದೊರೆಯಲಿದೆ. ಇಲ್ಲಿಯ ಸ್ಕೂಲ್ ಆಫ್ ನರ್ಸಿಂಗ್‌ನಲ್ಲಿ ಒಟ್ಟು 100 ಸ್ಥಾನಗಳು ಲಭ್ಯ ಇವೆ. ಜಿಲ್ಲೆಯ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು’ ಎಂದು ಹೇಳಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿ.ಎಸ್. ರಗಟೆ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಎಸ್. ಮಾತನಾಡಿದರು. ‘ಬ್ರಿಮ್ಸ್’ ಪ್ರಭಾರ ನಿರ್ದೇಶಕಿ ಡಾ.ಪಲ್ಲವಿ ಕೇಸರಿ ಉದ್ಘಾಟಿಸಿದರು. ಪ್ಯಾರಾ ಮೆಡಿಕಲ್ ಕಾಲೇಜು ಸಮನ್ವಯಾಧಿಕಾರಿ ಡಾ. ಪರಮೇಶ್ವರಪ್ಪ ಕೆ.ಡಿ, ಡಿಡಿಪಿಐ ಉಮೇಶ ಎಸ್.ಶಿರಹಟ್ಟಿಮಠ ಇದ್ದರು.

ಪ್ರತಿ ವರ್ಷ ಪ್ಯಾರಾಮೆಡಿಕಲ್, ನರ್ಸಿಂಗ್ ಕೋರ್ಸ್‌ನ ಅನೇಕ ಸ್ಥಾನಗಳು ಖಾಲಿ ಉಳಿಯುತ್ತಿರುವ ಕಾರಣ ಕೋರ್ಸ್‌ಗಳ ಕುರಿತು ಜನಜಾಗೃತಿ ಮೂಡಿಸಲಾಗುತ್ತಿದೆ
- ರಾಜಕುಮಾರ ಮಾಳಗೆ, ಪ್ರಾಚಾರ್ಯ, ಸರ್ಕಾರಿ ಸ್ಕೂಲ್ ಆಫ್ ನರ್ಸಿಂಗ್

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !