ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕಾಂಕ್ಷಿಗಳ ಜತೆ ಚರ್ಚಿಸಿ ಮಹತ್ವದ ನಿರ್ಣಯ: ಮಲ್ಲಿಕಾರ್ಜುನ ಖೂಬಾ

ಉಪ ಚುನಾವಣೆ ಬಿಜೆಪಿ ಟಿಕೆಟ್ ವಂಚಿತ ಮಲ್ಲಿಕಾರ್ಜುನ ಖೂಬಾ ಸ್ಪಷ್ಟನೆ
Last Updated 28 ಮಾರ್ಚ್ 2021, 4:15 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ಈ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಟಿಕೆಟ್‌ನ 16 ಆಕಾಂಕ್ಷಿಗಳ ಜತೆ ಚರ್ಚಿಸಿ ಮಾರ್ಚ್ 30ರಂದು ಮಹತ್ವದ ನಿರ್ಣಯ ತೆಗೆದುಕೊಳ್ಳಲಾಗುವುದು’ ಎಂದು ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಸ್ಪಷ್ಟಪಡಿಸಿದ್ದಾರೆ.

ನಗರದ ತಮ್ಮ ನಿವಾಸದಲ್ಲಿ ಶನಿವಾರ ಆಯೋಜಿಸಿದ್ದ ಬೆಂಬಲಿಗರ ಸಭೆಯಲ್ಲಿ ಅವರು ಮಾತನಾಡಿದರು.

‘ಯಡಿಯೂರಪ್ಪನವರ ಆಹ್ವಾನಕ್ಕೆ ಮಣಿದು ಕಳೆದ ಚುನಾವಣೆಯಲ್ಲಿ ಬಿಜೆಪಿ ಸೇರ್ಪಡೆಯಾದೆ. ಸೋಲು ಅನುಭವಿಸಿದರೂ 45 ಸಾವಿರ ಮತಗಳನ್ನು ಪಡೆದೆ. ಹೀಗಾಗಿ ಉಪ ಚುನಾವಣೆಯಲ್ಲಿಯೂ ಟಿಕೆಟ್ ದೊರಕಲಿದೆ ಎಂಬ ಭರವಸೆ ಇತ್ತು. ನನ್ನ ಜತೆ ಸ್ಥಳೀಯರಾದ 16 ಜನರು ಟಿಕೆಟ್ ಕೇಳಿದ್ದರು. ಅವರಿಗಾದರೂ ಸ್ಪರ್ಧಿಸಲು ಅವಕಾಶ ನೀಡಿ ಎಂದು ವಿನಂತಿಸಲಾಗಿತ್ತು. ಆದರೂ, ಹೊರಗಿನವರಿಗೆ ಟಿಕೆಟ್ ನೀಡಲಾಗಿದೆ. ಸ್ಥಳೀಯರಾದ 16 ಜನರಲ್ಲಿ ಹಾಗೂ ಕ್ಷೇತ್ರದಲ್ಲಿನ 2.50 ಲಕ್ಷ ಮತದಾರರಲ್ಲಿ ಯಾರೂ ಪಕ್ಷವರಿಗೆ ಅರ್ಹರಾಗಿ ಕಾಣಲಿಲ್ಲವೇ’ ಎಂದು ಪ್ರಶ್ನಿಸಿದರು.

‘ಅನ್ಯ ಜಿಲ್ಲೆಯವರಿಗೆ ಏಕೆ ಟಿಕೆಟ್ ನೀಡಲಾಯಿತು ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಟಿಕೆಟ್ ನೀಡಿಕೆಯಲ್ಲಿ ಡೀಲ್ ನಡೆದಿದ್ದು, ದೊಡ್ಡ ಮಟ್ಟದ ಹಣ ಸಂದಾಯ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಪಕ್ಷದವರು ಸ್ಪಷ್ಟನೆ ನೀಡಬೇಕಾಗಿದೆ. ಮಾರ್ಚ್ 30 ರಂದು ಅಕ್ಕಮಹಾದೇವಿ ಕಾಲೇಜು ಆವರಣದಲ್ಲಿ ನಡೆಯುವ ಸಭೆಯಲ್ಲಿ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಅಂದು ಮುಂದಿನ ನಡೆ ಏನೆಂಬುದನ್ನು ನಿರ್ಧರಿಸಲಾಗುವುದು’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಗುಂಡುರೆಡ್ಡಿ, ಡಾ.ಪೃಥ್ವಿರಾಜ ಬಿರಾದಾರ, ನೀಲೇಶ ಖೂಬಾ, ಸಂಜೀವ ಗಾಯಕವಾಡ, ಶಿವಕುಮಾರ ಬಿರಾದಾರ, ಕಾಳಿದಾಸ ಜಾಧವ ಪಾಲ್ಗೊಂಡಿದ್ದರು.

ಸಭೆಗೆ ಸಲಗರ ಹಾಜರು: ಸಭೆಯ ಮಧ್ಯೆ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಅವರು ಬಂದು ಮಲ್ಲಿಕಾರ್ಜುನ ಖೂಬಾ ಅವರ ಕಾಲುಮುಟ್ಟಿ ನಮಸ್ಕರಿಸಿದರು. ಇಬ್ಬರ ಮಧ್ಯೆ ಯಾವುದೇ ಮಾತುಕತೆ ನಡೆಯಲಿಲ್ಲ. ಮಲ್ಲಿಕಾರ್ಜುನ ಖೂಬಾ ಹಾಗೂ ನೆರೆದ ಎಲ್ಲರನ್ನೂ ಕೈ ಮುಗಿದು ನಮಸ್ಕರಿಸಿದ ತಕ್ಷಣದಲ್ಲಿಯೇ ಶರಣು ಅವರು ಅಲ್ಲಿಂದ ನಿರ್ಗಮಿಸಿದರು. ಈ ಸಮಯದಲ್ಲಿ ಕಾರ್ಯಕರ್ತರು ಮಲ್ಲಿಕಾರ್ಜುನ ಖೂಬಾ ಅವರಿಗೆ ಜಯವಾಗಲಿ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದ್ದರಿಂದ ಕೆಲಕಾಲ ಗದ್ದಲವುಂಟಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT