ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಂತಿಯುತ ಬಕ್ರೀದ್‌ ಹಬ್ಬ ಆಚರಣೆಗೆ ಸಲಹೆ: ಆಕಳು, ಒಂಟೆಗಳ ವಧೆಗಿಲ್ಲ ಅವಕಾಶ

Published 11 ಜೂನ್ 2024, 15:40 IST
Last Updated 11 ಜೂನ್ 2024, 15:40 IST
ಅಕ್ಷರ ಗಾತ್ರ

ಬೀದರ್‌: ‘ಬಕ್ರೀದ್‌ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು. ಬೇರೆಯವರ ಆಚಾರ–ವಿಚಾರಗಳಿಗೆ ಧಕ್ಕೆ ಬರದಂತೆ ಹಬ್ಬಗಳನ್ನು ಆಚರಿಸುವಂತಾಗಬೇಕು’ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಸಲಹೆ ನೀಡಿದರು.

ನಗರದಲ್ಲಿ ಮಂಗಳವಾರ ಪ್ರಾಣಿ ದಯಾ ಸಂಘ ಹಾಗೂ ಬಕ್ರೀದ್‌ ಹಬ್ಬದ ಆಚರಣೆ ಅಂಗವಾಗಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ನಿಯಮದ ಪ್ರಕಾರ, ಆಕಳು, ಆಕಳ ಕರು, ಎತ್ತು ಮತ್ತು ಒಂಟೆಗಳನ್ನು ವಧೆ ಮಾಡುವಂತಿಲ್ಲ. 13 ವರ್ಷ ಮೇಲಿನ ಎಮ್ಮೆ, ಕೋಣಗಳನ್ನು ಪಶು ಸಂಗೋಪನಾ ಇಲಾಖೆಯ ವೈದ್ಯಾಧಿಕಾರಿಗಳ ದೃಢೀಕರಣ ಪಡೆದು ವಧೆ ಮಾಡಬೇಕು ಎಂದು ಹೇಳಿದರು.

ಕಸಾಯಿ ಖಾನೆಗಳಲ್ಲಿ ವಧೆ ಮಾಡಿದ ನಂತರ ಪ್ರಾಣಿಗಳ ಅವಶೇಷಗಳನ್ನು ನಗರಸಭೆಯಿಂದ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ನಿಗದಿಪಡಿಸಿದ ಸ್ಥಳದಲ್ಲಿ ಗುಂಡಿ ತೋಡಿ ಮುಚ್ಚಬೇಕೆಂದು ಪೌರಾಯುಕ್ತರಿಗೆ ಸೂಚಿಸಿದರು.

ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ಪ್ರಾಣಿಗಳಿರುವ ಗೋಶಾಲೆಗಳಿಗೆ ಅನುದಾನ ಬಿಡುಗಡೆಗೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ಮಾತನಾಡಿ, ಜಿಲ್ಲೆಯಲ್ಲಿ ಅಕ್ರಮ ಜಾನುವಾರು ಸಾಗಣೆ ಮೇಲೆ ನಿಗಾ ವಹಿಸಬೇಕು. ವನಮಾರಪಳ್ಳಿ, ಕಮಲನಗರ ಗಡಿಯಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿ, ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕೆಂದು ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.

ರಸ್ತೆಗಳಲ್ಲಿ ಓಡಾಡುವ ಬಿಡಾಡಿ ದನಗಳನ್ನು ಹಿಡಿದು ಅವುಗಳಿಗೆ ಕಿವಿಯೋಲೆಗಳನ್ನು ಹಾಕಿ ಗುರುತಿಸಿ, ಗೋಶಾಲೆಗಳಿಗೆ ಬಿಡಬೇಕು. ಬಕ್ರೀದ್‌ ಹಬ್ಬಕ್ಕೂ ಮುಂಚೆ ಖಾನಾಪೂರ ಮತ್ತು ಔರಾದ್‌ ಸಂತೆಗಳ ಬಗ್ಗೆ ಜಾಗ್ರತೆ ವಹಿಸಬೇಕು. ಸಾರಿಗೆ ಇಲಾಖೆ ಅಧಿಕಾರಿಗಳು ಎಲ್ಲ ತಾಲ್ಲೂಕುಗಳಲ್ಲಿ ಪ್ರಾಣಿ ಸಾಗಣೆ ಬಗ್ಗೆ ನಿಗಾ ವಹಿಸಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ. ಗಿರೀಶ ಬದೋಲೆ, ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ನರಸಪ್ಪ, ನಗರಸಭೆ ಆಯುಕ್ತ ಶಿವರಾಜ ರಾಠೋಡ, ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರಗೇಂದ್ರ, ಜಿಲ್ಲೆಯ ಎಲ್ಲ ತಾಲ್ಲೂಕಿನ ಪಶು ವೈದ್ಯಾಧಿಕಾರಿಗಳು, ಗೋಶಾಲೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT