ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಜನಾಥಯ್ಯಗೆ ಜಿಲ್ಲಾ ಜಾನಪದ ಪ್ರಶಸ್ತಿ

ತೊಗಲೂರನ ಭಜನಾ, ನಾಟಕ ಕಲಾವಿದನಿಗೆ ಪ್ರಶಸ್ತಿಯ ಗರಿ
Last Updated 4 ಜನವರಿ 2021, 13:41 IST
ಅಕ್ಷರ ಗಾತ್ರ

ಬಸವಕಲ್ಯಾಣ: ಇಲ್ಲಿಗೆ ಸಮೀಪದ ಹುಲಸೂರ ತಾಲ್ಲೂಕಿನ ತೊಗಲೂರ ಗ್ರಾಮದ ವೈಜನಾಥಯ್ಯ ಸಂಗಯ್ಯ ಮಠಪತಿ ಭಜನೆ, ನಾಟಕ ಕಲಾವಿದರಾಗಿದ್ದು, ಇವರಿಗೆ ಜಾನಪದ ಅಕಾಡೆಮಿಯ ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಜಾನಪದ ಕಲಾವಿದ ಪ್ರಶಸ್ತಿ ದೊರೆತಿದೆ.

ಗ್ರಾಮದಲ್ಲಿ ಬಸವೇಶ್ವರ ಭಜನಾ ಸಂಘ ಸ್ಥಾಪಿಸಿ ತಿಂಗಳಿಗೊಮ್ಮೆ ತಪ್ಪದೇ ಭಜನೆ ಮಾಡುತ್ತಾರೆ. 70 ವರ್ಷದವರಾದ ಇವರು ಚಿಕ್ಕಂದಿನಿಂದಲೇ ಜಾನಪದ ಹಾಡುಗಾರಿಕೆ, ಭಜನೆ, ನಾಟಕದಲ್ಲಿ ಆಸಕ್ತಿ ವಹಿಸಿ ಹಾರ್ಮೋನಿಯಂ ಹಾಗೂ ತಬಲಾ ಕೂಡ ಕಲಿತಿದ್ದಾರೆ. ಘಾಟಬೋರೋಳದ ಭೀಮಣ್ಣ ಮಾಸ್ತರ ಹಾಗೂ ಅಣ್ಣ ರಾಮಲಿಂಗಯ್ಯ ಅವರಿಂದ ಭಜನಾ ಪದಗಳನ್ನು ಕಲಿತಿದ್ದಾರೆ. ಹತ್ತಾರು ನಾಟಕಗಳಲ್ಲಿ ಪಾತ್ರ ಮಾಡಿದ್ದಾರೆ. ಮುಚಳಂಬ ನಾಗಭೂಷಣ ಶಿವಯೋಗಿ ಹಾಗೂ ಇತರರ ಮೇಲೆ ಅನೇಕ ಪದ್ಯಗಳನ್ನು ರಚಿಸಿದ್ದಾರೆ.

‘ತಂದೆ ಸಂಗಯ್ಯನವರು ಜಾನಪದ ಕಲಾವಿದ ಆಗಿದ್ದರು. ಅನೇಕ ನಾಟಕಗಳಲ್ಲಿ ಪಾತ್ರ ಮಾಡಿದ್ದರು. ಸ್ವತಃ ಭಜನಾ ಪದ್ಯ ರಚಿಸಿದ್ದರು. ಅನುಭವ, ತತ್ವಪದ ಹಾಡುತ್ತಿದ್ದರು. ಅವರ ಪ್ರೇರಣೆಯಿಂದಲೇ ನಾನೂ ಜಾನಪದ ಕಲಾವಿದನಾದೆ. ಜಾತ್ರೆ, ಹಬ್ಬ, ಹುಣ್ಣಿಮೆ, ಅಮಾವಾಸ್ಯೆಗೆ ಹಾಗೂ ಮನೆ ಕಾರ್ಯಕ್ರಮಗಳಲ್ಲಿನ ಪಾಲ್ಗೊಳ್ಳುತ್ತೇನೆ. ಪತ್ನಿ, ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿಯರ ಸಹಕಾರವೂ ಬಹಳಷ್ಟಿದೆ’ ಎಂದು ವೈಜನಾಥಯ್ಯ ಮಠಪತಿ ಹೇಳಿದ್ದಾರೆ.

‘ನಾನು ಚಿಕ್ಕಂದಿನಿಂದಲೂ ಇವರ ಭಜನೆ ಪದಗಳನ್ನು ಕೇಳುತ್ತಿದ್ದೇನೆ. ಮರಾಠಿ, ಕನ್ನಡ, ಹಿಂದಿ ಭಾಷೆಗಳ ಭಜನಾ ಪದ ಹಾಡುತ್ತಾರೆ. ರಕ್ತರಾತ್ರಿ, ಕುಲಪುತ್ರ, ಅತ್ತೆ ಸೊಸೆ, ಬಡವ ಬದುಕಲೇ ಬೇಕು ನಾಟಕಗಳಲ್ಲಿ ಇವರು ಮಾಡಿದ ಪಾತ್ರಗಳು ಪರಿಣಾಮಕಾರಿ ಆಗಿದ್ದವು’ ಎಂದು ಗ್ರಾಮಸ್ಥರಾದ ಹುಲಸೂರ ತಾಲ್ಲೂಕು ರಚನೆ ಹೋರಾಟ ಸಮಿತಿ ಅಧ್ಯಕ್ಷ ಎಂ.ಜಿ.ರಾಜೋಳೆ ತಿಳಿಸಿದ್ದಾರೆ.

‘ವೈಜನಾಥಯ್ಯ ಅವರು ನಾಟಕದ ಜತೆಗೆ ಕೋಲಾಟ, ಬಯಲಾಟಗಳಲ್ಲಿಯೂ ಭಾಗವಹಿಸುತ್ತಾರೆ. ಚಕ್ರಿ ಭಜನೆ, ಹರಿ ಭಜನೆ, ಶಿವ ಭಜನೆ ಎಲ್ಲದಕ್ಕೂ ಸೈ ಎನ್ನುತ್ತಾರೆ. ಇವರನ್ನು ಭಜನೆಯ ಸ್ವಾಮಿ ಎಂದೇ ಗುರುತಿಸಲಾಗುತ್ತದೆ’ ಎಂದು ಗ್ರಾಮಸ್ಥರಾದ ರಮೇಶ ಧಬಾಲೆ ಹೇಳಿದ್ದಾರೆ. ‘ಜಾನಪದ ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಿರುವುದು ಸೂಕ್ತ ನಿರ್ಧಾರವಾಗಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT