ವಾರದೊಳಗೆ ಯೋಜನಾ ವರದಿ ಸಿದ್ಧಪಡಿಸಿ

ಬೀದರ್: ‘ಪ್ರಕೃತಿ ವಿಕೋಪ ಎದುರಾಗುವ ಮೊದಲೇ ಜಿಲ್ಲಾ ಮಟ್ಟದ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಒಂದು ವಾರದೊಳಗೆ ಯೋಜನಾ ವರದಿಯನ್ನು ಸಿದ್ಧ ಪಡಿಸಿ ಜಿಲ್ಲಾ ಆಡಳಿತಕ್ಕೆ ಸಲ್ಲಿಸಬೇಕು’ ಎಂದು ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ ಸೂಚಿಸಿದರು.
ನಗರದಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ‘ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರ್ರು, ನಗರ ಅಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ಪ್ರಕೃತಿ ವಿಕೋಪದ ತರಬೇತಿ ಪಡೆದ ಅಧಿಕಾರಿಗಳನ್ನೊಳಗೊಂಡ ತಂಡವೊಂದನ್ನು ರಚಿಸಬೇಕು’ ಎಂದು ನಿರ್ದೇಶನ ನೀಡಿದರು.
‘ತಾಲ್ಲೂಕುಗಳಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಮನೆ ಕುಸಿತ, ಜೀವಹಾನಿ ಮಾಹಿತಿಯನ್ನು ಜಿಲ್ಲಾ ಆಡಳಿತಕ್ಕೆ ಕ್ಷಣ ಕ್ಷಣಕ್ಕೂ ನೀಡಬೇಕು. ಸಾಮಾನ್ಯವಾಗಿ ಪ್ರವಾಹ ಬರುವ ಪ್ರದೇಶವನ್ನು ಗುರುತಿಸಬೇಕು. ನಿರಾಶ್ರಿತರ ಪರಿಹಾರ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.
‘ಆರೋಗ್ಯ ಇಲಾಖೆ ಅಧಿಕಾರಿಗಳು, ಪೊಲೀಸ್, ಅಗ್ನಿಶಾಮಕ, ಜೆಸ್ಕಾಂ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು’ ಎಂದು ತಿಳಿಸಿದರು.
‘ಬಾಗಲಕೋಟೆ, ಬೆಳಗಾವಿ, ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಕಳೆದ 50 ವರ್ಷಗಳಲ್ಲಿ ಒಮ್ಮೆಯೂ ಸುರಿಯದಷ್ಟು ಮಳೆಯಾಗಿದೆ. ಹೀಗಾಗಿ ಬೀದರ್ ಜಿಲ್ಲೆಯಲ್ಲಿ ಮಳೆ ಬರುವ ಮೊದಲೇ ಎಚ್ಚರ ವಹಿಸಬೇಕಿದೆ’ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಹೇಳಿದರು.
ಜಿಲ್ಲಾ ಪಂಚಾಯಿತಿ ಸಿಇಒ ಮಹಾಂತೇಶ ಬೀಳಗಿ, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಲಭೀಮ ಕಾಂಬಳೆ ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.