ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿನಿಯರ ಮೇಲೆ ನಾಯಿಗಳ ದಾಳಿ: ವಿದ್ಯಾರ್ಥಿಗಳಿಂದ ದಿಢೀರ್‌ ಪ್ರತಿಭಟನೆ

Last Updated 16 ಅಕ್ಟೋಬರ್ 2018, 13:09 IST
ಅಕ್ಷರ ಗಾತ್ರ

ಬೀದರ್‌: ಇಲ್ಲಿಯ ನೌಬಾದ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಹಾಡಹಗಲೇ ನಾಯಿಗಳ ಹಿಂಡು ಸ್ನಾತಕೋತ್ತರ ಪದವಿ ಹಾಗೂ ಬಿಎಸ್ಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಬ್ಬರ ಮೇಲೆ ದಾಳಿ ಮಾಡಿದ್ದು, ಒಬ್ಬರಿಗೆ ಮಾಂಸ ಕಿತ್ತು ಬರುವಂತೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿವೆ.

ಎಂಎಸ್ಸಿ ವಿದ್ಯಾರ್ಥಿನಿ ಸಂಗೀತಾ ಬಸವರಾಜ್ ಅವರು ಕಾಲೇಜಿನ ಹೊರಗಡೆ ಇರುವ ವಾಶ್ ರೂಮ್‌ಗೆ ತೆರಳುತ್ತಿದ್ದ ಸಂದರ್ಭದಲ್ಲಿ ಮೂರು ನಾಯಿಗಳು ಒಮ್ಮೆಲೆ ದಾಳಿ ಮಾಡಿ ಅವರ ಕೈ, ಕಾಲು ಹಾಗೂ ತೊಡೆಯ ಮಾಂಸ ಕಿತ್ತು ಬರುವಂತೆ ಕಚ್ಚಿವೆ. ನಾಯಿಗಳ ಹಿಂಡಿನಿಂದ ರಕ್ಷಿಸಿಕೊಳ್ಳಲು ವಿದ್ಯಾರ್ಥಿನಿ ಜೋರಾಗಿ ಕಿರುಚುತ್ತಿದ್ದ ಶಬ್ದ ಕೇಳಿ ಆವರಣದಲ್ಲಿದ್ದ ವಿದ್ಯಾರ್ಥಿಗಳು ಸ್ಥಳಕ್ಕೆ ಧಾವಿಸಿ ಕಲ್ಲು ತೂರಿ ನಾಯಿಗಳ ಹಿಂಡನ್ನು ಓಡಿಸಿದ್ದಾರೆ.

ಗಾಯಗೊಂಡ ವಿದ್ಯಾರ್ಥಿನಿಯನ್ನು ವಿದ್ಯಾರ್ಥಿಗಳೇ ತಕ್ಷಣ ಬ್ರಿಮ್ಸ್‌ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಸ್ಪಂದಿಸದ ಕಾರಣ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಕಾಲೇಜಿಗೆ ಬರುತ್ತಿದ್ದ ಬಿಎಸ್ಸಿ ವಿದ್ಯಾರ್ಥಿನಿ ಪವಿತ್ರಾ ಮೇಲೂ ನಾಯಿಗಳು ದಾಳಿ ನಡೆಸಿವೆ. ಕಾಲೇಜು ಆವರಣದಲ್ಲಿ ಇಷ್ಟೆಲ್ಲ ಗೌಜುಗದ್ದಲ ನಡೆಯುತ್ತಿದ್ದರೂ ಕಾಲೇಜಿನ ಪ್ರಾಚಾರ್ಯ ಹಾಗೂ ಸಿಬ್ಬಂದಿ ಹೊರಗೆ ಬರಲಿಲ್ಲ. ವಿದ್ಯಾರ್ಥಿನಿಯರ ಕ್ಷೇಮವನ್ನೂ ವಿಚಾರಿಸಲಿಲ್ಲ ಎಂದು ವಿದ್ಯಾರ್ಥಿಗಳು ಕಾಲೇಜಿನ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾಲೇಜು ಹಾಗೂ ನಗರಸಭೆ ವಿರುದ್ಧ ಆಕ್ರೋಶ: ಕಾಲೇಜು ಆವರಣದಲ್ಲಿ ಒಂದೇ ದಿನ ಇಬ್ಬರು ವಿದ್ಯಾರ್ಥಿನಿಯರಿಗೆ ನಾಯಿಗಳು ಕಚ್ಚಿ ಗಾಯಗೊಳಿಸಿದರೂ ಕಾಲೇಜು ಹಾಗೂ ನಗರಸಭೆ ಸಿಬ್ಬಂದಿ ಸ್ಥಳಕ್ಕೆ ಬಾರದ್ದನ್ನು ಖಂಡಿಸಿ, ಕಾಲೇಜಿಗೆ ಅಗತ್ಯ ಸೌಕರ್ಯ ಒದಗಿಸಬೇಕು ಹಾಗೂ ವಿದ್ಯಾರ್ಥಿನಿಯ ವೈದ್ಯಕೀಯ ವೆಚ್ಚ ಭರಿಸಬೇಕು ಎಂದು ಒತ್ತಾಯಿಸಿ ಪದವಿ ಹಾಗೂ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ಮಂಗಳವಾರ ದಿಢೀರ್‌ ಪ್ರತಿಭಟನೆ ನಡೆಸಿದರು.

‘ಕಾಲೇಜಿನ ಆವರಣದಲ್ಲಿ ನಾಯಿಗಳ ಹಿಂಡು ದಾಳಿ ಇಟ್ಟು ಮೈಯಲ್ಲ ಕಚ್ಚಿದರೂ ಕಾಲೇಜಿನ ಪ್ರಾಚಾರ್ಯ
ಮನೋಹರ ಭಕಾಳೆ ಸ್ಥಳಕ್ಕೆ ಬಂದು ಕ್ಷೇಮ ವಿಚಾರಿಸಲಿಲ್ಲ. ಏನಾಗಿದೆ ಎಂದೂ ನೋಡಲಿಲ್ಲ’ ಎಂದು ಸಂಗೀತಾ ಬಸವರಾಜ ಬೇಸರ ವ್ಯಕ್ತಪಡಿಸಿದರು.

‘ಕಾಲೇಜಿನಲ್ಲಿ ಕುಡಿಯುವ ನೀರು ಹಾಗೂ ಶೌಚಾಲಯ ಇಲ್ಲ. ಕಾಲೇಜು ಹಾಳು ಕೊಂಪೆಯಂತಾಗಿದೆ. ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸುವ ಒಬ್ಬ ಅಧಿಕಾರಿ ಅಥವಾ ಜನಪ್ರತಿನಿಧಿ ಇಲ್ಲವೆ? ಎಂದು ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ ಹಾಗೂ ಸುಭಾಷಿಣಿ ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ಮಧ್ಯಾಹ್ನದ ವೇಳೆಗೆ ಪ್ರತಿಭಟನೆಯನ್ನು ತೀವ್ರಗೊಳಿಸಿದಾಗ ನ್ಯೂಟೌನ್‌ ಪೊಲೀಸರು ಸ್ಥಳಕ್ಕೆ ಬಂದು ಬಂದೋಬಸ್ತ್‌ ಮಾಡಿದರು. ನಗರಸಭೆ ಆಯುಕ್ತ ಮನೋಹರ ಹಾಗೂ ಮನೋಹರ ಭಕಾಳೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಬಂದು ಪ್ರತಿಭಟನೆ ಅಂತ್ಯಗೊಳಿಸುವಂತೆ ಮನವಿ ಮಾಡಿದರು. ಆದರೆ ಆರಂಭದಲ್ಲಿ ಯಾರೂ ಕಿವಿಕೊಡಲಿಲ್ಲ. ‘15 ದಿನಗಳಲ್ಲಿ ಶೌಚಾಲಯ ನಿರ್ಮಿಸಲಾಗುವುದು‘ ಎಂದು ನಗರಸಭೆ ಆಯುಕ್ತ ಮನೋಹರ ಹೇಳಿಕೆ ನೀಡಿದ ನಂತರ ಪ್ರತಿಭಟನೆಯನ್ನು ಅಂತ್ಯಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT