ಶನಿವಾರ, ಮೇ 21, 2022
23 °C
ಟೋಲ್ ಪ್ಲಾಜಾಗಳಲ್ಲಿ ಶುಲ್ಕ ಪಾವತಿಗೆ ಫಾಸ್ಟ್ಯಾಗ್ ಕಡ್ಡಾಯ

2,200 ವಾಹನಗಳಿಗೆ ದುಪ್ಪಟ್ಟು ಶುಲ್ಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಟಗುಪ್ಪ: ಕೇಂದ್ರ ಸರ್ಕಾರ ಎಲ್ಲ ಟೋಲ್ ಗೇಟ್‌ಗಳಲ್ಲಿ ಸೋಮವಾರ ಮಧ್ಯ ರಾತ್ರಿಯಿಂದ ಫಾಸ್ಟ್ಯಾಗ್ ಕಡ್ಡಾಯಗೊಳಿಸಿದೆ.

ಹೈದರಾಬಾದ್–ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 65ರ ಚಿಟಗುಪ್ಪ ತಾಲ್ಲೂಕಿನ ಮಂಗಲಗಿ ಗ್ರಾಮದ ಬಳಿ ನಿರ್ಮಿಸಿರುವ ಎಲ್‌ ಆ್ಯಂಡ್‌ ಟಿ ಡೆಕ್ಕನ್‌ ಟೋಲ್‌ ಪ್ಲಾಜಾದಲ್ಲಿ ಬುಧವಾರ ಬೆಳಿಗ್ಗೆವರೆಗೂ ಫಾಸ್ಟ್ಯಾಗ್ ಇಲ್ಲದ 2,200 ವಾಹನಗಳಿಂದ ದುಪ್ಪಟ್ಟು ಶುಲ್ಕ ಸಂಗ್ರಹಿಸಲಾಗಿದೆ.

‘ಟೋಲ್‌ ಪ್ಲಾಜಾದಲ್ಲಿ ಹೊಸ ಟ್ಯಾಗ್‌ ವಿತರಿಸುವುದಕ್ಕಾಗಿ 5 ಕೌಂಟರ್‌ಗಳನ್ನು ತೆರೆದಿದ್ದು, 24 ಗಂಟೆಯಲ್ಲಿ 250 ವಾಹನಗಳಿಗೆ ಟ್ಯಾಗ್‌ ವಿತರಿಸಲಾಗಿದೆ’ ಎಂದು ಮಂಗಲಗಿ ಟೋಲ್ ಪ್ಲಾಜಾ ವ್ಯವಸ್ಥಾಪಕ ಅರುಣಕುಮಾರ ವಿ. ‘ಪ್ರಜಾವಾಣಿ’ಗೆ ತಿಳಿಸಿದರು.

‘ವಾಹನಗಳ ಚಾಲಕರು ತಮ್ಮ ಟ್ಯಾಗ್‌ನಲ್ಲಿ ಹಣ ಇಲ್ಲದಿರುವುದು ಕಂಡು ಪ್ಲಾಜ್‌ದಿಂದ ಅನತಿ ದೂರದಲ್ಲಿ ವಾಹನ ನಿಲ್ಲಿಸುತ್ತಿದ್ದಾರೆ. ಮಾಲೀಕರಿಂದ ಕರೆನ್ಸಿ ಹಾಕಿಸಿಕೊಂಡ ನಂತರವೇ ಪ್ಲಾಜ್‌ದಿಂದ ನಿರ್ಗಮಿಸುತ್ತಿದ್ದಾರೆ’ ಎಂಬುದು ಸಿಬ್ಬಂದಿ ಸಿದ್ದು ಅವರ ಹೇಳಿಕೆ.

ಫಾಸ್ಟ್ಯಾಗ್ ಅಳವಡಿಸಿಕೊಳ್ಳದ ಚಾಲಕರಿಗೆ, ಫಾಸ್ಟ್ಯಾಗ್ ಪಡೆದುಕೊಳ್ಳಲು ಅನುಕೂಲವಾಗುವಂತೆ ಬುಧವಾರ ಪೆಟಿಎಂ, ಐಡಿಎಫ್‌ಸಿ, ಏರ್‌ಟೆಲ್‌, ಐಸಿಐಸಿಐ ಬ್ಯಾಂಕ್‌ನವರು ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ಮಳಿಗೆಗಳ ಮೂಲಕ ವಿತರಿಸುವ ಕಾರ್ಯ ಮುಂದುವರೆಸಿದ್ದಾರೆ.

ಫಾಸ್ಟ್ಯಾಗ್ ಕಡ್ಡಾಯದ ಬಗ್ಗೆ ಟೋಲ್‌ಪ್ಲಾಜಾದಲ್ಲಿ ಕನ್ನಡ, ಹಿಂದಿ, ತೆಲುಗು ಹಾಗೂ ಇಂಗ್ಲಿಷ್‌ನಲ್ಲಿ ಮಾಹಿತಿ ಇರುವ ಕರಪತ್ರಗಳನ್ನು ವಿತರಿಸಲಾಗುತ್ತಿದೆ. ದಿನದ 24 ಗಂಟೆಯೂ ಧ್ವನಿಮುದ್ರಿತ ಸಂದೇಶದ ಮೂಲಕ ತಿಳಿವಳಿಕೆ ನೀಡುವ ಕಾರ್ಯ ನಿರಂತರವಾಗಿ ನಡೆಸುತ್ತಿದ್ದಾರೆ.

‘ಟೊಲ್‌ ಪ್ಲಾಜ್‌ ವ್ಯಾಪ್ತಿಯ ಎಂಟು ದಿಕ್ಕುಗಳಿಂದ 20 ಕಿ.ಮೀ ಅಂತರದಲ್ಲಿ ಬರುವ ಗ್ರಾಮಗಳ ನಿವಾಸಿಗರು ತಿಂಗಳ ಶುಲ್ಕ ₹275 ಪಾವತಿಸಿ, ನಿತ್ಯ ಎಷ್ಟು ಬಾರಿಯೂ ತಮ್ಮ ವಾಹನ ಸಂಚರಿಸಬಹುದಾಗಿದೆ. 24 ಗಂಟೆಯ ಅವಧಿಯಲ್ಲಿ 6 ವಾಹನಗಳಿಗೆ ರಿಯಾಯಿತಿ ಪಾಸ್‌ ನೀಡಲಾಗಿದೆ. ಶಾಲಾ ವಾಹನಗಳಿಗೆ ನೀಡಲಾಗುವ ಪ್ರತಿಶತ 50ರಷ್ಟು ರಿಯಾಯಿತಿ ದರದ ಪಾಸ್‌ ಇದುವರೆಗೂ ಯಾವುದೇ ಶಾಲೆಯ ವಾಹನಗಳು ಪಡೆದಿಲ್ಲ’ ಎಂಬುದು ಅರುಣಕುಮಾರ ವಿ. ಅವರ ಮಾಹಿತಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು