ದೇವಸ್ಥಾನದ ಆವರಣದಲ್ಲಿ ಮಹಿಳೆಯರಿಬ್ಬರ ಕೊಲೆ

7
ಆರೋಪಿಯನ್ನು ಬೆನ್ನಟ್ಟಿ ಹಿಡಿದ ಸಾರ್ವಜನಿಕರು

ದೇವಸ್ಥಾನದ ಆವರಣದಲ್ಲಿ ಮಹಿಳೆಯರಿಬ್ಬರ ಕೊಲೆ

Published:
Updated:
Deccan Herald

ಬೀದರ್‌: ಜನವಾಡ ರಸ್ತೆಯ ಶಹಾಗಂಜ್ ಹನುಮಾನ ದೇವಸ್ಥಾನದ ಆವರಣದಲ್ಲಿ ಭಾನುವಾರ ಬೆಳಿಗ್ಗೆ ಮಹಿಳೆಯರಿಬ್ಬರನ್ನು ದೊಡ್ಡ ಕಟ್ಟಿಯಿಂದ ಹೊಡೆದು ಕೊಲೆ ಮಾಡಲಾಗಿದೆ.

ನಗರದ ಲೇಬರಿ ಕಾಲೊನಿಯ ಲಲಿತಮ್ಮ(60) ಹಾಗೂ ದುರ್ಗಮ್ಮ(50) ಕೊಲೆಯಾದವರು. ಬೆಳಿಗ್ಗೆ ವಾಯು ವಿಹಾರಕ್ಕೆ ಹೋಗಿ ಹನುಮನ ದರ್ಶನ ಪಡೆದು ದೇವಸ್ಥಾನ ಎದುರಿನ ಕಟ್ಟೆ ಮೇಲೆ ಕೂತ ವೇಳೆ ಕ್ಷುಲ್ಲಕ ಕಾರಣಕ್ಕಾಗಿ ವಾದ ವಿವಾದ ನಡೆದು ವ್ಯಕ್ತಿಯೊಬ್ಬ ದೊಣ್ಣೆಯಿಂದ ಮಹಿಳೆಯರ ತಲೆಯ ಮೇಲೆ ಹೊಡೆದು ಕೊಲೆ ಮಾಡಿದ್ದಾನೆ.

ಆರೋಪಿ ಶಹಾಪುರ ತಾವರವಡೇಗಾರದ ನಿವಾಸಿ ದೇವಪ್ಪ ಭೀಮಯ್ಯ ವಡ್ಡರ್‌ನನ್ನು ಸಾರ್ವಜನಿಕರು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.

ಲಲಿತಮ್ಮ ಎಂದಿನಂತೆ ಪ್ರಾರ್ಥನೆಗಾಗಿ ದೇವಸ್ಥಾನಕ್ಕೆ ಬಂದಿದ್ದರೆ, ಮನೆಗೆಲಸ ಮಾಡುವ ದುರ್ಗಮ್ಮ ದೇವರ ದರ್ಶನ ಪಡೆದು ದೇವಸ್ಥಾನದ ಎದುರಿನ ಕಟ್ಟೆಯ ಮೇಲೆ ಕೂತಿದ್ದರು. ದೇವಪ್ಪ ವಡ್ಡರ್ ಅಲ್ಲಿಗೆ ಬಂದು ದೇವಸ್ಥಾನದ ಒಳಗೆ ಕಸ,ಕಟ್ಟಿಗೆ ಹಾಗೂ ಕಲ್ಲುಗಳನ್ನು ಹಾಕಿದ. ಇದನ್ನು ಕಂಡ ಇಬ್ಬರು ಮಹಿಳೆಯರು ದೇವಪ್ಪನನ್ನು ಪ್ರಶ್ನಿಸಿದಾಗ, ಅವರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಮಾನಸಿಕ ಸ್ಥಿಮಿತ ಕಳೆದುಕೊಂಡ ದೇವಪ್ಪ ಕಟ್ಟಿಗೆಯನ್ನು ಎತ್ತಿಕೊಂಡು ಲಲಿತಮ್ಮ ಅವರ ತಲೆಗೆ ಬಲವಾಗಿ ಹೊಡೆದಿದ್ದಾನೆ. ಲಲಿತಮ್ಮ ಅವರ ರಕ್ಷಣೆಗೆ ಧಾವಿಸಿದ ದುರ್ಗಮ್ಮ ಅವರ ತಲೆ ಮೇಲೂ ಹೊಡೆದಿದ್ದಾನೆ. ಮಹಿಳೆಯರ ಕಿರುಚಾಟದಿಂದ ಅವರ ಸಂಬಂಧಿಗಳು ಸ್ಥಳಕ್ಕೆ ಓಡಿ ಬಂದು ಆರೋಪಿಯನ್ನು ಹಿಡಿಯಲು ಹೋದಾಗ ತಪ್ಪಿಸಿಕೊಂಡಿದ್ದಾನೆ. ಸಾರ್ವಜನಿಕರ ನೆರವಿನೊಂದಿಗೆ ಪೊಲೀಸರು ಬೆನ್ನಟ್ಟಿ ಆರೋಪಿಯನ್ನು ಸೆರೆ ಹಿಡಿದಿದ್ದಾರೆ. ಆರೋಪಿ ಪೊಲೀಸ್‌ ಕಾನ್‌ಸ್ಟೆಬಲ್‌ ಮೇಲೂ ಹಲ್ಲೆಗೆ ಯತ್ನಿಸಿ ಅವರ ಸಮವಸ್ತ್ರವನ್ನು ಹರಿದು ಹಾಕಿದ್ದಾನೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು, ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ದೇವಸ್ಥಾನದ ಸಿಸಿಟಿವಿಯ ಡಿವಿಆರ್ ಕೆಟ್ಟು ಹೋಗಿರುವುದರಿಂದ ದೃಶ್ಯ ಸೆರೆಯಾಗಿಲ್ಲ.

‘ಕ್ಷುಲ್ಲಕ ಕಾರಣಕ್ಕೆ ಮಹಿಳೆಯರಿಬ್ಬರ ಕೊಲೆ ನಡೆದಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಆರೋಪಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಆತ ಮಾನಸಿಕ ಅಸ್ವಸ್ಥನೇ ಎನ್ನುವುದನ್ನು ಖಚಿತ ಪಡಿಸಿಕೊಳ್ಳಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !