ಮಂಗಳವಾರ, ಜುಲೈ 14, 2020
27 °C
ಕೋವಿಡ್–19 ನಿರೋಧಕ ಲಸಿಕೆ ಬರುವವರೆಗೂ ಎಚ್ಚರಿಕೆಯಿಂದ ಇರಿ

ಬೀದರ್ | ಸೋಂಕಿತರಲ್ಲಿ ಧೈರ್ಯ ತುಂಬಿದ ಡಾ.ಸತೀಶ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್: ಜಿಲ್ಲೆಗೆ ಕೊರೊನಾ ಸೋಂಕು ಪ್ರವೇಶಿಸಿದ ಸಂದರ್ಭದಲ್ಲಿ ಬ್ರಿಮ್ಸ್‌ನಲ್ಲಿ 250 ವೈದ್ಯರು ಇದ್ದರೂ ಆರಂಭದಲ್ಲಿ ವೃತ್ತಿ ಧರ್ಮ ನಿಭಾಯಿಸಲು ಮುಂದೆ ಬಂದವರು ಮೂವರು ಮಾತ್ರ. ಇವರಲ್ಲಿ ಡಾ.ಸತೀಶ ಮುಡಬಿ ಒಬ್ಬರು. ಇವರು ಸೋಂಕಿತರು ಹಾಗೂ ವೈದ್ಯಕೀಯ ಸಿಬ್ಬಂದಿಯಲ್ಲಿ ಧೈರ್ಯ ತುಂಬಿ ರೋಗಿ ಗುಣಮುಖಗೊಳ್ಳುವಂತೆ ಮಾಡಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

ವಿಶ್ವದಾದ್ಯಂತ ತಲ್ಲಣ ಸೃಷ್ಟಿಸಿರುವ ಕೋವಿಡ್ –19  ಬೀದರ್‌ಗೆ ಮೊದಲು ಬಂದು ಎರಗಿದ್ದು ಮಾರ್ಚ್‌ 4 ರಂದು. ಕೊರೊನಾ ಲಕ್ಷಣಗಳು ಇದ್ದ ಓಲ್ಡ್‌ಸಿಟಿಯ ವೃದ್ಧರೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯ ಸಿಬ್ಬಂದಿ ಬಹಳ ಆತಂಕಕ್ಕೆ ಒಳಗಾಗಿದ್ದರು. ರೋಗಿಗೆ ಯಾವ ರೀತಿ ಚಿಕಿತ್ಸೆ ನೀಡಬೇಕು ಎನ್ನುವ ಬಗ್ಗೆ ಆಗ ಆರೋಗ್ಯ ಇಲಾಖೆಯಿಂದ ಸ್ಪಷ್ಟವಾದ ಮಾರ್ಗಸೂಚಿಯೂ ಬಂದಿರಲಿಲ್ಲ. ಡಾ.ಸತೀಶ ಅವರು ಸವಾಲಾಗಿ ಸ್ವೀಕರಿಸಿ ಕಾರ್ಯನಿರ್ವಹಿಸಿದರು.

‘ಸೋಂಕಿತ ವ್ಯಕ್ತಿ ಚಿಕಿತ್ಸೆಗೆ ಬಂದಾಗ ಭಯದಿಂದಾಗಿ ವೈದ್ಯಕೀಯ ಸಿಬ್ಬಂದಿ ಹತ್ತಿರ ಸುಳಿಯುತ್ತಿರಲಿಲ್ಲ. ವೈದ್ಯಕೀಯ ಸಿಬ್ಬಂದಿಯಲ್ಲಿ ಮೊದಲು ಆತ್ಮಸ್ಥೈರ್ಯ ತುಂಬಬೇಕಿತ್ತು. ಜಿಲ್ಲೆಯಲ್ಲಿ ಎಚ್‌1ಎನ್‌ ಸೋಂಕು ಕಾಣಿಸಿಕೊಂಡಾಗ ರೋಗಿಗಳಿಗೆ ಚಿಕಿತ್ಸೆ ನೀಡಿದ ಅನುಭವ ಇತ್ತು. ಹೀಗಾಗಿ ರೋಗಿಯ ಹತ್ತಿರ ಹೋಗಿ ಚಿಕಿತ್ಸೆ ನೀಡಲು ಶುರು ಮಾಡಿದೆ. ಇದರಿಂದ  ಸೋಂಕಿತ ವ್ಯಕ್ತಿ ಹಾಗೂ ಸಿಬ್ಬಂದಿಯಲ್ಲೂ ಧೈರ್ಯ ತುಂಬಲು ಸಾಧ್ಯವಾಯಿತು’ ಎಂದು ಡಾ.ಸತೀಶ ಮುಡಬಿ ಹೇಳಿದರು.

‘ಬ್ರಿಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದ ತಬ್ಲೀಗಿಗಳ ತಂಡದಲ್ಲಿ 65 ವರ್ಷದ ವೃದ್ಧರೊಬ್ಬರು ಇದ್ದರು. ಅವರಿಗೆ ಬೇರೆ ಕಾಯಿಲೆಗಳೂ ಇದ್ದವು. ಒಬ್ಬರೇ ಶೌಚಕ್ಕೆ ಹೋಗುವ ಸ್ಥಿತಿಯಲ್ಲೂ ಇರಲಿಲ್ಲ. ತಂದೆಯ ಸೇವೆಗಾಗಿ ಅವರ ಪುತ್ರ ಸಹ ಆಸ್ಪತ್ರೆಗೆ ದಾಖಲಾಗಿದ್ದರು. ಇಬ್ಬರೂ ಅಕ್ಕಪಕ್ಕದಲ್ಲೇ ಮಲಗಿದರೂ ಪುತ್ರ ನಿತ್ಯ ಒಂದು ಎನ್‌95 ಮಾಸ್ಕ್‌, ಸ್ಯಾನಿಟೈಸರ್‌ ಬಳಸುತ್ತಿದ್ದರು. ಒಂದೇ ವಾರ್ಡ್‌ನಲ್ಲಿ ಇದ್ದರೂ ಅಂತರ ಕಾಯ್ದುಕೊಂಡಿದ್ದರು. ತಂದೆಗೆ ಸೋಂಕು ದೃಢಪಟ್ಟಿದ್ದರೂ ಮಗನಿಗೆ ಸೋಂಕು ತಗುಲಿರಲಿಲ್ಲ. ನಂತರ ಅವರೂ ಗುಣಮುಖರಾಗಿ ಮನೆಗೆ ತೆರಳಿದರು’ ಎಂದು ವಿವರಿಸಿದರು.

‘ನಾಲ್ಕು ತಿಂಗಳಿಂದ ಕೋವಿಡ್‌ 19 ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದೇನೆ. ಹೆಚ್ಚು ಕಾಳಜಿ ವಹಿಸಿರುವ ಕಾರಣ ಯಾರೊಬ್ಬರೂ ಖಿನ್ನತೆಗೆ ಒಳಗಾಗಿಲ್ಲ. ವಿಶೇಷ ಚಿಕಿತ್ಸಾ ಘಟಕದಲ್ಲಿ ದಾಖಲಾಗಿರುವ ವ್ಯಕ್ತಿಗಳಿಗೂ ವೈದ್ಯರ ಬಗೆಗೆ ವಿಶ್ವಾಸ ಒಡಮೂಡಿದೆ’ ಎಂದು ಹೆಮ್ಮೆಯಿಂದ ನುಡಿದರು.

‘ಸೋಂಕು ತಗಲುವ ಭಯದಿಂದ ನನ್ನ ಇಬ್ಬರು ಮಕ್ಕಳನ್ನು ಅವರ ಅಜ್ಜನ ಮನೆಗೆ ಕಳಿಸಿದ್ದೆ. ಪತ್ನಿ ಮನೆಯಲ್ಲಿ ಇದ್ದರೂ ಅಂತರ ಕಾಯ್ದುಕೊಂಡಿದ್ದೆ. ಎರಡು ಬಾರಿ ಕೋವಿಡ್‌ ಪರೀಕ್ಷೆಯನ್ನೂ ಮಾಡಿಸಿಕೊಂಡಿದ್ದೇನೆ. ಎರಡೂ ಬಾರಿ ವರದಿ ನೆಗೆಟಿವ್‌ ಬಂದಿದೆ. ಆದರೂ ನಿಯಮಗಳ ಪಾಲನೆ ಈಗಲೂ ಮುಂದುವರಿಸಿದ್ದೇನೆ. 20 ದಿನಗಳ ನಂತರ ಮಕ್ಕಳು ಮತ್ತೆ ಮನೆ ಸೇರಿದ್ದಾರೆ. ಕೋವಿಡ್‌ ವಿರುದ್ಧದ ಹೋರಾಟ ಮುಂದುವರಿದಿದೆ’ ಎಂದು ಮಾತಿಗೆ ವಿರಾಮ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು