ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ | ಸಚಿವ ಸ್ಥಾನದಿಂದ ಪ್ರಭು ಚವಾಣ್ ವಜಾಕ್ಕೆ ಆಗ್ರಹ

ನಕಲಿ ದಾಖಲೆ ಸಲ್ಲಿಸಿ ಜಾತಿ ಪ್ರಮಾಣಪತ್ರ ಪಡೆದ ಆರೋಪ
Last Updated 6 ಜೂನ್ 2020, 3:10 IST
ಅಕ್ಷರ ಗಾತ್ರ

ಬೀದರ್: ‘ಜಿಲ್ಲೆಯ ಲಂಬಾಣಿ ಸಮುದಾಯದ ಜನರ ಹಕ್ಕು ಕಬಳಿಸಿದ ಹಾಗೂ ನಕಲಿ ದಾಖಲೆ ಸೃಷ್ಟಿಸಿ ಜಾತಿ ಪ್ರಮಾಣಪತ್ರ ಪಡೆದು ಶಾಸಕರಾಗಿರುವ ಪ್ರಭು ಚವಾಣ್ ಅವರನ್ನು ಸಚಿವ ಸ್ಥಾನದಿಂದ ಕೈಬಿಡಬೇಕು’ ಎಂದು ಔರಾದ್ ಮೀಸಲು ವಿಧಾನಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ವಿಜಯಕುಮಾರ ಕೌಡಿಯಾಳ ಆಗ್ರಹಿಸಿದರು.

ಪ್ರಭು ಚವಾಣ್ ಅವರ ಪೂರ್ವಜರು ಮಹಾರಾಷ್ಟ್ರದವರಾಗಿದ್ದಾರೆ. ಅವರು ಮಹಾರಾಷ್ಟ್ರದ ಉದಗಿರ ತಾಲ್ಲೂಕಿನ ತೊಂಡಚೇರ ಗ್ರಾಮದಲ್ಲಿ ಜನಿಸಿದ್ದು, ನಾಂದೇಡ ಜಿಲ್ಲೆಯ ದೇಗಲೂರಿನ ಶಿಳವಣಿ ಬಾರ್ಡರ್ ತಾಂಡಾದಲ್ಲಿ ಶಿಕ್ಷಣ ಪಡೆದಿದ್ದಾರೆ. ಕರ್ನಾಟಕದವರಲ್ಲದಿದ್ದರೂ ರಾಜಕೀಯ ಲಾಭ ಪಡೆದು ಸ್ಥಳೀಯರಿಗೆ ಅನ್ಯಾಯ ಮಾಡಿದ್ದಾರೆ’ ಎಂದು ನಗರದಲ್ಲಿ ಶುಕ್ರವಾರ ಮಾಧ್ಯಮ ಗೋಷ್ಠಿಯಲ್ಲಿ ಆರೋಪಿಸಿದರು.

‘ಚವಾಣ್ ಅವರ ಮಕ್ಕಳು ಸಹ ಮಹಾರಾಷ್ಟ್ರದ ಠಾಣೆಯಲ್ಲಿ ಓದುತ್ತಿದ್ದಾರೆ. ಅವರ ಶೈಕ್ಷಣಿಕ ದಾಖಲೆಗಳನ್ನು ಸಹ ಜಿಲ್ಲಾಡಳಿತಕ್ಕೆ ಕೊಡಲಾಗಿದೆ. ಅವರ ಪೂರ್ವಜರು ಬೀದರ್ ಜಿಲ್ಲೆಯಲ್ಲಿ ವಾಸವಾಗಿರುವ ಒಂದು ದಾಖಲೆಯೂ ಇಲ್ಲ. ಖೊಟ್ಟಿ ದಾಖಲೆ ಸೃಷ್ಟಿಸಿ ಪರಿಶಿಷ್ಟ ಜಾತಿಯ ಪ್ರಮಾಣಪತ್ರ ಪಡೆದಿದ್ದಾರೆ’ ಎಂದು ದೂರಿದರು.

‘ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ತಿದ್ದುಪಡಿ ಕಾಯ್ದೆ 2011ರ ಕಲಂ 4ಅಡಿಯಲ್ಲಿ ಜಾತಿ ಪ್ರಮಾಣ ಪತ್ರ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲಾಗಿದೆ. ಮಹಾರಾಷ್ಟ್ರದಲ್ಲಿ ಬಂಜಾರಾ ಸಮುದಾಯ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿದೆ. ಚವಾಣ್ ಅವರು ಎರಡೂ ರಾಜ್ಯಗಳಲ್ಲಿ ಪಡಿತರ ಚೀಟಿ ಮಾಡಿಸಿಕೊಡಿದ್ದಾರೆ. ತಮ್ಮ ತಾಯಿಯ ಊರಾದ ಭೋಂತಿ ತಾಂಡಾಕ್ಕೆ ಬಂದು ನೆಲೆಸಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ’ ಎಂದು ಆರೋಪಿಸಿದರು.

‘ಹಿಂದೆ ಶಂಕರರಾವ್ ದೊಡ್ಡಿ ಅವರು ಪ್ರಭು ಚವಾಣ್ ವಿರುದ್ಧ ದೂರು ನೀಡಿದ್ದರು. ಕರ್ನಾಟಕ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಡಿಜಿಪಿ ತನಿಖೆ ನಡೆಸಿ ಚವಾಣ್ ವಿರುದ್ಧ 240 ಪುಟಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ನಂತರ ಶಂಕರರಾವ್ ಅವರ ಮೇಲೆ ಒತ್ತಡ ಹಾಕಿ ಪ್ರಕರಣ ಹಿಂದಕ್ಕೆ ಪಡೆಯುವಂತೆ ಮಾಡಲಾಯಿತು’ ಎಂದು ಹೇಳಿದರು.

‘ಸುಪ್ರೀಂಕೋರ್ಟ್ ಆದೇಶದಂತೆ ಹಿಂದಿನ ಜಿಲ್ಲಾಧಿಕಾರಿ ಎಚ್.ಆರ್. ಮಹಾದೇವ ಅವರು ಪ್ರಭು ಚವಾಣ್ ಅವರಿಗೆ ನೋಟಿಸ್ ನೀಡಿದ್ದಾರೆ. ಸಚಿವರಾಗಿರುವ ಕಾರಣ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಪ್ರಕರಣವನ್ನೇ ಮುಚ್ಚಿಹಾಕುವ ಪ್ರಯತ್ನಗಳು ನಡೆದಿವೆ. ಆದ್ದರಿಂದ ಮುಖ್ಯಮಂತ್ರಿಯವರು ಚವಾಣ್ ಅವರಿಂದ ರಾಜೀನಾಮೆ ಪಡೆಯಬೇಕು’ ಎಂದು ಒತ್ತಾಯಿಸಿದರು.

‘ಪ್ರಭು ಚವಾಣ್ ಅವರು ತಮ್ಮ ತಂದೆ ಭಾಮಲಾ ಕರ್ನಾಟಕದವರು ಎನ್ನುವ ದಾಖಲೆಗಳನ್ನು ಒದಗಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಇಲ್ಲದಿದ್ದರೆ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು’ ಎಂದು ಸವಾಲು ಹಾಕಿದರು.

‘ಮೂರು ಬಾರಿ ಶಾಸಕನಾಗಿದ್ದರೂ ಅವರಿಗೆ ಸರಿಯಾಗಿ ಕನ್ನಡ ಮಾತನಾಡಲು ಬರುವುದಿಲ್ಲ. ಇಂಥವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಿರುವುದು ಹಾಗೂ ಕನ್ನಡಪರ ಸಂಘಟನೆಗಳು ಧ್ವನಿ ಎತ್ತದೆ ಇರುವುದು ವಿಷಾದದ ಸಂಗತಿಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಔರಾದ್ ತಹಶೀಲ್ದಾರ್ ಅವರು ನಕಲಿ ಜಾತಿ ಪ್ರಮಾಣಪತ್ರ ಒದಗಿಸಿ ಅಪರಾಧ ಎಸಗಿದ್ದಾರೆ. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು’ ಎಂದು ಒತ್ತಾಯಿಸಿದರು.

‘ಪ್ರಭು ಚವಾಣ್ ಅವರು ಜಿಲ್ಲೆಯ ಲಂಬಾಣಿ ಸಮುದಾಯದಕ್ಕೂ ಅನ್ಯಾಯ ಮಾಡಿದ್ದಾರೆ. ಸ್ಥಳೀಯರು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಮಾಡಿದ್ದಾರೆ. ನೋಟಿಸ್ ಜಾರಿ ಮಾಡಿದ್ದಕ್ಕೆ ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ ಅವರನ್ನೂ ವರ್ಗಾವಣೆ ಮಾಡಿಸಿದ್ದಾರೆ’ ಎಂದು ವಿಜಯಕುಮಾರ ಆರೋಪಿಸಿದರು.

ಸಚಿವರಿಗೆ ಜಿಲ್ಲಾಧಿಕಾರಿ ನೋಟಿಸ್

ಬೀದರ್: ನಕಲಿ ದಾಖಲೆ ಸಲ್ಲಿಸಿ ಜಾತಿ ಪ್ರಮಾಣಪತ್ರ ಪಡೆದ ಆರೋಪಕ್ಕೆ ಸಂಬಂಧಪಟ್ಟಂತೆ ಪಶು ಸಂಗೋಪನಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅವರಿಗೆ ಜೂನ್ 3ರಂದು ಹಿಂದಿನ ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ್ ನೋಟಿಸ್ ಜಾರಿ ಮಾಡಿದ್ದಾರೆ.

ಬಸವಕಲ್ಯಾಣ ತಾಲ್ಲೂಕಿನ ಯರಬಾಗದ ವಿಜಯಕುಮಾರ ಪುಂಡಲಿಕಪ್ಪ ಅವರು ಮೇ 26ರಂದು ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ತಿದ್ದುಪಡಿ ಕಾಯ್ದೆ 2011ರ ಕಲಂ 4 ಅಡಿಯಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ. ಒಂದು ತಿಂಗಳಲ್ಲಿ ಅರ್ಜಿ ಇತ್ಯರ್ಥಗೊಳಿಸಬೇಕಿದೆ. ಹೀಗಾಗಿ ನೋಟಿಸ್ ತಲುಪಿದ 15 ದಿನಗಳಲ್ಲಿ ಲಿಖಿತ ಉತ್ತರ ನೀಡಬೇಕು ಎಂದು ನೋಟೀಸ್‌ನಲ್ಲಿ ಉಲ್ಲೇಖಿಸಿದ್ದಾರೆ.

ಎಚ್.ಆರ್.ಮಹಾದೇವ ಅವರು ಎರಡು ವಾರಗಳ ಹಿಂದೆ ವಸತಿ ಯೋಜನೆಯ ಮನೆಗಳ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಅವರಿಗೆ ನೋಟಿಸ್ ನೀಡಿದ್ದರು. ಭೂ ಪರಿವರ್ತನೆಗೆ ಸಂಬಂಧಪಟ್ಟಂತೆ ಇನ್ನೊಬ್ಬರು ಶಾಸಕರಿಗೂ ನೋಟಿಸ್ ಜಾರಿ ಮಾಡಿದ ಮಾಹಿತಿ ಇದೆ.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅವರಿಗೆ ನೋಟಿಸ್ ಜಾರಿ ಮಾಡಿದ ದಿನವೇ ಸರ್ಕಾರ ಎಚ್.ಆರ್.ಮಹಾದೇವ ಅವರನ್ನು ವರ್ಗಾವಣೆ ಮಾಡಿದೆ ಎಂದು ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮೀನಾಕ್ಷಿ ಸಂಗ್ರಾಮ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT