ಸೋಮವಾರ, ಮಾರ್ಚ್ 27, 2023
28 °C

ಬೀದರ್‌ನಲ್ಲಿ ಎಲ್ಲೆಡೆ ಗುಂಡಿಗಳ ದರ್ಶನ, ದೂಳಿನ ಮಜ್ಜನ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಜಿಲ್ಲೆಯ ಬಹುತೇಕ ಕಡೆ ಅತಿವೃಷ್ಟಿಯಿಂದ ರಸ್ತೆಗಳು ಹಾಳಾಗಿ ತಗ್ಗು ಗುಂಡಿಗಳು ಬಿದ್ದಿವೆ. ಬೀದರ್‌ ನಗರದಲ್ಲಿ ನಾಲ್ಕು ವರ್ಷಗಳಿಂದ ಮಂದಗತಿಯಲ್ಲಿ ನಡೆಯುತ್ತಿರುವ ಒಳ ಚರಂಡಿ ಕಾಮಗಾರಿಯಿಂದ ದೂಳು ಆವರಿಸಿಕೊಂಡಿದೆ.

ಪ್ರತಿ ದಿನ ಸಾವಿರಾರು ವಾಹನಗಳು ಸಂಚರಿಸುವ ಉದಗಿರ ರಸ್ತೆಯಲ್ಲಿ ಬೆಳಗಿನ ಜಾವ ಮಂಜು ಆವರಿಸಿದಂತೆ ದಟ್ಟವಾದ ದೂಳು ಆವರಿಸಿರುತ್ತದೆ. ಗಾಳಿಯಲ್ಲಿನ ದೂಳು ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನಸವಾರರಿಗೆ ಮಜ್ಜನ ಮಾಡುತ್ತಿದೆ.

ಅ‍ಪಾರ ದೂಳು ಕಣ್ಣಲ್ಲಿ ಹೋಗಿ ವಾಹನ ಸವಾರರು ಮುಂದೆ ಸಾಗದೆ ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪಾದಚಾರಿಗಳು ಕಣ್ಣು ಉಜ್ಜಿಕೊಳ್ಳುತ್ತ ಸಾಗಬೇಕಾಗಿದೆ. ಈ ಸಮಸ್ಯೆಗೆ ಪರಿಹಾರ ಕಲ್ಪಿಸದ ಕಾರಣ ಜನ ನಗರಸಭೆ ಹಾಗೂ ಜಿಲ್ಲಾಡಳಿತಕ್ಕೆ ಶಾಪ ಹಾಕುತ್ತಿದ್ದಾರೆ.

ನಗರದ ಕೇಂದ್ರ ಭಾಗದಲ್ಲಿರುವ ರೋಟರಿ ವೃತ್ತದಿಂದ ಮಡಿವಾಳ ವೃತ್ತ, ಕೆಇಬಿ ಕಚೇರಿಯಿಂದ ಅಕ್ಕಮಹಾದೇವಿ ಕಾಲೇಜಿನ ವರೆಗಿನ ರಸ್ತೆ, ಬಸ್‌ ನಿಲ್ದಾಣ ಪಕ್ಕದಿಂದ ತಾಯಿ ಮಗು ವೃತ್ತದ ವರೆಗಿನ ರಸ್ತೆ, ಶರಣ ಉದ್ಯಾನದಿಂದ ಕೆಇಬಿ ವರೆಗಿನ ರಸ್ತೆಯಲ್ಲಿ ಒಳ ಚರಂಡಿ ಕಾಮಗಾರಿ ನಡೆದಿದೆ. ಅರ್ಥಮೂವರ್, ಜೆಸಿಬಿಗಳು ದಿನದ 24 ಗಂಟೆಯೂ ನೆಲ ಅಗೆಯುತ್ತಿವೆ. ಜನ ಮನೆಗಳಿಂದ ಹೊರಗೆ ಬರಲು ಸಾಧ್ಯವಾಗದಷ್ಟು ದೂಳು ಹಾರುತ್ತಿದೆ.

‘ನಗರದ ಕೆಲ ಮಾರ್ಗಗಳಲ್ಲಿ ಗುಂಡಿಗಳಲ್ಲಿ ರಸ್ತೆ ಇದೆಯೋ, ರಸ್ತೆಯಲ್ಲಿ ಗುಂಡಿಗಗಳು ಇವೆಯೋ ಎನ್ನುವುದು ತಿಳಿಯದಾಗಿದೆ. ರಸ್ತೆಯಲ್ಲಿ ಗುಂಡಿಗಳು ಬಿದ್ದು ಜನರಿಗೆ ಇನ್ನಷ್ಟು ದೂಳಿನ ಮಜ್ಜನ ಆಗುತ್ತಿದೆ’ ಎಂದು ರಾಘವೇಂದ್ರ ಕಾಲೊನಿಯ ನಿವಾಸಿ ಉದಯ ಜೀರಗೆ ಹೇಳುತ್ತಾರೆ.

‘ದೂಳಿನಿಂದ ಅಲರ್ಜಿ, ಅಸ್ತಮಾ, ಉಸಿರಾಟ ಸಮಸ್ಯೆ ಸೇರಿದಂತೆ ಜನ ನಾನಾ ಕಾಯಿಲೆಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಮೂಗು ಮುಚ್ಚಿಕೊಂಡು ಕೆಲಸಕ್ಕೆ ಹೋಗುತ್ತಿದ್ದೇನೆ. ದೂಳಿನಿಂದ ಉಸಿರುಗಟ್ಟುತ್ತಿದೆ. ಉಸಿರಾಟ ಸಮಸ್ಯೆಯಾಗಿ ಆಸ್ಪತ್ರೆಗೆ ಅಲೆಯುತ್ತಿದ್ದೇನೆ’ ಎನ್ನುತ್ತಾರೆ ಅವರು.

‘ಅಧಿಕಾರಿಗಳು ಸರಿಯಾಗಿ ಮೇಲುಸ್ತುವಾರಿ ನೋಡಿಕೊಳ್ಳದ ಕಾರಣ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ದೂಳು ಮನೆಯೊಳಗೆ ಬಂದು ಊಟದ ತಟ್ಟೆಯಲ್ಲಿ ಬೀಳುತ್ತಿದೆ. ಪ್ರತಿ ಗಂಟೆಗೊಮ್ಮೆ ಕಸಗೂಡಿಸುವುದೇ ಕೆಲಸವಾಗಿದೆ. ಬಟ್ಟೆಗಳನ್ನು ಒಣಗಿ ಹಾಕಿದರೂ ದೂಳಿಗೆ ಮತ್ತಷ್ಟು ಕೊಳೆಯಾಗುತ್ತಿವೆ. ಅಧಿಕಾರಿಗಳು ನಗರವನ್ನು ನರಕವನ್ನಾಗಿ ಸೃಷ್ಟಿ ಮಾಡಿದ್ದಾರೆ’ ಎಂದು ಬ್ಯಾಂಕ್ ಕಾಲೊನಿ ಗೃಹಿಣಿ ಅರುಣಾ ಆಕ್ರೋಶ ಹೊರ ಹಾಕಿದರು.

ದೂಳು ನಿಯಂತ್ರಿಸಲು ಮೂರು ನಾಲ್ಕು ಗಂಟೆಗೊಮ್ಮೆ ನೀರು ಸಿಂಪಡಿಸಬೇಕು, ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಬೇಕು. ಆದರೆ, ಈ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಬೈಕ್‌ ಸವಾರರು ಬೇಸರ ವ್ಯಕ್ತಪಡಿಸುತ್ತಾರೆ.

ಬೀದರ್‌–ಔರಾದ್‌ ಹೆದ್ದಾರಿ ಸಂಪೂರ್ಣ ಹಾಳಾಗಿದೆ. ರಸ್ತೆಯಲ್ಲಿ ತಗ್ಗುಗುಂಡಿಗಳು ಬಿದ್ದು ವಾಹನ ಹೋದ ತಕ್ಷಣ ದೂಳು ಏಳುತ್ತಿದೆ. ಹೆದ್ದಾರಿ ಪಕ್ಕದ ಗ್ರಾಮಗಳ ಮನೆಗಳಿಗೆ ದೂಳು ನುಗ್ಗುತ್ತಿದೆ. ದೂಳು ಬೆಳೆಗಳ ಮೇಲೂ ಬಿದ್ದು ಬೆಳೆಗಳೂ ಹಾಳಾಗುತ್ತಿವೆ ಎಂದು ಮರಕಲ್‌ದ ಲೋಕೇಶ ಹೇಳುತ್ತಾರೆ.

ವ್ಯಾಪಾರ ವಹಿವಾಟಿಗೆ ಅಡ್ಡಿ: ಹುಲಸೂರಿನ ಮಹಾತ್ಮ ಗಾಂಧಿ ವೃತ್ತದಲ್ಲಿ ಮಾರುಕಟ್ಟೆಯಲ್ಲಿ ದೂಳಿನಿಂದಾಗಿ ಜನರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಇದೆ. ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಕಚೇರಿ ಸುತ್ತಮುತ್ತಲಿನ ಪ್ರದೇಶದಲ್ಲೂ ದೂಳು ಆವರಸಿಕೊಂಡಿದೆ.
ವಾರಕ್ಕೆ ಒಂದೆರಡು ಬಾರಿ ಕಸ ಗುಡಿಸಿದರೂ ದೂಳು ಕಡಿಮೆಯಾಗಿಲ್ಲ. ವ್ಯಾಪಾರ ವಹಿವಾಟು ಮಾಡಲು ತೊಂದರೆಯಾಗುತ್ತಿದೆ. ಪಂಚಾಯಿತಿ ನಿತ್ಯ ಎರಡು ಹೊತ್ತು ನೀರು ಸಿಂಪಡಿಸುವ ಕೆಲಸ ಆಗಬೇಕು ಎಂದು ಹುಲಸೂರಿನ ನಿವಾಸಿಗಳು ಮನವಿ ಮಾಡುತ್ತಾರೆ.

ಮನವಿಗೆ ಸಿಗದ ಸ್ಪಂದನೆ: ಬಸವಕಲ್ಯಾಣ ನಗರ ಹಾಗೂ ತಾಲ್ಲೂಕಿನ ಕೆಲ‌ ಭಾಗದಲ್ಲಿ ರಸ್ತೆ‌ ಹದಗೆಟ್ಟಿದ್ದರಿಂದ ದೂಳು ಹೆಚ್ಚಿದೆ. ಎಲ್ಲೆಡೆ ಡಾಂಬರ್ ರಸ್ತೆ ಇದ್ದರೂ‌ ಕೆಲ ಸ್ಥಳಗಳಲ್ಲಿ ರಸ್ತೆ ಹದಗೆಟ್ಟಿದೆ. ನಗರದ ಬಸ್ ನಿಲ್ದಾಣದಿಂದ ಹುಲಸೂರಗೆ ಹೋಗುವ ರಸ್ತೆ ಹದಗೆಟ್ಟಿದೆ. ಅಲ್ಲಲ್ಲಿ ತಗ್ಗು ಬಿದ್ದು ಮಣ್ಣು ಹರಡಿಕೊಂಡಿದೆ.

ಬಸ್ ನಿಲ್ದಾಣ ರಸ್ತೆ ಸಧಾರಣೆಗೆ ಹಲವು ಬಾರಿ ಒತ್ತಾಯಿಸಿದರೂ ಪ್ರಯೋಜನ ಆಗಿಲ್ಲ. ಈ ರಸ್ತೆಯ ದುರಸ್ತಿ ‌ಕೈಗೊಳ್ಳಬೇಕು. ಜಾಫರವಾಡಿ ರಸ್ತೆ, ಪ್ರತಾಪುರ ಹತ್ತಿರದ ರಸ್ತೆ ಡಾಂಬರೀಕರಣ ಮಾಡಬೇಕು ಎಂದು ನಗರದ ನಿವಾಸಿ ಲಿಂಗೇಶ್ ಒತ್ತಾಯಿಸುತ್ತಾರೆ.
 

ಇನ್ನೂ ಆರು ತಿಂಗಳು ಬೇಕು

‘ಕೇಂದ್ರ ಬಸ್‌ ನಿಲ್ದಾಣದ ಪರಿಸರ ಹಾಗೂ ಶಿವನಗರದಲ್ಲಿ ಕಾಮಗಾರಿ ನಡೆದಿದೆ. ಒಳ ಚರಂಡಿ ಕಾಮಗಾರಿ ಪೂರ್ಣಗೊಳ್ಳಲು ಇನ್ನಷ್ಟು ಸಮಯ ಬೇಕಿದೆ. ನಗರದಲ್ಲಿ ಮೂರು ಹಂತದಲ್ಲಿ ಕಾಮಗಾರಿ ನಡೆಯುತ್ತಿದೆ. ಓಲ್ಡ್‌ಸಿಟಿ ಹಾಗೂ ಗುಂಪಾದಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಕೆಲ ಕಡೆ ರಸ್ತೆ ಸಹ ನಿರ್ಮಾಣ ಮಾಡಲಾಗಿದೆ’ ಎಂದು ನಗರಸಭೆ ಆಯುಕ್ತ ರವೀಂದ್ರ ಅಂಗಡಿ ಹೇಳುತ್ತಾರೆ.

‘ನಗರಸಭೆ 10 ವರ್ಷಗಳ ಹಿಂದೆ ₹ 80 ಲಕ್ಷ ವೆಚ್ಚದಲ್ಲಿ ಖರೀದಿಸಿದ್ದ ದೂಳು ಸಂಗ್ರಹಿಸುವ ವಾಹನ ಸುಸ್ಥಿತಿಯಲ್ಲಿ ಇದ್ದರೂ ಅದರ ನಿರ್ವಹಣೆಯ ವೆಚ್ಚವೇ ತಿಂಗಳಿಗೆ ₹ 2 ಲಕ್ಷ ಆಗುತ್ತಿದೆ. ಕಡಿಮೆ ವೆಚ್ಚದಲ್ಲಿ ಇನ್ನೊಂದು ವಾಹನ ಖರೀದಿಸಿ ನಗರವನ್ನು ದೂಳು ಮುಕ್ತವಾಗಿ ಮಾಡಲಾಗುವುದು’ ಎಂದು ತಿಳಿಸುತ್ತಾರೆ. ‘ನಗರದಲ್ಲಿ ಒಳಚರಂಡಿ ಕಾಮಗಾರಿಗೆ ಅಗೆದಿರುವ ರಸ್ತೆಗಳನ್ನು ಒಳಚರಂಡಿ ಮಂಡಳಿಯವರೇ ದುರಸ್ತಿ ಮಾಡಲಿದ್ದಾರೆ. ಸಿಸಿ ಹಾಗೂ ಡಾಂಬರ್‌ ರಸ್ತೆ ಎರಡನ್ನೂ ಮಾಡಲಿದ್ದಾರೆ’ ಎಂದು ಹೇಳುತ್ತಾರೆ.

ದೂಳು ರಸ್ತೆಯಿಂದ ಕಂಗೆಟ್ಟ ಪ್ರಯಾಣಿಕರು

ಔರಾದ್ ತಾಲ್ಲೂಕಿನ ವಿವಿಧೆಡೆ ಹಾಳಾದ ರಸ್ತೆ ಹಾಗೂ ದೂಳಿನಿಂದಾಗಿ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ .
ಪಟ್ಟಣದ ಸರ್ಕಾರಿ ಆಸ್ಪತ್ರೆಯಿಂದ ತಹಶೀಲ್ದಾರ್ ಕಚೇರಿ ವರೆಗೆ ರಸ್ತೆ ಹಾಳಾಗಿದೆ. ಈ ರಸ್ತೆ ಮೇಲೆ ದೊಡ್ಡ ವಾಹನ ಸಂಚರಿಸಿದರೆ ದೂಳು ಎಲ್ಲೆಡೆ ವ್ಯಾಪಿಸುತ್ತಿದೆ. ಇದರಿಂದ ರಸ್ತೆ ಪಕ್ಕದ ಅಂಗಡಿ ಮಾಲೀಕರಿಗೂ ಕಿರಿಕಿರಿ ಆಗುತ್ತಿದೆ.

‘ಬೀದರ್ –ಔರಾದ್ ಸೇರಿದಂತೆ ತಾಲ್ಲೂಕಿನಲ್ಲಿ ಅನೇಕ ರಸ್ತೆ ಹಾಳಾಗಿವೆ. ಹಾಳಾದ ರಸ್ತೆಯಿಂದ ಹೊರ ಬರುವ ದೂಳು ಜನರ ಆರೋಗ್ಯ ವಿಶೇಷವಾಗಿ ಬೈಕ್ ಸವಾರರ ಮೇಲೆ ಹೆಚ್ಚಿನ ಪರಿಣಾಮ ಉಂಟು ಮಾಡುತ್ತಿದೆ’ ಎಂದು ಹೇಳುತ್ತಾರೆ ಸಾಮಾಜಿಕ ಕಾರ್ಯಕರ್ತ ಅನಿಲ ಜಿರೋಬೆ.

ಮಳಿಗೆಗೆ ನುಗ್ಗುವ ದೂಳು

ಹುಮನಾಬಾದ್‌ನ ಹಳೆಯ ತಹಶೀಲ್ದಾರ್‌ ಕಚೇರಿ ಎದುರಿನ ರಸ್ತೆಯ ಕಾಂಕ್ರೀಟ್‌ ಮೂರು ತಿಂಗಳ ಹಿಂದೆ ಕಿತ್ತು ಹೋಗಿದೆ. ಈ ಮಾರ್ಗದಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ವಾಹನಗಳ ಅಬ್ಬರಕ್ಕೆ ದೂಳು ಅಂಗಡಿಗಳಿಗೆ ನುಗ್ಗುತ್ತಿದೆ. ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ.

ಕಿರಾಣಿ, ಬಟ್ಟೆ, ಹಣ್ಣು ಮತ್ತು ತರಕಾರಿ ವ್ಯಾಪಾರಿಗಳು ದೂಳಿನಿಂದ ಬೇಸತ್ತು ಹೋಗಿದ್ದಾರೆ. ಕೆಲವರು ಅನಾರೋಗ್ಯಕ್ಕೂ ಒಳಗಾಗಿದ್ದಾರೆ. ರಸ್ತೆ ದುರಸ್ತಿಪಡಿಸಿ ದೂಳು ಏಳದಂತೆ ನೋಡಿಕೊಳ್ಳಬೇಕು ಎಂದು ವ್ಯಾಪಾರಸ್ಥರು ಮನವಿ ಮಾಡಿಕೊಳ್ಳುತ್ತಾರೆ. ಭಾಲ್ಕಿಯ ಬಸವೇಶ್ವರ ವೃತ್ತ, ಅಂಬೇಡ್ಕರ್, ಶಿವಾಜಿ ವೃತ್ತ, ಗಡಿ ಏರಿಯಾ, ಚೌವಡಿಗೆ ಹೋಗುವ ಮಾರ್ಗದಲ್ಲಿ ಅಲ್ಲಲ್ಲಿ ತಗ್ಗು ಗುಂಡಿ ನಿರ್ಮಾಣ ಆಗಿರುವುದರಿಂದ ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳ ಓಡಾಟದ ನಂತರ ದೂಳು ಹೆಚ್ಚಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು