ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರೊಂದಿಗೆ ಜಿಲ್ಲಾಧಿಕಾರಿ ಊಟ

ಭಾಲ್ಕಿ: ಎಳ್ಳ ಅಮಾವಾಸ್ಯೆ ಸಂಭ್ರಮದಲ್ಲಿ ಭಾಗಿಯಾದ ಡಿಸಿ, ಎಸ್‌ಪಿ
Last Updated 3 ಜನವರಿ 2022, 4:34 IST
ಅಕ್ಷರ ಗಾತ್ರ

ಭಾಲ್ಕಿ: ತಾಲ್ಲೂಕಿನಲ್ಲಿ ಎಳ್ಳ ಅಮಾವಾಸ್ಯೆ ಹಬ್ಬ ಸಂಭ್ರಮ ಮನೆ ಮಾಡಿತ್ತು. ಪಟ್ಟಣ ಸೇರಿ ಗ್ರಾಮೀಣ ಭಾಗಗಳಲ್ಲಿ ಹೊಸ ವರ್ಷದ ಮೊದಲ ಮತ್ತು ರೈತರ ದೊಡ್ಡ ಹಬ್ಬ ಎಳ್ಳ ಅಮಾವಾಸ್ಯೆ ಭಾನುವಾರ ಸಂಭ್ರಮದಿಂದ ಆಚರಿಸಲಾಯಿತು.

ಪ್ರತಿವರ್ಷ ಎಳ್ಳ ಅಮಾವಾಸ್ಯೆಯನ್ನು ನಾನಾ ಕಾರಣಗಳಿಂದ ಎರಡು ದಿನ ಆಚರಣೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಎಲ್ಲ ಕಡೆಗಳಲ್ಲಿ ಒಂದೇ ದಿನ ಆಚರಣೆ ಮಾಡಿದ್ದು, ವಿಶೇಷವಾಗಿತ್ತು.

ಬೆಳಿಗ್ಗೆಯಿಂದಲೇ ರೈತರು ಹಬ್ಬದ ಅಡುಗೆ ಮಾಡಿಕೊಂಡು ಹೊಲಗಳಿಗೆ ತೆರಳಿದರು. ಬಳಿಕ ರೈತರು ಭೂಮಿ ತಾಯಿಗೆ ಪೂಜೆ ಸಲ್ಲಿಸಿ, ಚರಗ ಚೆಲ್ಲಿ ಬೆಳೆಗಳ ರಕ್ಷಣೆಗೆ ಬೇಡಿಕೊಂಡರು.

ಮನೆಮಂದಿ, ನೆಂಟರಿಷ್ಟರು, ಸಂಬಂಧಿಕರು, ಸ್ನೇಹಿತರು ಸೇರಿ ಭಜ್ಜಿ, ಜೋಳದ ರೊಟ್ಟಿ, ಸಜ್ಜಿ ರೊಟ್ಟಿ, ಹುಗ್ಗಿ, ಜೋಳದ ಅನ್ನ, ಕರ್ಜಿಕಾಯಿ ಸೇರಿ ವಿವಿಧ ಬಗೆಯ ಖಾದ್ಯಗಳನ್ನು ಸವಿದು ಖುಷಿ ಪಟ್ಟರು.

ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದ ಹಬ್ಬದ ಸಂಭ್ರಮ ಕಳೆದು ಹೋಗಿತ್ತು. ಆದರೆ, ಈ ಸಲ ಮಳೆ ಉತ್ತಮವಾಗಿ ಸುರಿದ ಪರಿಣಾಮ ಹೊಲಗಳಲ್ಲಿ ಜೋಳ, ಕಡಲೆ, ತೊಗರಿ ಸೇರಿ ನಾನಾ ಬೆಳೆಗಳು ಸಮೃದ್ಧವಾಗಿ ಬೆಳೆದಿದ್ದು, ಎಲ್ಲ ಹೊಲಗಳು ಹಸಿರಿನಿಂದ ಕಂಗೊಳಿಸುತ್ತಿರುವ ದೃಶ್ಯ ಕಂಡುಬಂತು.

ಎಲ್ಲ ಕಡೆಗಳಲ್ಲಿ ರೈತರ ಸಂಭ್ರಮ ಕಳೆ ಕಟ್ಟಿತು. ಮಕ್ಕಳು ಹೊಲಗಳಲ್ಲಿ ಗಾಳಿಪಟ ಹಾರಿಸಿ ಸಂಭ್ರಮಪಟ್ಟರೇ ಮಹಿಳೆಯರು ಜೋಕಾಲಿ ಆಡಿಖುಷಿ ಪಟ್ಟರು.

ರೈತ ಸಂಘದ ಮುಖಂಡರಿಂದ ಸನ್ಮಾನ:

ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅವರು ಬಿಡುವು ಮಾಡಿಕೊಂಡು ಜಿಲ್ಲಾ ರೈತ ಸಂಘದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ ಅವರ ಹೊಲಕ್ಕೆ ಕುಟುಂಬ ಸಮೇತ ಭೇಟಿ ನೀಡಿ ಭಜ್ಜಿ, ರೊಟ್ಟಿ ಸವಿದು ಸಂಭ್ರಮ ಪಟ್ಟರು. ಕೆಲಕಾಲ ಅಲ್ಲಿಯೇ ಸಮಯ ಕಳೆದು ಎಲ್ಲ ರೈತರೊಂದಿಗೆ ಸೇರಿ ಹಬ್ಬದ ಮಹತ್ವ ತಿಳಿದು ಕೊಂಡು ಸಂತಸ ಪಟ್ಟರು.

ಇದೇ ಸಂದರ್ಭದಲ್ಲಿ ಹೊಲಕ್ಕೆ ಭೇಟಿ ನೀಡಿದ ಡಿಸಿ ಮತ್ತು ಎಸ್‌ಪಿ ನಾಗೇಶ್ ಡಿ.ಎಲ್ ಅವರನ್ನು ಜಿಲ್ಲಾ ರೈತ ಸಂಘದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ ನೇತೃತ್ವದಲ್ಲಿ ಸನ್ಮಾನಿಸಲಾಯಿತು.

ತಾಲ್ಲೂಕು ರೈತ ಸಂಘದ ಅಧ್ಯಕ್ಷ ಬಾಬುರಾವ್ ಜೋಳದಾಪಕೆ, ಪ್ರಮುಖರಾದ ಸಿದ್ರಾಮಪ್ಪ ವಂಕೆ, ದತ್ತಾ ತಿಮ್ಮಾಜಿ, ಸಂಗಮೇಶ ಆಣದೂರೆ, ಅನಿಲ್ ಕುಮಾರ್ ಆಣದೂರೆ, ಪ್ರದೀಪ ಘಂಟೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT