ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಪದಿಂದ ಸಾಹಿತ್ಯಿಕ ಚಟುವಟಿಕೆಗಳಿಗೆ ಪ್ರೋತ್ಸಾಹ

ಕಾದಂಬರಿಗಾರ್ತಿ ಸಾಧನಾ ರಂಜೋಳಕರ್ ಹೇಳಿಕೆ
Last Updated 20 ಡಿಸೆಂಬರ್ 2020, 14:15 IST
ಅಕ್ಷರ ಗಾತ್ರ

ಬೀದರ್‌: ‘ಕನ್ನಡ ಸಾಹಿತ್ಯ ಪರಿಷತ್ತು ಎಲೆಮರೆ ಕಾಯಿಯಂತೆ ಇರುವ ಪ್ರತಿಭೆಗಳನ್ನು ಗುರುತಿಸುವ ಮೂಲಕ ಸಾಹಿತ್ಯಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದೆ’ ಎಂದು ಕಾದಂಬರಿಗಾರ್ತಿ ಸಾಧನಾ ರಂಜೋಳಕರ್ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ವತಿಯಿಂದ ಪುಷ್ಪಾ ಕನಕ ಅವರ ನಿವಾಸದಲ್ಲಿ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತು’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಾಹಿತಿ ಹಾಗೂ ಕವಿಗಳ ಮನೆಯಲ್ಲೇ ಕಾರ್ಯಕ್ರಮ ಆಯೋಜಿಸಿ ನಾಡಿನ ಜನರಿಗೆ ಅವರ ಪ್ರತಿಭೆಯನ್ನು ಪರಿಚಯಿಸುವ ಕೆಲಸ ಮಾಡುತ್ತಿರುವ ಕಾರ್ಯ ಶ್ಲಾಘನೀಯ’ ಎಂದು ಬಣ್ಣಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ‘ಕೋವಿಡ್‌ ಕಾರಣ ಫೇಸ್‍ಬುಕ್ ಲೈವ್ ಮೂಲಕ ಸಾಹಿತಿಗಳ ಬದುಕು ಮತ್ತು ಬರಹವನ್ನು ಬಿತ್ತರಿಸಲಾಗುತ್ತಿದೆ. ಪರಿಷತ್ತಿನ ಜಿಲ್ಲಾ ಘಟಕಕ್ಕೆ 50 ವರ್ಷಗಳು ಪೂರ್ಣಗೊಂಡ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಮದು ತಿಳಿಸಿದರು.

ಚುಟುಕು ಸಾಹಿತಿ ಪುಷ್ಪಾ ಕನಕ ಮಾತನಾಡಿ, ‘ಹುಮನಾಬಾದ್‌ ತಾಲ್ಲೂಕಿನ ಹಳ್ಳಿಖೇಡದ ಶಾಂತಾಬಾಯಿ ಹಾಗೂ ಸಿದ್ದಪ್ಪ ಗುನ್ನಾ ದಂಪತಿಯ ಮಗಳು ನಾನು. ಸಂತಪುರ ಹಾಗೂ ಬಸವಕಲ್ಯಾಣದಲ್ಲಿ ಪ್ರಾಥಮಿಕ ಶಿಕ್ಷಣ, ಬೀದರ್‌ನಲ್ಲಿ ಪದವಿ ಪೂರ್ಣಗೊಳಿಸಿ 1989 ರಲ್ಲಿ ದುಬಲಗುಂಡಿಯಲ್ಲಿ ಶಿಕ್ಷಕರಾಗಿ ಸೇವೆ ಆರಂಭಿಸಿದೆ’ ಎಂದು ತಿಳಿಸಿದರು.

‘ಪ್ರೌಢಶಾಲಾ ಶಿಕ್ಷಕರೊಬ್ಬರು . ಕವನಸಂಕಲನ ಹೊರತರುತ್ತಿರುವ ಬಗ್ಗೆ ಪ್ರಸ್ತಾಪಿಸಿ ನನ್ನದೊಂದು ಕವಿತೆಯನ್ನೂ ಕೇಳಿದರು. ಆಗ ನಾನೊಂದು ಕವನವನ್ನು ಬರೆದುಕೊಟ್ಟೆ ಅದು ಪುಸ್ತಕದಲ್ಲಿ ಪ್ರಕಟವೂ ಆಯಿತು. ಹಾಗೇ ನೋಡಿದರೆ ನಾನು 8ನೇ ಕ್ಲಾಸಿನಲ್ಲಿರುವಾಗಲೆ ಕವಿತೆ ಬರೆಯಲು ಶುರು ಮಾಡಿದ್ದೆ. ಧನಶ್ರೀ ಮಾಣಿಕರಾವ್ ಅವರು ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದರು’ ಎಂದು ಹೇಳಿದರು.

‘ಗುಂಡಪ್ಪ ಕನಕ ಅವರ ಕೈ ಹಿಡಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಮೇಲೆ ನನ್ನ ಪತಿ ನನ್ನ ಸಾಹಿತ್ಯಕ್ಕೆ ನೀರೇರೆದು ಪೋಷಿಸಿದರು. ಬೀದರ್‌ಗೆ ಬಂದು ನೆಲೆಸಿದ ಮೇಲೆ ದೇಶಾಂಶ ಹುಡುಗಿ, ಶಂಭುಲಿಂಗ ವಾಲ್ದೊಡ್ಡಿ, ಶಿರೋಮಣಿ ತಾರೆ, ಹಂಶಕವಿ, ಇಂದುಮತಿ ಬಂಡಿ, ಡಾ.ಎಂ.ಜಿ. ದೇಶಪಾಂಡೆ ಮೊದಲಾದವರ ಮಾರ್ಗದರ್ಶನವೂ ಲಭಿಸಿತು. ಧರಿನಾಡು ಕನ್ನಡ ಸಂಘದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಾಹಿತ್ಯ ಚಟುವಟಿಕೆಯಲ್ಲಿ ಇನ್ನಷ್ಟು ಸಕ್ರೀಯವಾದೆ’ ಎಂದರು.

‘2018 ರಲ್ಲಿ ಚಂಢಿಘಡದಲ್ಲಿ ನಡೆದ ಅಖಿಲ ಭಾರತ ಕವಯತ್ರಿಯರ ಸಮ್ಮೇಳನದಲ್ಲಿ ಭಾಗವಹಿಸಿ ಕವನ ವಾಚನ ಮಾಡಿರುವೆ. 2008ರಲ್ಲಿ ‘ವಚನ ಸುಮ’, 2013 ರಲ್ಲಿ ‘ಪುಟಾಣಿ ಬಯಕೆ’, 2017 ರಲ್ಲಿ ‘ಹನಿ ಮಂಜರಿ’, ಪುಸ್ತಕಗಳು ಸಾಹಿತ್ಯಲೋಕಕ್ಕೆ ಅರ್ಪಿತಗೊಂಡಿವೆ’ ಎಂದು ಸಂತಸ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್.ಮನೋಹರ ಮಾತನಾಡಿದರು. ರೇಣುಕ ಮಠ ಸಂವಾದ ನಡೆಸಿಕೊಟ್ಟರು. ಗುಂಡಪ್ಪ ಕನಕ, ವೀರೇಶ್ವರಿ ಮೂಲಗೆ, ಶ್ವೇತಾ ಕನಕ, ಸುಮಿತ ಕನಕ, ರತ್ನಮ್ಮ, ಮಂಗಲಾ ಚನಶೆಟ್ಟಿ, ಮಂಗಲಾ ಇದ್ದರು.

ಕಲ್ಯಾಣರಾವ್ ಚಳಕಾಪುರೆ ನಿರೂಪಿಸಿದರು. ಮೇನುಕಾ ಪಾಟೀಲ ಸ್ವಾಗತಿಸಿದರು.ಶಿವಕುಮಾರ ಚನಶೆಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT