ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷಣ: 617 ಸ್ಥಾನಗಳು ಭರ್ತಿ,163 ಖಾಲಿ

ಇಂದಿನಿಂದ ಸರ್ಕಾರಿ ಇಂಗ್ಲಿಷ್‌ ಮಾಧ್ಯಮ ಶಾಲೆ ಆರಂಭ
Last Updated 10 ಜೂನ್ 2019, 19:30 IST
ಅಕ್ಷರ ಗಾತ್ರ

ಬೀದರ್‌: ಬಡ ಕುಟುಂಬಗಳ ಮಕ್ಕಳಿಗೂ ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷಣ ನೀಡುವ ದಿಸೆಯಲ್ಲಿ ರಾಜ್ಯ ಸರ್ಕಾರ ಜಿಲ್ಲೆಯಲ್ಲಿ ಆರಂಭಿಸಿರುವ 26 ಶಾಲೆಗಳಲ್ಲಿ ಜೂನ್‌ 10ರ ವರೆಗೆ 617 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. 163 ಸ್ಥಾನಗಳು ಈಗಲೂ ಖಾಲಿ ಇವೆ.

ಜಿಲ್ಲೆಯ ಎಂಟು ಶಾಲೆಗಳಲ್ಲಿ ಪ್ರವೇಶ ಪ್ರಕ್ರಿಯೆ ಮುಕ್ತಾಯವಾಗಿದೆ. ಸೋಮವಾರ ಅಧಿಕೃತವಾಗಿ ಶಾಲೆಗಳು ಶುರುವಾಗಬೇಕಿತ್ತು. ಸಾಹಿತಿ ಗಿರಿಶ್ ಕಾರ್ನಾಡ್‌ ಅವರ ನಿಧನದಿಂದಾಗಿ ಸರ್ಕಾರ ಸೋಮವಾರ ರಜೆ ಘೋಷಿಸಿದ ಕಾರಣ ಮಂಗಳವಾರ ಶಾಲೆಗಳು ಕಾರ್ಯಾರಂಭ ಮಾಡಲಿವೆ.

ಬೀದರ್ ತಾಲ್ಲೂಕಿನ ಅಮಲಾಪುರ, ಮನ್ನಳ್ಳಿ, ಹುಮನಾಬಾದ್ ತಾಲ್ಲೂಕಿನ ದುಬಲಗುಂಡಿ, ಭಾಲ್ಕಿ ತಾಲ್ಲೂಕಿನ ಹಾಲಹಳ್ಳಿ, ಬಸವಕಲ್ಯಾಣ ತಾಲ್ಲೂಕಿನ ಕಲಖೋರಾ, ಮುಡಬಿ, ಚಿಟಗುಪ್ಪ ತಾಲ್ಲೂಕಿನ ಬೇಮಳಖೇಡಾ, ಕಮಲನಗರ ತಾಲ್ಲೂಕಿನ ಠಾಣಾಕುಶನೂರಲ್ಲಿ ಎಲ್ಲ 30 ಸ್ಥಾನಗಳಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ.

ಬೀದರ್‌ ತಾಲ್ಲೂಕಿನ ಚಿಲ್ಲರ್ಗಿ, ಹುಮನಾಬಾದ್ ಪಟ್ಟಣ, ಹುಮನಾಬಾದ್ ತಾಲ್ಲೂಕಿನ ಹಂದಿಕೇರಾ, ಔರಾದ್ ಪಟ್ಟಣ, ಔರಾದ್‌ ತಾಲ್ಲೂಕಿನ ಹಂಗರಗಾ, ಭಾಲ್ಕಿ ಪಟ್ಟಣ, ಭಾಲ್ಕಿ ತಾಲ್ಲೂಕಿನ ಜೋಳದಾಬಕಾ, ಚಿಟಗುಪ್ಪ ತಾಲ್ಲೂಕಿನ ಮನ್ನಾಎಖ್ಖೆಳ್ಳಿ ಹಾಗೂ ಬಸವಕಲ್ಯಾಣದ ಏಕಲೂರದಲ್ಲಿ 20ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.

ಜಿಲ್ಲೆಯ ಎಂಟು ಶಾಲೆಗಳಿಗೆ ಪಾಲಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿಲ್ಲ. ಶಿಕ್ಷಣ ಇಲಾಖೆ ಅಧಿಕಾರಿಗಳು ಜನಜಾಗೃತಿ ಮೂಡಿಸುವ ಮೂಲಕ ಮಕ್ಕಳನ್ನು ಸರ್ಕಾರಿ ಶಾಲೆಗೆ ಕರೆ ತರಲು ಪ್ರಯತ್ನ ನಡೆಸಿದ್ದಾರೆ.

‘ಜಿಲ್ಲೆಯ ಕುಶನೂರು ಹಾಗೂ ಬೇಮಳಖೇಡಾದಲ್ಲಿ ನಿರೀಕ್ಷೆಗೂ ಮೀರಿ ಅರ್ಜಿಗಳು ಬಂದಿವೆ. 60 ಮಕ್ಕಳಿಂದ ಅರ್ಜಿ ಬಂದರೆ ಇನ್ನೊಂದು ವಿಭಾಗವನ್ನು ತೆರೆಯುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಈ ದಿಸೆಯಲ್ಲಿ ಸಿದ್ಧತೆಗಳು ನಡೆದಿವೆ’ ಎಂದು ಡಿಡಿಪಿಐ ಸಿ.ಚಂದ್ರಶೇಖರ ಹೇಳುತ್ತಾರೆ.

ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಚಿತ್ರಕಲಾ ಶಿಕ್ಷಕರ ನೆರವಿನೊಂದಿಗೆ ಪ್ರತಿ ಶಾಲೆಯಲ್ಲೂ ಇಂಗ್ಲಿಷ್‌ ಅಕ್ಷರ ಮಾಲೆ, ಕಾರ್ಟೂನ್‌ ಹಾಗೂ ಮಕ್ಕಳ ಚಿತ್ರಗಳನ್ನು ಬಿಡಿಸಿ ಕೊಠಡಿಯ ಅಂದವನ್ನು ಹೆಚ್ಚಿಸಲಾಗಿದೆ.

‘ಖಾಸಗಿ ಶಾಲೆಯ ಮಾದರಿಯಲ್ಲಿ ಸರ್ಕಾರಿ ಶಾಲೆಯನ್ನು ಆರಂಭಿಸಲಾಗಿದೆ. ಹೀಗಾಗಿ ನನ್ನ ಮಗನನ್ನು ಸರ್ಕಾರಿ ಇಂಗ್ಲಿಷ್‌ ಮಾಧ್ಯಮ ಶಾಲೆಗೆ ಸೇರಿಸಿದ್ದೇನೆ’ ಎನ್ನುತ್ತಾರೆ ಠಾಣಾಕುಶನೂರಿನ ಸತೀಶ ಜೀರಗೆ.

‘ರಾಜ್ಯದ ಗಡಿ ಅಂಚಿನಲ್ಲಿರುವ ಕಮಲನಗರ ತಾಲ್ಲೂಕಿನ ಠಾಣಾಕುಶನೂರಿನಲ್ಲಿ ಇಂಗ್ಲಿಷ್‌ ಮಾಧ್ಯಮ ಶಾಲೆಯನ್ನು ಆರಂಭಿಸುವ ಮೂಲಕ ರಾಜ್ಯ ಸರ್ಕಾರ ಬಡ ಕುಟುಂಬಗಳ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕುವಂತೆ ಮಾಡಿದೆ. ಗಡಿ ಗ್ರಾಮಸ್ಥರಿಗೆ ಸಂತಸ ಉಂಟು ಮಾಡಿದೆ’ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT