ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಖಟಕಚಿಂಚೋಳಿ: ಕಲಾ ವಿಭಾಗದ ವಿದ್ಯಾರ್ಥಿಗಳ ದಾಖಲಾತಿ ಕುಸಿತ

ಹಾಲಹಳ್ಳಿ (ಕೆ) ಸರ್ಕಾರಿ ಪದವಿಪೂರ್ವ ಕಾಲೇಜು; ಸಾಕಾರವಾಗದ ನಿರೀಕ್ಷಿತ ಉದ್ದೇಶ
Published 13 ಜೂನ್ 2024, 5:09 IST
Last Updated 13 ಜೂನ್ 2024, 5:09 IST
ಅಕ್ಷರ ಗಾತ್ರ

ಖಟಕಚಿಂಚೋಳಿ: ಹೋಬಳಿಯ ಹಾಲಹಳ್ಳಿ (ಕೆ) ಗ್ರಾಮದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವರ್ಷದಿಂದ ವರ್ಷಕ್ಕೆ ಕಲಾ ವಿಭಾಗದ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಕುಸಿಯುತ್ತಲೇ ಸಾಗಿದೆ.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಸರ್ಕಾರ 2007-08 ರಲ್ಲಿ ಇಲ್ಲಿ ಪದವಿಪೂರ್ವ ಕಾಲೇಜು ಆರಂಭಿಸಿದೆ. ಆದರೆ ಖಾಸಗಿ ಕಾಲೇಜುಗಳ ಹಾವಳಿ ಹಾಗೂ ಕಲಾ ವಿಭಾಗದ ಬಗ್ಗೆ ವಿದ್ಯಾರ್ಥಿಗಳಿಗೆ ಇರುವ ನಿರಾಸಕ್ತಿಯಿಂದ ದಾಖಲಾತಿಯಲ್ಲಿ ಇಳಿಕೆಯಾಗುತ್ತಿದೆ ಎನ್ನಲಾಗುತ್ತಿದೆ.

ಪ್ರಸ್ತುತ ದಿನಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ಕಲಾ ವಿಭಾಗ ಆಯ್ಕೆ ಮಾಡಲು ಮುಂದೆ ಬರುತ್ತಿಲ್ಲ. ದಾಖಲಾತಿ ಪಡೆದರೂ ಕಾಲೇಜಿಗೆ ಬರುವುದಿಲ್ಲ. ಅಲ್ಲದೇ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಿಗೆ ಹೋಗಲು ಬಸ್ ವ್ಯವಸ್ಥೆ ಇರುವುದರಿಂದ ಗ್ರಾಮದ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ವಿದ್ಯಾರ್ಥಿಗಳು ಈ ಕಾಲೇಜಿಗೆ ಪ್ರವೇಶ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ.

‘ಪ್ರಸ್ತುತ ದಿನಗಳಲ್ಲಿ ವಿಜ್ಞಾನ ವಿಭಾಗಕ್ಕೆ ಉತ್ತಮ ಭವಿಷ್ಯವಿದೆ ಎಂಬ ಪಾಲಕರ ಮನಸ್ಥಿತಿಯಿಂದ ವಿದ್ಯಾರ್ಥಿಗಳು ಕಲಾ ವಿಭಾಗ ಆಯ್ಕೆ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ' ಎಂದು ಸಾಮಾಜಿಕ ಕಾರ್ಯಕರ್ತ ಬಸವರಾಜ ಪಾಟೀಲ ಹೇಳುತ್ತಾರೆ.

ಕಳೆದ ವರ್ಷ ಪ್ರಥಮ ಪಿಯುಸಿಯ ಕಲಾ ವಿಭಾಗದಲ್ಲಿ 11 ಹಾಗೂ ವಾಣಿಜ್ಯ ವಿಭಾಗದಲ್ಲಿ 20 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಕೇವಲ ಎರಡೂ ವಿಭಾಗ ಸೇರಿ 8 ವಿದ್ಯಾರ್ಥಿಗಳು ಸದ್ಯ ಪ್ರವೇಶ ಪಡೆದಿದ್ದಾರೆ. ಪ್ರವೇಶ ಪಡೆಯಲು ಇನ್ನೂ ಸಮಯಾವಕಾಶವಿದೆ. ಹೀಗಾಗಿ ದಾಖಲಾತಿ ಹೆಚ್ಚಳವಾಗಲಿದೆ' ಎನ್ನುತ್ತಾರೆ ಕಾಲೇಜಿನ ಉಪನ್ಯಾಸಕರು.

ಕಲಾವಿಭಾಗದಲ್ಲಿ ಆರು, ವಾಣಿಜ್ಯ ವಿಭಾಗದಲ್ಲಿ 3 ಸೇರಿ 9 ಮಂದಿ ಉಪನ್ಯಾಸಕರು ಇದ್ದಾರೆ. ವಾಣಿಜ್ಯ ವಿಷಯ  ಬೋಧನೆ ಮಾಡುವ ಶಾಂತಲಾ ಅವರು ಹೆಚ್ಚುವರಿಯಾಗಿ ಪ್ರಾಚಾರ್ಯರ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ.

‘ಸದ್ಯ ನಮ್ಮ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆಯಿಲ್ಲ. ಎಲ್ಲ ವಿಷಯಗಳನ್ನು ಬೋಧಿಸುವ ನುರಿತ ಉಪನ್ಯಾಸಕರಿದ್ದಾರೆ. ಪ್ರಸಕ್ತ ಸಾಲಿನಲ್ಲಿ ದಾಖಲಾತಿ ಹೆಚ್ಚಿಸುವ ಉದ್ದೇಶದಿಂದ ಈಗಾಗಲೇ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಿಗೆ ಹೋಗಿ ಪಾಲಕರಿಗೆ ತಿಳಿ ಹೇಳಲಾಗಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾದಲ್ಲಿ ಆಟೊವ್ಯವಸ್ಥೆ ಮಾಡುವ ಭರವಸೆ ನೀಡಲಾಗಿದೆ' ಎಂದು ಪ್ರಾಚಾರ್ಯರಾದ ಶಾಂತಲಾ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.

' ಸದ್ಯ ಗ್ರಾಮದಲ್ಲಿ ಸುಸಜ್ಜಿತ ಕಟ್ಟಡ, ಎಲ್ಲ ವಿಷಯ ಬೋಧಿಸುವ ಉಪನ್ಯಾಸಕರಿದ್ದಾರೆ. ಹೀಗಾಗಿ ಸುತ್ತಮುತ್ತಲಿನ ಹಳ್ಳಿಗಳ ವಿದ್ಯಾರ್ಥಿಗಳು ಬರಲು ಬಸ್ ವ್ಯವಸ್ಥೆ ಕಲ್ಪಿಸಬೇಕು. ಸದ್ಯ ಬೀದರ್ ನಿಂದ ಸಂಗೋಳಗಿವರೆಗೆ ಬರುವ ಬಸ್ ಹಾಲಹಳ್ಳಿವರೆಗೆ ಬಂದು ಮರಳಿ ಹೋಗಬೇಕು. ಅಂದಾಗ ಮಾತ್ರ ದಾಖಲಾತಿ ಹೆಚ್ಚಳವಾಗುತ್ತದೆ' ಎಂದು ಗ್ರಾಮದ ಹಿರಿಯರಾದ ರವಿ ಗಂಗಶೆಟ್ಟಿ ತಿಳಿಸುತ್ತಾರೆ.

ಸರ್ಕಾರಿ ಪಿಯು ಕಾಲೇಜು­ಗ­ಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ವರ್ಷದಿಂದ ವರ್ಷಕ್ಕೆ ತೀವ್ರ ಕುಸಿತ ಕಾಣುತ್ತಿದೆ. ದುಬಲಗುಂಡಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸೇರಿ­­ದಂತೆ ಜಿಲ್ಲೆಯ ಹತ್ತಾರು ಕಾಲೇ­ಜು­­ಗಳಲ್ಲಿ ವಿದ್ಯಾರ್ಥಿಗಳ ಕೊರತೆ ಎದು­ರಾಗಿ, ಕಾಲೇಜುಗಳನ್ನೇ ಮುಚ್ಚಬೇ­ಕಾದ ಸ್ಥಿತಿ ಬಂದೊದಗಿದೆ' ಎಬಿವಿಪಿಯ ರೇವಣಸಿದ್ಧ ಜಾಡರ್ ಕಳವಳ ವ್ಯಕ್ತಪಡಿಸುತ್ತಾರೆ.

ಕಾಲೇಜಿನ ಸ್ವಾಗತ ಸಮಾರಂಭ
ಕಾಲೇಜಿನ ಸ್ವಾಗತ ಸಮಾರಂಭ
ತರಗತಿ ಕೋಣೆಯಲ್ಲಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು
ತರಗತಿ ಕೋಣೆಯಲ್ಲಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು
ನಮ್ಮಲ್ಲಿ ಎಲ್ಲ ವಿಷಯಗಳನ್ನು ಬೋಧಿಸುವ ನುರಿತ ಉಪನ್ಯಾಸಕರಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ದುಬಾರಿ ಶುಲ್ಕ ನೀಡಿ ಖಾಸಗಿ ಕಾಲೇಜಿಗಳತ್ತ ಹೋಗದೇ ಸರ್ಕಾರಿ ಕಾಲೇಜಿನಲ್ಲಿ ಪ್ರವೇಶ ಪಡೆದು ಉತ್ತಮ ಫಲಿತಾಂಶ ಪಡೆಯಬೇಕು.
–ಶಾಂತಲಾ ಪ್ರಾಚಾರ್ಯರು ಸರ್ಕಾರಿ ಪದವಿಪೂರ್ವ ಕಾಲೇಜು ಹಾಲಹಳ್ಳಿ(ಕೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT