ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

371(ಜೆ): ಕಲಬುರ್ಗಿಯಲ್ಲಿ ಟ್ರಿಬ್ಯೂನಲ್ ಸ್ಥಾಪಿಸಿ

ಹೈ.ಕ. ಹೋರಾಟ ಸಮಿತಿ ಮುಖಂಡ ರಜಾಕ್ ಉಸ್ತಾದ್ ಆಗ್ರಹ
Last Updated 4 ಜನವರಿ 2021, 14:10 IST
ಅಕ್ಷರ ಗಾತ್ರ

ಬೀದರ್: ಸಂವಿಧಾನದ 371(ಜೆ) ಕಲಂಗೆ ತಿದ್ದುಪಡಿ ತಂದು ಕಲ್ಯಾಣ ಕರ್ನಾಟಕ ಭಾಗಕ್ಕೆ ಕಲ್ಪಿಸಿರುವ ವಿಶೇಷ ಸ್ಥಾನಮಾನಕ್ಕೆ ಸಂಬಂಧಿಸಿದ ವಾಜ್ಯಗಳ ಪರಿಹಾರಕ್ಕಾಗಿ ಕಲಬುರ್ಗಿಯಲ್ಲಿ ಟ್ರಿಬ್ಯೂನಲ್ ಸ್ಥಾಪಿಸಬೇಕು ಎಂದು ರಾಯಚೂರಿನ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಮುಖಂಡ ಅಬ್ದುಲ್ ರಜಾಕ್ ಬೇಡಿಕೆ ಮಂಡಿಸಿದರು.

ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ವತಿಯಿಂದ ನಗರದ ಕರ್ನಾಟಕ ಸಾಹಿತ್ಯ ಸಂಘದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನದ ಕಲಂ 371(ಜೆ) ತಿದ್ದುಪಡಿ ಕಾಯ್ದೆ ಸಾಧಕ- ಬಾಧಕ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಈ ಭಾಗದ ಸಮಗ್ರ ಅಭಿವೃದ್ಧಿಯಾಗಬೇಕಾದರೆ ವಿಭಾಗೀಯ ಕೇಂದ್ರದಲ್ಲಿ ರಾಜ್ಯ ಸರ್ಕಾರದ ಎಲ್ಲ ವಿಭಾಗೀಯ ಕಚೇರಿಗಳ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು.

371(ಜೆ) ತಿದ್ದುಪಡಿ ಕಾಯ್ದೆ ಜಾರಿಯಾಗಿ ಏಳು ವರ್ಷಗಳಾದರೂ ಅಂದುಕೊಂಡಷ್ಟು ಅಭಿವೃದ್ಧಿ ಆಗಿಲ್ಲ. ಈ ಭಾಗದವರಿಗೆ ರಾಜ್ಯಮಟ್ಟದಲ್ಲಿ ಶೇ 8 ರಷ್ಟು ಮೀಸಲಾತಿ ಇದ್ದರೂ, ಅನೇಕ ವಿಭಾಗಗಳಲ್ಲಿ ಹುದ್ದೆಗಳನ್ನು ಬೇರ್ಪಡಿಸಿಲ್ಲ. ಕೆಎಸ್‍ಆರ್‍ಟಿಸಿ, ಕೆಎಂಎಫ್‍ನಲ್ಲಿ ಈ ಭಾಗದವರಿಗೆ ಮೀಸಲಾತಿ ಕಲ್ಪಿಸಿಲ್ಲ ಎಂದು ದೂರಿದರು.

ಏಳು ವರ್ಷಗಳ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ರೂ. 8,650 ಕೋಟಿ ಅನುದಾನ ಒದಗಿಸಲಾಗಿದೆ. ಆದರೆ, ಈ ಪೈಕಿ, 3,180 ಕೋಟಿ ಮಾತ್ರ ಖರ್ಚಾಗಿದೆ. ಉಳಿದ ಅನುದಾನ ಕೇಳಿದರೆ ಹಣ ಖರ್ಚಾದ ನಂತರ ಕೊಡುವ ಆಶ್ವಾಸನೆ ನೀಡಲಾಗುತ್ತಿದೆ. ನಾವು ಯಾವ ಪಕ್ಷದ ವಿರೋಧಿಗಳೂ ಅಲ್ಲ. ವ್ಯವಸ್ಥೆಯನ್ನು ಮಾತ್ರ ವಿರೋಧಿಸುತ್ತಿದ್ದೇವೆ ಎಂದು ತಿಳಿಸಿದರು.

ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಲಬುರ್ಗಿಯಲ್ಲಿ ನಡೆದ ಸಭೆಯಲ್ಲಿ ಈ ಭಾಗದಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಆರು ತಿಂಗಳಲ್ಲಿ ಭರ್ತಿ ಮಾಡುವ ಭರವಸೆ ನೀಡಲಾಗಿತ್ತು. ಆದರೆ, ಪ್ರಾದೇಶಿಕ ಆಯುಕ್ತರು ಸರಿಯಾಗಿ ಮಾಹಿತಿ ನೀಡದ ಕಾರಣ, ಈವರೆಗೂ ಜಾರಿಯಾಗಿಲ್ಲ. ಕಾಯ್ದೆ ಸಮರ್ಪಕ ಅನುಷ್ಠಾನದಲ್ಲಿ ನಾವು ಹಿಂದೆ ಬಿದ್ದಿದ್ದೇವೆ ಎಂದು ಹೇಳಿದರು.

ಸಮಿತಿಯ ವಿಭಾಗೀಯ ಪ್ರಧಾನ ಕಾರ್ಯದರ್ಶಿ ಅನಿಲಕುಮಾರ ಬೆಲ್ದಾರ್ ಮಾತನಾಡಿ, ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರುತ್ತಿದೆ. ಈ ಭಾಗದ ಅಭಿವೃದ್ಧಿಗಾಗಿ ಸಮಿತಿಯ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ತಿಳಿಸಿದರು.

ಸಮಿತಿಯ ವಿಭಾಗೀಯ ಉಪಾಧ್ಯಕ್ಷ ಪ್ರೊ. ದೇವೇಂದ್ರ ಕಮಲ್ ಮಾತನಾಡಿ, 371(ಜೆ) ತಿದ್ದುಪಡಿ ಕಾಯ್ದೆ ಜಾರಿಯ ನಂತರ ಬಹಳಷ್ಟು ಬದಲಾವಣೆ ಆಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಘಟಕದ ಅಧ್ಯಕ್ಷ ಪಂಡಿತರಾವ್ ಚಿದ್ರಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್, ಚನ್ನಬಸಪ್ಪ ಹಾಲಹಳ್ಳಿ, ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಜಗನ್ನಾಥ ಹೆಬ್ಬಾಳೆ, ವಿಜಡಂ ಕಾಲೇಜು ಕಾರ್ಯದರ್ಶಿ ಮಹಮ್ಮದ್ ಆಸಿಫೊದ್ದಿನ್, ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಜಿ. ಶೆಟಕಾರ್, ಮುಖಂಡರಾದ ಅಬ್ದುಲ್ ಮನ್ನಾನ್ ಸೇಠ್, ಮಹಮ್ಮದ್ ನಿಜಾಮೊದ್ದಿನ್ ಇದ್ದರು.

ಶಂಕರರಾವ್ ಹೊನ್ನಾ ಸ್ವಾಗತಿಸಿದರು. ಡಾ. ರಾಜಕುಮಾರ ಹೆಬ್ಬಾಳೆ ನಿರೂಪಿಸಿದರು.

ಸಮಿತಿಯಿಂದ ನಾಲ್ಕು ನಿರ್ಣಯ

ವಿಚಾರ ಸಂಕಿರಣದಲ್ಲಿ ಒಟ್ಟು ನಾಲ್ಕು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಕಲಂ 371(ಜೆ) ಆಯೋಗ ರಚಿಸಬೇಕು, 371(ಜೆ) ವ್ಯಾಜ್ಯಗಳ ಪರಿಹಾರಕ್ಕಾಗಿ ಕಲಬುರ್ಗಿಯಲ್ಲೇ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ ರಚಿಸಬೇಕು, ವಿಭಾಗೀಯ ಕಚೇರಿಗಳನ್ನು ಈ ಭಾಗಕ್ಕೆ ಸ್ಥಳಾಂತರಿಸಬೇಕು ಹಾಗೂ 371(ಜೆ) ತಿದ್ದುಪಡಿ ಕಾಯ್ದೆಯಲ್ಲಿನ ದೋಷಗಳನ್ನು ಸರಿಪಡಿಸಬೇಕು ಎನ್ನುವ ನಿರ್ಣಯ ಕೈಗೊಳ್ಳಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT