ಸೋಮವಾರ, ಆಗಸ್ಟ್ 2, 2021
20 °C

ಕೃಷಿಕರಲ್ಲಿ ಸಂಭ್ರಮ ಹೆಚ್ಚಿಸಿದ ಕಾರಹುಣ್ಣಿಮೆ: ಸಕಾಲಕ್ಕೆ ಸುರಿದ ಮುಂಗಾರು ಮಳೆ

ವೀರೇಶ್‌ ಎನ್.ಮಠಪತಿ Updated:

ಅಕ್ಷರ ಗಾತ್ರ : | |

Prajavani

ಚಿಟಗುಪ್ಪ: ಮುಂಗಾರು ಮಳೆ ಬಿತ್ತನೆಗೆ ಅನುಕೂಲ ಆಗುವಷ್ಟು ಸಕಾಲಕ್ಕೆ ಸುರಿದಿದ್ದರಿಂದ ಕೃಷಿಕರಲ್ಲಿ ಕೋವಿಡ್‌ ಮಧ್ಯದಲ್ಲಿಯೂ ಕಾರಹುಣ್ಣಿಮೆಯ ಸಂಭ್ರಮ ಹೆಚ್ಚಿಸಿದೆ.

ನಾಲ್ಕೈದು ದಿನಗಳಿಂದ ಪಟ್ಟಣದ ಬಸವರಾಜ್‌ ವೃತ್ತದ ಬದಿಯಲ್ಲಿರುವ ಅಂಗಡಿಗಳಲ್ಲಿ ‘ಕಾರಹುಣ್ಣಿಮೆ’ ಸಂತೆ ಜಮಾಯಿಸಿದೆ. ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳ ರೈತರು ಸೇರಿದಂತೆ ದೂರದೂರಿನ ಕೃಷಿಕರು ಎತ್ತುಗಳ ಅಲಂಕಾರಿಕ ವಸ್ತುಗಳ ಖರೀದಿಗಾಗಿ ಪಟ್ಟಣಕ್ಕೆ ಬರುತ್ತಿದ್ದಾರೆ.

‘ಕಾರಹುಣ್ಣಿಮೆ ಸಂಭ್ರಮ ತಾತ–ಮುತ್ತಾತಂದಿರ ಕಾಲದಿಂದಲೂ ಸಾಗಿಬಂದಿದೆ. ಇದಕ್ಕೂ ಮಳೆಗೂ ಸಂಬಂಧವಿಲ್ಲ. ಹುಣ್ಣಿಮೆ ಮುನ್ನ ಸಾಕಷ್ಟು ಮಳೆ ಸುರಿದು, ಹೊಲದಲ್ಲಿ ಮುಂಗಾರು ನಳನಳಿಸುತ್ತಿದ್ದರೆ ನಮ್ಮ ಸಡಗರ ಆಗಸದೆತ್ತರಕ್ಕಿರುತ್ತದೆ. ಮಳೆ ಆಗದಿದ್ದರೂ ಸಹ ಸಂಪ್ರದಾಯದ ಆಚರಣೆ ಬಿಟ್ಟಿಲ್ಲ’ ಎಂದು ತಾಲ್ಲೂಕಿನ ನಿರ್ಣಾ ಗ್ರಾಮದ ಶಂಕರೆಪ್ಪ ಹೇಳಿದರು.

‘ಈ ಹಿಂದೆ ನಮ್ಮೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎತ್ತುಗಳಿದ್ದವು. ಇದೀಗ 10 ಜೋಡಿ ಎತ್ತುಗಳಿವೆ. ಬಸವಣ್ಣ ಇದ್ದವರ ಮನೆಯ ಕಾರ ಹುಣ್ಣಿಮೆ ಸಂಭ್ರಮವೇ ಬೇರೆ. ಎತ್ತುಗಳಿಲ್ಲದವರ ಮನೆಯವರ ಸಂಪ್ರದಾಯಿಕ ಆಚರಣೆಯೇ ಬೇರೆ. ಎತ್ತುಗಳಿಗೆ ನಸುಕಿನಲ್ಲೇ ಸ್ನಾನ ಮಾಡಿಸಿ, ಶ್ರದ್ಧಾಭಕ್ತಿಯಿಂದ ಪೂಜಿಸುತ್ತೇವೆ. ಹೊಸ ಹಗ್ಗ, ಹಣೆಪಟ್ಟಿ, ಗೆಜ್ಜೆ ಸರ, ಮೂಗುದಾರ, ಕೊರಳಗಂಟೆ, ಕೊರಳಿಗೆ ಅಂಗಡ, ಬಾರು, ದೃಷ್ಟಿ ಮಣಿ, ಜೂಲ, ಮಿಣಿಯೊಂದಿಗೆ ಅಲಂಕರಿಸಿ ರಂಗುರಂಗಿನ ಬಣ್ಣ ಬಳಿದು ಸಂಭ್ರಮಿಸುತ್ತೇವೆ’ ಎಂದು ರೈತ ಜಗಪ್ಪ ಹೇಳುತ್ತಾರೆ.

‘ಸಂಜೆ ಊರ ಹನುಮಾನ ಮಂದಿರದ ಮುಂದೆ ಎತ್ತುಗಳನ್ನು ಓಡಿಸಿ ಸಂಭ್ರಮ ಪಡುತ್ತೇವೆ. ಈ ಸಂದರ್ಭವೇ ವರ್ಷದ ಬೆಳೆಯ ಸ್ಥಿತಿ–ಗತಿ ತಿಳಿದುಕೊಳ್ಳುವ ‘ಕರಿ’ ಆಚರಣೆಯನ್ನು ನಡೆಸುತ್ತೇವೆ’ ಎಂದು ಮುತ್ತಂಗಿ ಗ್ರಾಮದ ಕಲ್ಲಪ್ಪ ತಿಳಿಸಿದರು.

ಪಟ್ಟಣದ ವ್ಯಾಪಾರಿಗಳು ಸೇರಿದಂತೆ ಬೇರೆ ಕಡೆಗಳಿಂದಲೂ ವ್ಯಾಪಾರಸ್ಥರು ಆಗಮಿಸಿ ಕರಿಮುಲ್ಲಾ ಶಾ ದರ್ಗಾ ಪಕ್ಕದಲ್ಲಿ ಕುಳಿತು ಎತ್ತುಗಳನ್ನು ಸಿಂಗರಿಸುವ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ.

‘ಸರ್ಕಾರ ಕೊರೊನಾ ಸೋಂಕು ನಿಯಂತ್ರಣಕ್ಕೆ ಲಾಕ್‌ಡೌನ್‌ ಘೋಷಿಸಿದ್ದರಿಂದ ಈ ಬಾರಿ ಕಡಿಮೆ ಪ್ರಮಾಣದ ಸಾಮಗ್ರಿಗಳು ಮಾರಾಟಕ್ಕೆ ತರಲಾಗಿತ್ತು. ಕಳೆದ ಎರಡು ದಿನಗಳಿಂದ ಲಾಕ್‌ಡೌನ್‌ ಹಿಂಪಡೆದಿದ್ದರಿಂದ ರೈತರಲ್ಲಿ ಹರ್ಷ ಉಂಟಾಗಿದೆ. ಅವರು ಕಾರಹುಣ್ಣಿಮೆ ಆಚರಣೆಗೆ ಮಾರುಕಟ್ಟೆಗೆ ಆಗಮಿಸಿ ಸಾಮಗ್ರಿಗಳು ಖರೀದಿಸುತ್ತಿರುವುದರಿಂದ ನಷ್ಟದಿಂದ ಹೊರಬಂದಂತಾಗಿದೆ’ ಎಂದು ವರ್ತಕ ಶ್ರೀನಿವಾಸ ಬುದ್ದಾ ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು