ಶನಿವಾರ, ಅಕ್ಟೋಬರ್ 16, 2021
29 °C
ಕೆಡಿಎಸ್‌ಎಸ್ ರಾಜ್ಯ ಸಂಘಟನಾ ಸಂಚಾಲಕ ರಮೇಶ ಡಾಕುಳಗಿ ಹೇಳಿಕೆ

ಶೋಷಿತ ಸಮುದಾಯದ ಜನಜಾಗೃತಿ ಸಮಾವೇಶ ಡಿ.6ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಪರಿಶಿಷ್ಟರ ಪಟ್ಟಿಯಲ್ಲಿ ಸೇರಿಕೊಂಡಿರುವ ಸ್ಪೃಶ್ಯ ಸಮುದಾಯಗಳು ಅಸ್ಪೃಶ್ಯ ಸಮುದಾಯಗಳ ರಾಜಕೀಯ ಅಧಿಕಾರ ಹಾಗೂ ಸೌಲಭ್ಯಗಳನ್ನು ಕಬಳಿಸಿ ಶೋಷಿತರನ್ನು ಮೂಲೆಗುಂಪು ಮಾಡಿವೆ. ಶೋಷಿತ ಸಮುದಾಯದ ಜಾಗೃತಿಗಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)  ಔರಾದ್‌ ಹಾಗೂ ಕಮಲನಗರ ತಾಲ್ಲೂಕಿನಲ್ಲಿ ಜನಜಾಗೃತಿ ಹಾಗೂ ಐಕ್ಯತಾ ಸಮಾವೇಶ ಏರ್ಪಡಿಸಲು ನಿರ್ಧರಿಸಿದೆ.

ಡಿಸೆಂಬರ್ 6ರಂದು ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದಂದು ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ರಮೇಶ ಡಾಕುಳಗಿ ತಿಳಿಸಿದ್ದಾರೆ.

ದಲಿತರಲ್ಲಿ ಒಳ ಮೀಸಲಾತಿ ವರ್ಗೀಕರಣ ಆಗಬೇಕೆಂದು ಕರ್ನಾಟಕ ದಲಿತ ಮಾದಿಗ ದಂಡೋರ ಮತ್ತು ದಲಿತ ಸಂಘರ್ಷ ಸಮಿತಿಗಳು 25 ವರ್ಷಗಳಿಂದ ಹೋರಾಟ ನಡೆಸುತ್ತಿವೆ. ದಲಿತ ಸಂಘಟನೆಗಳ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ರಚಿಸಿತು. ಈ ಆಯೋಗ ದಲಿತ ಸಮುದಾಯ ಪ್ರತಿ ಕುಟುಂಬದ ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿರುವಿಕೆಯನ್ನು ಗುರುತಿಸಿ ಸಮಗ್ರ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಿ ಹಲವು ವರ್ಷ ಕಳೆದಿವೆ. ಆದರೆ, ಸರ್ಕಾರ ವರದಿ ಜಾರಿಗೊಳಿಸಲು ಹಿಂದೇಟು ಹಾಕುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪರಿಶಿಷ್ಟರ ಪಟ್ಟಿಯಲ್ಲಿರುವ ಬಹುಸಂಖ್ಯಾತ ಹೊಲೆಯ, ಮಾದಿಗ, ಸಮಗಾರ, ಢೋರ್ ಜಾತಿಗಳಿಗೆ ಅನ್ಯಾಯ ಮಾಡಲಾಗಿದೆ. ತಾರತಮ್ಯ ನೀತಿಯ ಫಲವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಪ್ರಭು ಚವಾಣ್ ಮುಂಬೈನಿಂದ ಇಲ್ಲಿಗೆ ಬಂದು ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಮೂರು ಅವಧಿಗೆ ಶಾಸಕರಾಗಿದ್ದಾರೆ ಎಂದು ಹೇಳಿದ್ದಾರೆ.

ಕಳೆದ ಮೂರು ಅವಧಿಯಲ್ಲಿ ಚವಾಣ್‌ ಅವರು ಸರ್ಕಾರದ ವಿವಿಧ ಯೋಜನೆಗಳಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳ ಪಟ್ಟಿಯಲ್ಲಿ ಶೇ 90ಕ್ಕಿಂತ ಹೆಚ್ಚು ತನ್ನ ಸ್ವಜಾತಿ ಬಂಧುಗಳಿಗೆ ನೀಡಿದ್ದಾರೆ. ಇದಕ್ಕೆ ಸರ್ಕಾರಿ ದಾಖಲಾತಿಗಳು ಸಾಕ್ಷಿ. ಪರಿಶಿಷ್ಟ ಜಾತಿ ಅಭಿವೃದ್ಧಿಗೆ ಮೀಸಲಿರುವ ಇತರೆ ಸರ್ಕಾರದ ಎಲ್ಲ ಯೋಜನೆಗಳ ಅನುದಾನವನ್ನು ಕೇವಲ ತಾಂಡಾಗಳ ಅಭಿವೃದ್ಧಿಗೆ ಮಾತ್ರ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಔರಾದ್ ಕ್ಷೇತ್ರದಲ್ಲಿ ಪರಿಶಿಷ್ಟರ ಕಾಲೊನಿಗಳಿಗೆ ಮೂಲಸೌಕರ್ಯ ಒದಗಿಸಿಲ್ಲ. ಅಂಬೇಡ್ಕರ್ ಭವನ ಮತ್ತು ಜಗಜೀವನರಾಂ ಭವನ ನಿರ್ಮಿಸಿಲ್ಲ. ಮಹಾಪುರುಷರ ಹೆಸರಿನಲ್ಲಿ ಅಧಿಕಾರ ಪಡೆದಿದ್ದರೂ ಅವರ ಆದರ್ಶಗಳ ವಿರುದ್ಧ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಪರಿಶಿಷ್ಟರಿಗೆ ಸಾಮಾಜಿಕ ನ್ಯಾಯ ಕೊಡಬಲ್ಲಂಥ ಸದಾಶಿವ ಆಯೋಗ ವರದಿಯನ್ನು ತಿರಸ್ಕಾರ ಮಾಡಬೇಕೆಂದು ಸಚಿವ ಪ್ರಭು ಚವಾಣ್ ಒತ್ತಾಯಿಸುತ್ತಿದ್ದಾರೆ. ಇವರ ವಿರುದ್ಧ ದಲಿತ ಯುವ ಸಮುದಾಯವು ಜನಜಾಗೃತಿ ಮೂಡಿಸಿ ಮೂಲ ಅಸ್ಪ್ರಷ್ಯ ಜಾತಿಗಳಾದ ಹೊಲೆಯ, ಮಾದಿಗರು ರಾಜಕೀಯವಾಗಿ ಒಗ್ಗಟ್ಟಾಗಿ ಮುಂದಿನ ಚುನಾವಣೆಯಲ್ಲಿ ಇವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಮನವಿ ಮಾಡಿದ್ದಾರೆ.

ಔರಾದ್ ಕ್ಷೇತ್ರದಲ್ಲಿ ಎರಡು ಸಮುದಾಯದ 1.25 ಲಕ್ಷ ಮತದಾರರು ಇದ್ದಾರೆ. ರಾಜಕೀಯ ಜಾಗೃತಿ ಇಲ್ಲದ ಕಾರಣ ಒಗ್ಗಟ್ಟು ಒಡೆದು ಗೆಲುವು ಸಾಧಿಸುತ್ತಿದ್ದಾರೆ. ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಮತ್ತು ಕೂಲಿ ಕಟ್ಟಡ ಕಾರ್ಮಿಕ ಸಂಘಟನೆ, ರೈತ ಸಂಘಟನೆ, ವಿದ್ಯಾರ್ಥಿ ಮತ್ತು ಮಹಿಳಾ ಸಂಘಟನೆಗಳ ಜತೆಗೂಡಿ ಕ್ಷೇತ್ರದ ಪ್ರತಿ ಗ್ರಾಮದಲ್ಲಿ ಜನಜಾಗೃತಿ ಅಭಿಯಾನ ನಡೆಸಲಿದೆ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.