ಸೋಮವಾರ, ಅಕ್ಟೋಬರ್ 18, 2021
24 °C
ಭಾಲ್ಕಿ ಶ್ರೀಗಳ ಸದಾಶಯಕ್ಕೆ ಸರ್ಕಾರ ಬದ್ಧ

ಅನುಭವ ಮಂಟಪ ಕಾಮಗಾರಿ ಶೀಘ್ರ ಆರಂಭ: ಸಚಿವ ಪ್ರಭು ಚವಾಣ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಔರಾದ್: ‘ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಿಸುವ ಭಾಲ್ಕಿ ಮಠದ ಬಸವಲಿಂಗ ಪಟ್ಟದ್ದೇವರ ಎರಡು ದಶಕದ ಸಂಕಲ್ಪ ಈಗ ಸಾಕಾರಗೊಳ್ಳುವ ಸಮಯ ಬಂದಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಹೇಳಿದರು.

ಪಟ್ಟಣದಲ್ಲಿ ಶನಿವಾರ ನಡೆದ ಬಸವಲಿಂಗ ಪಟ್ಟದ್ದೇವರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಬಸವತತ್ವ ಪ್ರಸಾರವೇ ತಮ್ಮ ಬದುಕಿನ ಅವಿಭಾಜ್ಯ ಅಂಗ ಮಾಡಿಕೊಂಡಿರುವ ಬಸವಲಿಂಗ ಪಟ್ಟದ್ದೇವರು ಕಲ್ಯಾಣದಲ್ಲಿ ಅನುಭವ ಮಂಟಪ‌ ಕಟ್ಟಿಸಿ ಹೊಸ ಅಧ್ಯಾಯ ಬರೆಯಲು ಹೊರಟಿದ್ದಾರೆ. ಅವರ ಈ‌ ಮಹತ್ವದ ಬಯಕೆ ಈಡೇರಿಸಲು ಸರ್ಕಾರ ‌ಬದ್ಧವಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ₹500 ಕೋಟಿ ಮಂಜೂರು ಮಾಡಲಾಗಿದೆ. ₹2 ಕೋಟಿ ಬಿಡುಗಡೆಯಾಗಿದೆ. ಶೀಘ್ರದಲ್ಲೇ ಕಾಮಗಾರಿ ಶುರುವಾಗಲಿದೆ. ನಿಗದಿಯಂತೆ ಎರಡು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟಿಸಲಾಗುವುದು’ ಎಂದರು.

ಸಾನಿಧ್ಯ ವಹಿಸಿದ ಬಸವಲಿಂಗ ಪಟ್ಟದ್ದೇವರು, ‘ನನಗೆ ದೊರೆತ ಪ್ರಶಸ್ತಿ ಪುರಸ್ಕಾರ ಬಸವ ಭಕ್ತರಿಗೆ ಸಲ್ಲಬೇಕು. ಔರಾದ್ ನನ್ನ ಮಾತೃಭೂಮಿ. ಇಲ್ಲಿಯ ಗುರುಲಿಂಗಪ್ಪ ಘುಳೆ ಹಾಗೂ ರಾಚಪ್ಪ ಮುದ್ದಾ ನನ್ನನ್ನು ಓದಲು ಭಾಲ್ಕಿ ಮಠಕ್ಕೆ ಸೇರಿಸಿದವರು. ಮುಂದೆ ಚನ್ನಬಸವ ಪಟ್ಟದ್ದೇವರ ಆಶೀರ್ವಾದದಿಂದ ಬಸವತತ್ವ ಪ್ರಸಾರ ಮಾಡಲು ವೇದಿಕೆ ದೊರೆಯಿತು’ ಎಂದು ಹೇಳಿದರು.

ಗುರುಬಸವ ಪಟ್ಟದ್ದೇವರು ಮಾತಮಾಡಿ, ‘ನನ್ನ ಗುರು ಬಸವಲಿಂಗ ಪಟ್ಟದ್ದೇವರಿಗೆ ಕಲ್ಯಾಣದಲ್ಲಿ ಅನುಭವ ಮಂಟಪ ಆಗಬೇಕು ಎಂಬ ಬಯಕೆ ಇಟ್ಟುಕೊಂಡಿದ್ದಾರೆ. ಇದಕ್ಕಾಗಿ ಅವರು ಎರಡು ಬಾರಿ ಮುಖ್ಯಮಂತ್ರಿ ಅವರನ್ನೂ ಭೇಟಿ‌ ಮಾಡಿದ್ದಾರೆ’ ಎಂದು ತಿಳಿಸಿದರು.

ಸಂಗಮ ನೀಲಾಂಬಿಕಾ ಆಶ್ರಮದ ಮಹಾದೇವಮ್ಮ ತಾಯಿ, ಸತ್ಯಕ್ಕ ತಾಯಿ, ಪಟ್ಟಣ ಪಂಚಾಯತಿ ಅಧ್ಯಕ್ಷೆ ಅಂಬಿಕಾ ಪವಾರ್, ಧುರೀಣ ಡಾ. ಕಲ್ಲಪ್ಪ ಉಪ್ಪೆ, ಗಿರೀಶ್ ವಡೆಯರ್, ವಸಂತ ವಕೀಲ್, ಶರಣಪ್ಪ ಪಂಚಾಕ್ಷರಿ, ಪ್ರಕಾಶ ಘುಳೆ, ಶರಣಪ್ಪ ಮಿಠಾರೆ, ಸುರೇಶ ಭೋಸ್ಲೆ, ಧೋಂಡಿಬಾ ನರೋಟೆ, ಡಾ. ಮಹೇಶ ಬಿರಾದಾರ, ಬಂಡೆಪ್ಪ ಕಂಟೆ, ಶಿವರಾಜ ಅಲ್ಮಾಜೆ, ಸೂರ್ಯಕಾಂತ ಉಪಸ್ಥಿತರಿದ್ದರು. ಸಂಜುಕುಮಾರ ಜುಮ್ಮಾ ವಂದಿಸಿದರು.

ಪಟ್ಟಣದ ಕನ್ನಡಾಂಬೆ ವೃತದಿಂದ ನಾಗಮಾರಪಳ್ಳಿ ಕಲ್ಯಾಣ ಮಂಟಪದ ವರೆಗೆ ಶ್ರೀಗಳ ಸಾರೋಟಿನ ಮೆರವಣಿಗೆ ನಡೆಯಿತು. ವಿವಿಧ ಕಲಾ ತಂಡಗಳು ಪಾಲ್ಗೊಂಡು ತಮ್ಮ ಕಲೆ ಪ್ರದರ್ಶಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು