ಶುಕ್ರವಾರ, ಜೂನ್ 18, 2021
27 °C
ತಿಂಗಳಲ್ಲಿ ಕೋವಿಡ್‌ನಿಂದ ಮೃತಪಟ್ಟವರು 557; ಸರ್ಕಾರ ಕೊಟ್ಟ ಲೆಕ್ಕ 141

ಸರ್ಕಾರದಿಂದ ಸುಳ್ಳು ಮಾಹಿತಿ: ಈಶ್ವರ ಖಂಡ್ರೆ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ‘ಕೋವಿಡ್‌ನಿಂದ ರಾಜ್ಯದಲ್ಲಿ ನಿತ್ಯ ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾಗುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರ ಕೆಲವೇ ಜನರ ಲೆಕ್ಕ ನೀಡುತ್ತ ರಾಜ್ಯದ ಜನರನ್ನು ವಂಚಿಸುತ್ತಿದೆ’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದ್ದಾರೆ.

ಕೋವಿಡ್ ಸಾವಿನ ವಿಚಾರದಲ್ಲಿ ಸರ್ಕಾರ ಸುಳ್ಳು ಹೇಳುತ್ತಿದೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ವಿರುದ್ಧ ಕಂದಾಯ ಸಚಿವ ಆರ್. ಅಶೋಕ್ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಬೀದರ್ ಜಿಲ್ಲೆಯ ಕೋವಿಡ್ ಸಮರ್ಪಿತ ಆಸ್ಪತ್ರೆ ಬ್ರಿಮ್ಸ್ ಒಂದರಲ್ಲಿಯೇ ಏಪ್ರಿಲ್ 15ರಿಂದ ಮೇ 15 ನಡುವೆ 557 ಸೋಂಕಿತರು ಮೃತಪಟ್ಟಿದ್ದಾರೆ. ಆದರೆ ರಾಜ್ಯ ಸರ್ಕಾರ ಇಡೀ ಜಿಲ್ಲೆಯಲ್ಲಿ 141 ಜನರು ಇದೇ ಅವಧಿಯಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳುತ್ತಿದೆ. ಇದು ಹಸಿ ಸುಳ್ಳಲ್ಲದೆ ಮತ್ತೇನು, ಸರ್ಕಾರ ಸುಳ್ಳು ಹೇಳುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಈ ಸಂಬಂಧ ಬ್ರಿಮ್ಸ್ ಆಸ್ಪತ್ರೆಯಲ್ಲಿ ಏ.15ರಿಂದ ಮೇ 15ರವರೆಗೆ ಕೋವಿಡ್ ಚಿಕಿತ್ಸೆಗೆ ದಾಖಲಾಗಿ ಮೃತರ ಹೆಸರು, ಅವರು ಆಸ್ಪತ್ರೆಗೆ ದಾಖಲಾದ ಸಮಯ, ಮೃತಪಟ್ಟ ಸಮಯ ಎಲ್ಲ ವಿವರ ಇರುವ ದಾಖಲೆ ಬಿಡುಗಡೆ ಮಾಡಿದ್ದು, ಸರ್ಕಾರ ಸೋಂಕಿತರ ಸಂಖ್ಯೆ, ಸಾವಿನ ಸಂಖ್ಯೆಯನ್ನು ಮರೆ ಮಾಚುತ್ತಿದೆ. ಸತ್ಯ ಹೇಳಿದರೆ ಜನರು ಭೀತಿಯಿಂದಲಾದರೂ ಮನೆಯಲ್ಲಿ ಇರುತ್ತಾರೆ. ಆಗ ಸೋಂಕಿನ ಸರಪಳಿ ಮುರಿಯಬಹುದು ಎಂದು ತಿಳಿಸಿದ್ದಾರೆ.

ಮೇ 14 ಬೀದರ್ ಜಿಲ್ಲೆಯಲ್ಲಿ ಕೋವಿಡ್‌ನಿಂದ 6 ಜನರು ಮತ್ತು 15 ರಂದು 6 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ, ಬ್ರಿಮ್ಸ್ ಒಂದರಲ್ಲೇ 14ರಂದು 20 ರೋಗಿಗಳು, 15ರಂದು 13 ಜನರು ಸಾವಿಗೀಡಾಗಿದ್ದಾರೆ ಅಂದರೆ ಸರ್ಕಾರ ನೀಡುತ್ತಿರುವ ಅಂಕಿ ಅಂಶ ಸಂಪೂರ್ಣ ಸುಳ್ಳಿನ ಕಂತೆಯಾಗಿದೆ ಎಂದು ಆರೋಪಿಸಿದ್ದಾರೆ.

ಕೇವಲ ಬೀದರ್ ಜಿಲ್ಲೆಯ ಒಂದು ಆಸ್ಪತ್ರೆಯಲ್ಲೇ 557 ಸೋಂಕಿತರು ಮೃತಪಟ್ಟಿದ್ದಾರೆ ಎಂದರೆ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ, ತಾಲ್ಲೂಕು ಆಸ್ಪತ್ರೆಗಳಲ್ಲಿ, ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಮೃತಪಟ್ಟಿರುವವರ ಸಂಖ್ಯೆ ಎಷ್ಟು?. ಇದಲ್ಲದೆ ಚಿಕಿತ್ಸೆ ಸಿಗದೆ, ಕೋವಿಡ್ ಮಾದರಿ ಪರೀಕ್ಷೆಯೂ ಆಗದೆ ಹಾದಿ ಬೀದಿಯಲ್ಲಿ ಸತ್ತವರ ಸಂಖ್ಯೆಗೆ ಲೆಕ್ಕವೇ ಇಲ್ಲ. ಇದೆಲ್ಲ ನೋಡಿದರೆ ಜಿಲ್ಲೆಯಲ್ಲಿ ಏಪ್ರಿಲ್ 15 ರಿಂದ ಮೇ 15ರ ನಡುವೆ 1000 ದಿಂದ 1200 ಜನರು ಮೃತಪಟ್ಟಿದ್ದಾರೆ. ಆದರೆ ಸರ್ಕಾರ 100ರ ಸಂಖ್ಯೆಯಲ್ಲಿ ಲೆಕ್ಕ ಕೊಡುತ್ತಿದೆ. ವೈದ್ಯಕೀಯ ಇಲಾಖೆಯ ವೈಫಲ್ಯ, ಆಡಳಿತ ವೈಫಲ್ಯ ಮುಚ್ಚಿಕೊಳ್ಳುವ ಹುನ್ನಾರ ಎಂದು ದೂರಿದ್ದಾರೆ.

ಕೇವಲ ಒಂದು ಜಿಲ್ಲೆಯಲ್ಲಿ ಸಾವಿನ ಸಂಖ್ಯೆಯನ್ನು ಇಷ್ಟು ಮರೆ ಮಾಚುವುದಾದರೆ, ರಾಜ್ಯದಲ್ಲಿ ನಿಜವಾಗಿಯೂ ಕೋವಿಡ್ ನಿಂದ ಮೃತಪಟ್ಟಿರುವವರ ಸಂಖ್ಯೆ ಎಷ್ಟು? ಕಳೆದ ಒಂದು ತಿಂಗಳಲ್ಲಿ ಕನಿಷ್ಠ ರಾಜ್ಯದಲ್ಲಿ 20 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿರುವ ಅನುಮಾನ ಇದೆ. ಸರ್ಕಾರ ಜನರ ಕಣ್ಣಿಗೆ ಮಣ್ಣೆರಚುತ್ತಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಮೃತರ ಸಂಖ್ಯೆ ನೀಡಿದಾಗ ಆರ್.ಟಿ.ಪಿ.ಸಿ.ಆರ್. ವರದಿ ಬಂದಿರಲಿಲ್ಲ ಹೀಗಾಗಿ ಸೇರಿಸಿರಲಿಲ್ಲ ಎಂಬ ಉತ್ತರ ನೀಡುತ್ತಾರೆ. ಸಚಿವರುಗಳು ಕಾಂಗ್ರೆಸ್ ಪಕ್ಷ ದೂಷಿಸುವುದನ್ನು ಬಿಟ್ಟು, ಸತ್ಯಾಂಶವನ್ನು ಜನರ ಮುಂದಿಡಬೇಕು ಎಂದು ಆಗ್ರಹಿಸಿದ್ದಾರೆ.

2019ರಿಂದ 2021 ಮೇ 21ರವರೆಗೆ ರಾಜ್ಯದಲ್ಲಿ ಪ್ರತಿ ತಿಂಗಳು ಎಷ್ಟು ಜನರು ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ರಾಜ್ಯವಾರು, ಜಿಲ್ಲಾವಾರು, ತಾಲೂಕುವಾರು ಮರಣ ನೋಂದಣಿಯ ವಿವರ ಬಹಿರಂಗ ಮಾಡಬೇಕು, ಆಗ ಸತ್ಯ ತಾನೇ ಹೊರಬರುತ್ತದೆ. ರಾಜ್ಯ ಸರಕಾರ ಸುಳ್ಳು ಹೇಳುವುದನ್ನು ಬಿಟ್ಟು, ಕೋವಿಡ್ ಮೂರನೇ ಅಲೆ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.