ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಶ್ರ ಬೇಸಾಯದಿಂದ ಅಪಾರ ಆದಾಯ: ಗಳಿಕೆ ಹೆಚ್ಚಿಸಿದ ಪುಷ್ಪ ಕೃಷಿ

ಕೈತುಂಬ ಕಾಸು ತಂದ ಪಪ್ಪಾಯ ಬೆಳೆ; ಗಳಿಕೆ ಹೆಚ್ಚಿಸಿದ ಪುಷ್ಪ ಕೃಷಿ
ಗಣಪತಿ ಕುರನ್ನಳೆ
Published 10 ಜೂನ್ 2024, 6:31 IST
Last Updated 10 ಜೂನ್ 2024, 6:31 IST
ಅಕ್ಷರ ಗಾತ್ರ

ಕಮಲನಗರ: ಅದು ಪಪ್ಪಾಯ ಗಿಡಗಳ ತೋಟ. ಬೆಳೆಯ ಸುತ್ತಲೂ ನುಗ್ಗೆ ಗಿಡಗಳ ಸಾಲು! ಪಪ್ಪಾಯ ಗಿಡಗಳ ನಡುವೆ ಚಂಡು ಹೂವು, ಸೇವಂತಿಗೆ ಹೂವುಗಳ ಕೃಷಿ. ಜೊತೆಗೆ ಈರುಳ್ಳಿ, ಹೀರೆಕಾಯಿಯಂಥ ತೋಟಗಾರಿಕೆ ಬೆಳೆಗಳು. ವಾರ್ಷಿಕ ಲಕ್ಷ–ಲಕ್ಷ ರೂಪಾಯಿ ಆದಾಯ.

ಇದು ಕಮಲನಗರ ತಾಲ್ಲೂಕಿನ ಹೋಳಸಮುದ್ರ ಗ್ರಾಮದ ರೈತರಾದ ಶ್ರೀದೇವಿ ಚಿಮ್ಮಾರ ಅವರ ಹೊಲದ ಚಿತ್ರಣ. ಮಿಶ್ರ ಬೆಳೆ ಅಪ್ಪಿಕೊಂಡಿರುವ ಶ್ರೀದೇವಿ ಅವರು ಕೈತುಂಬ ಕಾಸು ಕಂಡಿದ್ದಾರೆ. ವೈವಿಧ್ಯಮಯ ಬೆಳೆಯಿಂದ ವರ್ಷಕ್ಕೆ ₹15 ಲಕ್ಷದಿಂದ ₹20 ಲಕ್ಷ ಆದಾಯ ಪಡೆಯುತ್ತಿದ್ದಾರೆ.

‘ಬರೀ ಒಂದಢ ಬೆಳೆ ಬೆಳೆಯುವುದಕ್ಕಿಂತಲೂ ಮಿಶ್ರ ಬೇಸಾಯ ಲಾಭದಾಯಕ. ಪಪ್ಪಾಯ ನಡುವೆ ಅಂತರ ಬೆಳೆಯಾಗಿ ಪುಷ್ಪ ಕೃಷಿ, ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದೇವೆ. ಇದರಿಂದ ಆರ್ಥಿಕವಾಗಿಯೂ ಲಾಭ. ಅಲ್ಪಾವಧಿ ಅಂತರ ಬೆಳೆಯಿಂದ ಭೂಮಿಯ ಫಲವತ್ತತೆಯೂ ಹೆಚ್ಚುತ್ತದೆ’ ಎನ್ನುತ್ತಾರೆ ರೈತ ಮಹಿಳೆ ಶ್ರೀದೇವಿ ಚಿಮ್ಮಾರ.

‘ಭಾಲ್ಕಿ ತಾಲ್ಲೂಕಿನ ಮೇಳಕುಂದಾ ಸಸಿ ಕೇಂದ್ರದಿಂದ ಚಂಡು ಹೂವಿನ ಸಸಿಗಳನ್ನು ತಂದು ನಾಟಿ ಮಾಡಿದ್ದೇವೆ. ತಲಾ ಸಸಿಗೆ ₹10ರಂತೆ ಒಟ್ಟು 5,500ಕ್ಕೂ ಹೆಚ್ಚು ಸಸಿ ನಾಟಿ ಮಾಡಿದ್ದೇವೆ. ಜೊತೆಗೆ ಸೇವಂತಿಯನ್ನೂ ಬೆಳೆದಿದ್ದೇವೆ. ಇವೆರಡೂ ಮೂರು ತಿಂಗಳ ಬೆಳೆ. ಹೈದರಾಬಾದ್‌, ಭಾಲ್ಕಿ, ಉದಗೀರ ಹಾಗೂ ಬೀದರ್‌ನ ವ್ಯಾಪಾರಿಗಳು ಬಂದು ಹೂವುಗಳನ್ನು ಖರೀದಿಸಿಕೊಂಡು ಹೋಗುತ್ತಾರೆ. ಪುಷ್ಪ ಕೃಷಿಯಿಂದ ₹1.50 ಲಕ್ಷ ಲಾಭ ಬಂದಿದೆ’ ಎಂದು ಶ್ರೀದೇವಿ ಅವರ ಪುತ್ರ ಬಸವಗಿರಿ ಚಿಮ್ಮಾರ ಹೇಳುತ್ತಾರೆ.

‘ನಾವು ಮೊದಲು ಬರೀ ಪಪ್ಪಾಯಿ ಬೆಳೆಯುತ್ತಿದ್ದೇವು. ಅದು ಎಂಟು ತಿಂಗಳಿಗೆ ಕಟಾವಿಗೆ ಬರುತ್ತದೆ. ಪ್ರತಿ ತಿಂಗಳಿಗೆ 3–4 ಟನ್ ಇಳುವರಿ ಬರುತ್ತದೆ. ಟನ್‌ಗೆ ₹22 ಸಾವಿರ ದರ ಸಿಕ್ಕರೂ ಲಾಭ. ಸಾಂಪ್ರದಾಯಿಕ ಬೆಳೆಗೆ ಹೋಲಿಸಿದರೆ, ತೋಟಗಾರಿಕೆ ಬೆಳೆಯಲ್ಲಿ ಹಲವು ಪಟ್ಟು ಲಾಭ ದೊರೆಯುತ್ತದೆ. ಅಂತರ ಬೆಳೆಯಾಗಿ ಪುಷ್ಪ ಕೃಷಿ ಮಾಡಿದ್ದೇವೆ. ಹೊಲದ ಸುತ್ತಲೂ ನುಗ್ಗೆಕಾಯಿ ಬೆಳೆದಿದ್ದೇವೆ. ಎಲ್ಲ ಬೆಳೆಗಳಿಗೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದೇವೆ. ಈ ಸಲ ಉತ್ತಮ ಆದಾಯ ನಿರೀಕ್ಷಿಸುತ್ತಿದ್ದೇವೆ’ ಎನ್ನುತ್ತಾರೆ ಅವರು.

‘ಹೋದ ವರ್ಷ ಸ್ವಲ್ಪ ಜಮೀನಿನಲ್ಲಿ ಪಪ್ಪಾಯಿ ಬೆಳೆದಿದ್ದೆವು. ನಿರೀಕ್ಷಿಸಿದಷ್ಟು ಲಾಭ ಬಂದಿತ್ತು. ಈ ವರ್ಷ ಪಪ್ಪಾಯಿ ಬೆಳೆ ಕ್ಷೇತ್ರ ಎರಡು ಪಟ್ಟು ವಿಸ್ತರಿಸಿದ್ದೇವೆ. ಜೊತೆಗೆ ಎರಡು ಬಗೆಯ ಹೂವು, ನುಗ್ಗೆಯನ್ನೂ ಬೆಳೆದಿದ್ದು, ಉತ್ತಮ ಲಾಭ ಬಂದೇ ಬರುತ್ತದೆ’ ಎಂದು ಶ್ರೀದೇವಿ ಅವರ ಪತಿ, ಕೃಷಿಕ ಜಗನ್ನಾಥ ಚಿಮ್ಮಾರ ಖಚಿತ ಧ್ವನಿಯಲ್ಲಿ ಹೇಳುತ್ತಾರೆ.

ರೈತ–ಭೂಮಿ ಇಬ್ಬರಿಗೂ ಲಾಭ

‘ಪಪ್ಪಾಯಿ ಕೃಷಿಯೊಂದಿಗೆ ಅಂತರ ಬೆಳೆಯಾಗಿ ಚಂಡು ಹೂವು ಸೇವಂತಿಗೆ ಹೂವುಗಳನ್ನು ಬೆಳೆಯುವುದರಿಂದ ಆರ್ಥಿಕವಾಗಿ ರೈತರಿಗೆ ಲಾಭ. ಹೂವಿನ ಫಸಲು ಮುಗಿದ ಬಳಿಕ ಅವುಗಳನ್ನು ಕಟಾವು ಮಾಡಿ ಮಣ್ಣಿಗೆ ಸೇರಿಸುವುದರಿಂದ ಸಾವಯವ ಗೊಬ್ಬರ ತಯಾರಾಗುತ್ತದೆ. ಅದರಂದ ಮಣ್ಣಿನ ಫಲವತ್ತತೆ ಹೆಚ್ಚಿ ಭೂಮಿಗೂ ಲಾಭವಾಗುತ್ತದೆ’ ಎನ್ನುತ್ತಾರೆ ಔರಾದ್‌ ತಾಲ್ಲೂಕಿನ ತೋಟಗಾರಿಕಾ ಸಹಾಯಕ ನಿರ್ದೇಶಕಿ ಲಕ್ಷ್ಮಿ ಪಾಟೀಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT