ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಸಂಕಷ್ಟದ ಸುಳಿಯಲ್ಲಿ ರೈತ

ಮಾರಾಟವಾಗದೆ ಹೊಲದಲ್ಲಿಯೇ ಉಳಿದ ಕಲ್ಲಂಗಡಿ ಹಣ್ಣು
Last Updated 22 ಮೇ 2021, 4:12 IST
ಅಕ್ಷರ ಗಾತ್ರ

ಕಟ್ಟಿ ತುಗಾಂವ್ (ಖಟಕ ಚಿಂಚೋಳಿ): ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿಗೆ ಭಾರಿ ಬೇಡಿಕೆ ಇರುವುದರಿಂದ ಉತ್ತಮ ಲಾಭ ದೊರಕುವ ನಿರೀಕ್ಷೆಯಲ್ಲಿದ್ದ ರೈತರೊಬ್ಬರು ಕೊರೊನಾ ಲಾಕ್‌ಡೌನ್‌ ಕಾರಣ ಸೂಕ್ತ ಮಾರುಕಟ್ಟೆ ದೊರಕದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಭಾಲ್ಕಿ ತಾಲ್ಲೂಕಿನ ಕಟ್ಟಿ ತುಗಾಂವ್ ಗ್ರಾಮದ ರೈತ ರಮೇಶ ಬಶೆಟ್ಟಿ ತಮ್ಮ ಏಳು ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆದಿದ್ದಾರೆ. ಕೊಳವೆಬಾವಿಯಲ್ಲಿ ನೀರು ಲಭ್ಯವಿದ್ದು, ನೀರಿಗೆ ಡ್ರಿಪ್ ಅಳವಡಿಸಿಕೊಂಡಿದ್ದಾರೆ. ಬೆಳೆಗೆ ತಿಪ್ಪೆ ಗೊಬ್ಬರ, ಕ್ರಿಮಿನಾಶಕ ಸಿಂಪಡಣೆ ಮಾಡಿದ್ದಾರೆ. ಹೀಗೆ ಪ್ರತಿ ಎಕರೆಗೆ ಸುಮಾರು ₹60 ಸಾವಿರದಂತೆ ₹4 ಲಕ್ಷ ಖರ್ಚು ಮಾಡಿದ್ದಾರೆ. ಅಲ್ಲದೆ, ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು ಉತ್ತಮ ಇಳುವರಿ ಪಡೆದಿದ್ದಾರೆ. ಈ ವರ್ಷ ₹8 ಲಕ್ಷ ಆದಾಯದ ನೀರಿಕ್ಷೆಯಲ್ಲಿದ್ದರು. ಆದರೆ ಕೊರೊನಾ ಎಲ್ಲವನ್ನೂ ಹುಸಿಗೊಳಿಸಿದೆ.

ಕಲ್ಲಂಗಡಿ ದೊಡ್ಡ ಗಾತ್ರ ಹೊಂದಿದ್ದು ಪ್ರತಿಯೊಂದು ಕನಿಷ್ಠ 3 ಕೆ.ಜಿ.ಯಿಂದ 6-7 ಕೆ.ಜಿ. ವರೆಗೂ ತೂಕ ಬಂದಿದೆ. ಇದೇ ಮಾರ್ಚ್‌ನಲ್ಲಿ ಪ್ರತಿ ಕೆಜಿಗೆ ₹7-8 ಕ್ಕೆ ಮಾರಾಟವಾಗಿದ್ದವು. ಆದರೆ ಸದ್ಯ ಕೇವಲ ₹ 3 ಕ್ಕೆ ಮಾರಾಟವಾಗುತ್ತಿದೆ. ಇದರಿಂದ ಕಟಾವು ಮಾಡಲು ಹಾಗೂ ಮಾರುಕಟ್ಟೆಗೆ ಸಾಗಿಸಿದ ವೆಚ್ಚ ಸಹ ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ರೈತ ರಮೇಶ ಬಶೆಟ್ಟಿ.

‘ಕಳೆದ ಹದಿನೈದು ವರ್ಷಗಳಿಂದ ಕಲ್ಲಂಗಡಿ ಬೆಳೆಯುತ್ತಿದ್ದೇನೆ. ಸುತ್ತಮುತ್ತಲಿನ ಅನೇಕ ಗ್ರಾಮಸ್ಥರು ನನ್ನ ಹತ್ತಿರ ಮಾಹಿತಿ ಪಡೆದು ಯಶಸ್ವಿಯಾಗುತ್ತಾರೆ. ಆದರೆ ನನಗೆ ಈ ವರ್ಷ ಅರಗಿಸಿಕೊಳ್ಳಲಾಗದಷ್ಟು ಹಾನಿಯಾಗಿದೆ. ಸದ್ಯ ನನ್ನ ಹೊಲದಲ್ಲಿ ಸುಮಾರು 150 ಟನ್ ಬೆಳೆಯಲಾಗಿತ್ತು. ಅದರಲ್ಲಿ ಈಗ ಕೇವಲ 25 ಟನ್ ಮಾತ್ರ ಹೈದರಾಬಾದ್ ಮಾರುಕಟ್ಟೆಗೆ ಕಳುಹಿಸಿದ್ದೇನೆ. ಅದು ಸಹ ಮಾರಾಟವಾಗದೇ ನಾಲ್ಕು ದಿನಗಳಿಂದ ಲಾರಿಯಲ್ಲಿಯೇ ಹಾಗೆ ಉಳಿದಿದೆ. ಹೊಲದಲ್ಲಿ ಇನ್ನು 125 ಟನ್ ನಷ್ಟು ಕಲ್ಲಂಗಡಿ ಹಾಗೆಯೇ ಉಳಿದಿದೆ. ಹೊಲದಲ್ಲಿನ ಕಲ್ಲಂಗಡಿ ತೆಗೆದರು ಎಲ್ಲಿ ಮಾರಾಟ ಮಾಡಬೇಕು. ಹಳ್ಳಿ ಹಳ್ಳಿಗೂ ಹೋಗಿ ಚಿಲ್ಲರೆ ವ್ಯಾಪಾರ ಮಾಡಿದರು ಸಹ ಬಾಡಿಗೆ ಹಣ ಸಹ ಬರುವುದಿಲ್ಲ. ಹೀಗಾಗಿ ಮುಂದೆನು ಮಾಡಬೇಕು ಎಂಬ ಚಿಂತೆ ಕಾಡುತ್ತಿದೆ’ ಎಂದು ತಮ್ಮ ಅಸಹಾಯಕತೆಯನ್ನು ಹೇಳಿಕೊಂಡರು.

‘ಬೆಲೆ ಕುಸಿದಿದೆ ಹೊಲದಲ್ಲಿನ ಕಲ್ಲಂಗಡಿ ತೆಗೆಯುವುದೇ ಬೇಡ ಎಂದು ಸುಮ್ಮನಾಗಲೂ ಬರುತ್ತಿಲ್ಲ. ಹಾಗೆ ಬಿಟ್ಟರೆ ಅದಕ್ಕೆ ಹುಳು ಬೀಳುತ್ತವೆ. ಅಲ್ಲೇ ಕೊಳೆಯುತ್ತವೆ. ಹೊಲದಲ್ಲಿನ ಕಲ್ಲಂಗಡಿ ತೆಗೆದರು ಕಷ್ಟ, ಹಾಗೆಯೇ ಬಿಟ್ಟರು ಕಷ್ಟ. ಅಡಕತ್ತರಿಯಲ್ಲಿ ಅಡಕಿ ಸಿಕ್ಕಿದಂತೆ ಆಗಿದೆ ನನ್ನ ಪರಿಸ್ಥಿತಿ’ ಎಂದು ನೋವು ತೋಡಿಕೊಂಡರು.

ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಅದು ಒಂಟಿಯ ಬಾಯಿಯಲ್ಲಿ ಇಲಾಚಿ ಇಟ್ಟಂತೆ ಇದೆ. ಅಲ್ಲದೆ, ಕಳೆದ ವರ್ಷ ಘೋಷಿಸಿದ ಪ್ಯಾಕೇಜ್ ಹಣವೇ ಇನ್ನು ಕೊಟ್ಟಿಲ್ಲ. ಇನ್ನು ಈ ವರ್ಷದ್ದು ರೈತರ ಕೈ ತಲುಪುವಷ್ಟರಲ್ಲಿ ರೈತ ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಕಳೆದ ಹಲವಾರು ವರ್ಷಗಳಿಂದ ಬಶೆಟ್ಟಿ ಅವರು ಕಲ್ಲಂಗಡಿ ಬೆಳೆಸುವಲ್ಲಿ ನಿಪುಣರಾಗಿದ್ದಾರೆ. ಹಾಗಾಗಿ ಲಾಭ ಬಂದಾಗ ಹಿಗ್ಗದೆ, ನಷ್ಟ ಆದಾಗ ಎದೆಗುಂದದೆ ಮುನ್ನಡೆಯುವ ಸ್ವಭಾವ ಅವರದ್ದಾಗಿದೆ.

ಇದೆ ಬೇರೆ ಯಾರಾದರು ಯುವ ರೈತರಿಗೆ ನಷ್ಟವಾದರೆ ತಡೆದುಕೊಳ್ಳುವ ಶಕ್ತಿ ಇರುತಿಲ್ಲ. ಕೃಷಿ ಕೆಲಸಕ್ಕೆ ವಿದಾಯ ಹೇಳುವಂತಾಗುತಿತ್ತು ಎಂದು ಗ್ರಾಮಸ್ಥರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT