ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಸ್ವಾವಲಂಬನೆಗೆ ನೆರವಾದ ಎಮ್ಮೆ ಸಾಕಾಣಿಕೆ

ಸ್ವಂತ ಹಾಲಿನ ಡೈರಿ ಸ್ಥಾಪನೆಗೆ ನಿರ್ಧಾರ
Last Updated 3 ಆಗಸ್ಟ್ 2021, 3:17 IST
ಅಕ್ಷರ ಗಾತ್ರ

ಖಟಕಚಿಂಚೋಳಿ: ಸಮೀಪದ ಹಳ್ಳಿಖೇಡ (ಬಿ) ಗ್ರಾಮದ ವಕೀಲ ಪದವೀಧರ ನಾಗೇಶ ರಾಜೇಂದ್ರ ಅವರು ಎಮ್ಮೆಗಳ ಸಾಕಾಣಿಕೆ ಮೂಲಕ ಸ್ವಾವಲಂಬಿ ಜೀವನ ರೂಪಿಸಿಕೊಂಡಿದ್ದಾರೆ.

ದೇಸಿ ಎಮ್ಮೆಗಳನ್ನು ಸಾಕಣೆ ಮಾಡಿ ಹೈನುಗಾರಿಕೆ ಆರಂಭಿಸಿ ಯಶಸ್ಸು ಗಳಿಸಿದ್ದಾರೆ. ನಿರುದ್ಯೋಗಿ ಯುವಕರಿಗೆ ಮಾದರಿಯಾಗಿದ್ದಾರೆ.

‘ಕಳೆದ ವರ್ಷ ಸಂತೆಯಲ್ಲಿ ಎರಡು ಎಮ್ಮೆ ಖರೀದಿಸಿ ಹೈನುಗಾರಿಕೆ ಪ್ರಾರಂಭಿಸಿದ್ದೇನೆ. ಇದರಿಂದ ಬಂದ ಆದಾಯ ಮತ್ತು ಸ್ವಲ್ಪ ಹಣ ಹೊಂದಿಸಿ ಮತ್ತೆ ಎಮ್ಮೆಗಳನ್ನು ಖರೀದಿಸಿದ್ದೇನೆ. ಇಂದು ನನ್ನ ಬಳಿ 10 ಎಮ್ಮೆಗಳು, ಎರಡು ಆಕಳು ಇವೆ’ ಎಂದು ರೈತ ನಾಗೇಶ ತಿಳಿಸುತ್ತಾರೆ.

‘ಈಗ ಪ್ರತಿದಿನ 50 ಲೀಟರ್ ಹಾಲು ಕರೆಯುತ್ತೇನೆ. ಹಾಲು ಪ್ರತಿ ಲೀಟರ್‌ಗೆ ₹50 ರಂತೆ ಮಾರಾಟವಾಗುತ್ತಿದೆ. ಇದರಿಂದ ಪ್ರತಿ ತಿಂಗಳು ಖರ್ಚು ಹೋಗಿ ಸುಮಾರು ₹25 ಸಾವಿರ ಆದಾಯ ಬರುತ್ತಿದೆ’ ಎಂದು ಅವರು ಸಂತಸದಿಂದ
ಹೇಳುತ್ತಾರೆ.

‘ಎಮ್ಮೆಯ ಹಾಲು ತುಂಬಾ ಗಟ್ಟಿಯಾಗಿರುತ್ತದೆ ಮತ್ತು ಕೆನೆಯು ಅಧಿಕ ಪ್ರಮಾಣದಲ್ಲಿರುತ್ತದೆ. ಹಾಗಾಗಿ ಇದರಿಂದ ಮನೆಯಲ್ಲಿಯೇ ಮೊಸರು, ತುಪ್ಪ ತಯಾರಿಸಿ ಮಾರಾಟ ಮಾಡಬಹುದು. ಇದು ರುಚಿಯಷ್ಟೇ ಅಲ್ಲದೆ ಆರೋಗ್ಯಕರವೂ ಆಗಿದೆ. ಹಾಗಾಗಿ ಇದನ್ನು ಎಲ್ಲ ವಯಸ್ಸಿನವರೂ ಸೇವಿಸಬಹುದು’ ಎಂದು ಅವರು ಹೇಳಿದರು.

‘ಎಮ್ಮೆ ಹಾಲಿನಲ್ಲಿ ಅಧಿಕ ಪ್ರಮಾಣದ ಪ್ರೋಟಿನ್‌ಗಳು ಇರುತ್ತವೆ. ಸದ್ಯ ಹಾಲು ಮಾರಾಟ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಸ್ವಂತ ಹಾಲಿನ ಡೈರಿ ಪ್ರಾರಂಭಿಸಲು ಯೋಚಿಸಿದ್ದೇನೆ’ ಎಂದು ತಮ್ಮ ಕನಸನ್ನು ಬಿಚ್ಚಿಟ್ಟರು.

ಎಮ್ಮೆಗಳಿಗೆ ಆಹಾರಕ್ಕಾಗಿ ಒಂದೂವರೆ ಎಕರೆ ಪ್ರದೇಶದಲ್ಲಿ ಹಸಿ ಹುಲ್ಲು ಬೆಳೆಸಿದ್ದಾರೆ. ಅಲ್ಲದೇ ಒಣ ಮೇವು, ಹೊಟ್ಟು ಸೇರಿದಂತೆ ಪೌಷ್ಟಿಕಾಂಶವಿರುವ ಹಿಟ್ಟುಗಳನ್ನು ಅವುಗಳಿಗೆ ನೀಡುತ್ತಿದ್ದಾರೆ. ಅವುಗಳ ಕೊಟ್ಟಿಗೆಯನ್ನು ಕೂಡ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿದ್ದಾರೆ.

‘ಪ್ರತಿದಿನ ಬೆಳಿಗ್ಗೆ ಎಮ್ಮೆಗಳ ಹಾಲು ಹಿಂಡುವುದು, ಸಗಣಿ ಬಳಿಯುವುದು, ಎಮ್ಮೆಗಳಿಗೆ ನೀರು, ಮೇವು ಹಾಕುವುದು ಸೇರಿದಂತೆ ಕೊಟ್ಟಿಗೆಯ ಎಲ್ಲ ಜವಾಬ್ದಾರಿಯನ್ನು ಆಳುಗಳೊಂದಿಗೆ ನಾಗೇಶ ಅವರು ಖುದ್ದಾಗಿ ನಿಭಾಯಿಸುತ್ತಿದ್ದಾರೆ. ಯುವ ರೈತರಿಗೆ ನಾಗೇಶ ಅವರು ಪ್ರೇರಣೆಯಾಗಿದ್ದಾರೆ. ಇವರಿಂದ ಯುವಕರು ಕಲಿಯಬೇಕು’ ಎಂದು ಗ್ರಾಮದ ಯುವ ರೈತ ಶಿವಕುಮಾರ ರೆಡ್ಡಿ ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT