ಬುಧವಾರ, ನವೆಂಬರ್ 25, 2020
19 °C
ಸತತ ಐದನೇ ವರ್ಷವೂ ಅಗ್ರಸ್ಥಾನ: ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಹೇಳಿಕೆ

ಫಸಲ್ ಬಿಮಾ: ಡಿಸಿಸಿ ಬ್ಯಾಂಕ್ ರಾಷ್ಟ್ರ ಮಟ್ಟದಲ್ಲೇ ಪ್ರಥಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ನೋಂದಣಿಯಲ್ಲಿ ಬೀದರ್ ಡಿಸಿಸಿ ಬ್ಯಾಂಕ್ 2020-21ನೇ ಸಾಲಿನಲ್ಲೂ ದೇಶದ ಸಹಕಾರ ಬ್ಯಾಂಕ್‍ಗಳಲ್ಲೇ ಪ್ರಥಮ ಸ್ಥಾನದಲ್ಲಿದೆ ಎಂದು ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಹೇಳಿದ್ದಾರೆ.

2016-17ನೇ ಸಾಲಿನಿಂದ ಬ್ಯಾಂಕ್ ಸತತ ಅಗ್ರಸ್ಥಾನದಲ್ಲಿ ಇದೆ. ಯೋಜನೆಯಡಿ ಜಿಲ್ಲೆಯ ರೈತರು ಐದು ವರ್ಷಗಳಲ್ಲಿ ಒಟ್ಟು ₹ 56.77 ಕೋಟಿ ಬೆಳೆ ವಿಮೆ ಕಂತು ಪಾವತಿಸಿದ್ದರೆ, ನಾಲ್ಕು ವರ್ಷಗಳ ಅವಧಿಯಲ್ಲಿ ₹ 309.08 ಕೋಟಿ ವಿಮೆ ಪರಿಹಾರ ದೊರಕಿದೆ ಎಂದು ತಿಳಿಸಿದ್ದಾರೆ.

ನಾಲ್ಕು ವರ್ಷಗಳಲ್ಲಿ ಬ್ಯಾಂಕ್ ಅಧೀನದ 171 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ₹ 98.79 ಕೋಟಿ ರಸಗೊಬ್ಬರ ವಹಿವಾಟು ನಡೆಸಲಾಗಿದೆ. ಪ್ಯಾಕ್ಸ್‍ಗಳಲ್ಲಿ ದಾಸ್ತಾನು ಇರಿಸಿ ರೈತರಿಗೆ ಸುಲಭವಾಗಿ ರಸಗೊಬ್ಬರ ದೊರಕುವಂತೆ ಮಾಡುತ್ತಿರುವ ಬ್ಯಾಂಕ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಹೇಳಿದ್ದಾರೆ.

14,531 ಸ್ವಸಹಾಯ ಗುಂಪು ಹಾಗೂ 1,71,067 ಮಹಿಳಾ ಸದಸ್ಯರ ಮಾಹಿತಿಯನ್ನು ಇ-ಶಕ್ತಿ ಯೋಜನೆಯಡಿ ಡಿಜಿಟಲೀಕರಣ ಮಾಡಲಾಗಿದ್ದು, ಬ್ಯಾಂಕ್‍ನ ಈ ಕಾರ್ಯ ರಾಜ್ಯ ಹಾಗೂ ರಾಷ್ಟ್ರಕ್ಕೆ ಮಾದರಿಯಾಗಿದೆ ಎಂದು ನಬಾರ್ಡ್ ಬ್ಯಾಂಕ್ ಗುರುತಿಸಿದೆ ಎಂದು ತಿಳಿಸಿದ್ದಾರೆ.

ಸಿಬಿಎಸ್ ಪದ್ಧತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬ್ಯಾಂಕ್ ಎಸ್‍ಎಂಎಸ್ ಅಲರ್ಟ್, ಆರ್‍ಟಿಜಿಎಸ್/ನೆಫ್ಟ್, ರೂಪೇ ಕಾರ್ಡ್, ಸಿಟಿಎಸ್(ಎಚ್ ಟಂಕೇಶನ್ ಸಿಸ್ಟಮ್), ಇಮಿಡಿಯಟ್ ಪೆಮೆಂಟ್ ಸರ್ವಿಸ್, ನ್ಯಾಷನಲ್ ಅಟೊಮೆಟಿಕ್ ಕ್ಲೀಯರಿಂಗ್ ಹೌಸ್, ಆಧಾರ್ ಪೆಮೆಂಟ್ ಬ್ರಿಡ್ಜ್ ಸಿಸ್ಟಮ್, ಮೊಬೈಲ್ ಬ್ಯಾಂಕಿಂಗ್, ಎಟಿಎಂ ಸೌಲಭ್ಯ ಒಳಗೊಂಡ ಸುಸಜ್ಜಿತ ವಾಹನ ಸೇರಿದಂತೆ ಗ್ರಾಹಕರಿಗೆ ವಿವಿಧ ಸೇವೆಗಳನ್ನು ಒದಗಿಸುತ್ತಿದೆ ಎಂದು ತಿಳಿಸಿದ್ದಾರೆ.

ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ, ಪ್ರಧಾನಮಂತ್ರಿ ಜೀವನ ಸುರಕ್ಷಾ ಯೋಜನೆ, ರೈತ ಸದಸ್ಯರಿಗೆ ವೈಯಕ್ತಿಕ ಅಪಘಾತ ವಿಮಾ ಯೋಜನೆಗಳು ಬ್ಯಾಂಕ್‍ನ ಇತರ ಸೇವೆಗಳಲ್ಲಿ ಸೇರಿವೆ ಎಂದು ಹೇಳಿದ್ದಾರೆ.

1922 ರಲ್ಲಿ ಆರಂಭವಾದ ಬ್ಯಾಂಕ್ ಒಟ್ಟು ₹ 118.10 ಕೋಟಿ ಷೇರು ಬಂಡವಾಳ ಹೊಂದಿದೆ. ₹ 292.46 ಕೋಟಿ ಕಾಯ್ದಿಟ್ಟ ನಿಧಿ ಸೇರಿ ಸ್ವಂತ ಬಂಡವಾಳ ₹410.56 ಕೋಟಿ ಇದೆ. ಠೇವಣಿ ₹ 1,796.28 ಕೋಟಿ ಆಗಿದ್ದು, ಸಾಲದ ಹೊರಬಾಕಿ ₹ 2,298.35 ಕೋಟಿ ಇದೆ. ಹೂಡಿಕೆಗಳು ₹ 678.66 ಕೋಟಿ ಆಗಿದ್ದು, ಒಟ್ಟು ₹ 3,214.88 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ಪ್ರಸಕ್ತ ವರ್ಷ ಬ್ಯಾಂಕ್ ₹ 7.07 ಕೋಟಿ ಲಾಭ ಗಳಿಸಿದೆ ಎಂದು ಹೇಳಿದ್ದಾರೆ.

ಸ್ವಸಹಾಯ ಗುಂಪುಗಳ ರಚನೆ, ಬ್ಯಾಂಕ್ ಜೋಡಣೆ ಕಾರ್ಯಕ್ಕಾಗಿ ಬ್ಯಾಂಕ್‍ಗೆ ಹಲವು ಪ್ರಶಸ್ತಿಗಳು ಲಭಿಸಿವೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.