ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ಮೊದಲ ಕಾದಂಬರಿಕಾರ ಇನ್ನಿಲ್ಲ

ಸಾಹಿತಿ ಸುಬ್ಬಣ್ಣ ಅಂಬೆಸಂಗೆ ನಿಧನ; ಎಕಲಾಸಪುರ ವಾಡಿಯಲ್ಲಿ ಅಂತ್ಯಕ್ರಿಯೆ
Last Updated 9 ನವೆಂಬರ್ 2020, 16:03 IST
ಅಕ್ಷರ ಗಾತ್ರ

ಬೀದರ್‌: ಭಾಲ್ಕಿ ತಾಲ್ಲೂಕಿನ ಎಕಲಾಸಪುರ ವಾಡಿಯ ಸಾಹಿತಿ ಸುಬ್ಬಣ್ಣ ಕಂಟೆಪ್ಪ ಅಂಬೆಸಂಗೆ(70) ಭಾನುವಾರ
ಹೃದಯಾಘಾತದಿಂದ ಅಸುನೀಗಿದ್ದಾರೆ.

ಅವರಿಗೆ ಮೂವರು ಪುತ್ರಿಯರು, ಇಬ್ಬರು ಪುತ್ರರು ಇದ್ದಾರೆ. ಎಕಲಾಸಪುರ ವಾಡಿಯ ಹೊಲದಲ್ಲಿ ಸೋಮವಾರ ಅಂತ್ಯಕ್ರಿಯೆ ನಡೆಯಿತು.

1950 ಜೂನ್ 15 ರಂದು ಕಂಟೆಪ್ಪ ಹಾಗೂ ನೀಲಮ್ಮ ದಂಪತಿಗೆ ಸುಬ್ಬಣ್ಣ ಜನಿಸಿದ್ದರು. ಎಂ.ಎ.ಸ್ನಾತಕೋತ್ತರ ಪದವಿ ಪಡೆದು ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಪ್ರೌಢ ಶಾಲಾ ಶಿಕ್ಷಕರಾಗಿ ಮತ್ತು ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು.

ಸುಬ್ಬಣ್ಣ ಅಂಬೆಸಂಗೆ 1973ರಲ್ಲಿ ಬರೆದ ‘ಸಿಂದಿ ಬನದಲ್ಲಿ ಸಿಕ್ಕವಳು’ ಎನ್ನುವ ಕಾದಂಬರಿ ಬೀದರ್ ಜಿಲ್ಲೆಯ ಮೊದಲ ಕಾದಂಬರಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. 1978 ರಲ್ಲಿ ‘ಅರಳು’ 1987ರಲ್ಲಿ ‘ಚೇತನ’ 2010 ರಲ್ಲಿ ‘ಕಾಡಿನಲ್ಲಿ ಹಿಡಿದ ಗ್ರಹಣ ಗಂಗೆಯಲ್ಲಿ ಬಿಟ್ಟಿತ್ತು’, 2014 ರಲ್ಲಿ ‘ಬಳ್ಳಿಯ ಹೂ ಬಾಡದಿರಲಿ’ ಕಿರು ಕಥಾ ಸಂಕಲನ, 2018 ರಲ್ಲಿ ‘ಚಿಂದಿ’ ಕಥಾ ಸಂಕಲನ ಪ್ರಕಟವಾಗಿವೆ.

1996ರಲ್ಲಿ ‘ಬೀದರ್ ಜಿಲ್ಲೆಯ ಕನ್ನಡ ಭಾಷಾ ಕುಸುಮ’ 2006ರಲ್ಲಿ ‘ಗುರುತು’ ಹಾಗೂ ‘ಕಲ್ಯಾಣ ಕರ್ನಾಟಕದ ಕನ್ನಡ ಭಾಷೆ ಮತ್ತು ಇತರ ಪ್ರಬಂಧಗಳು’ ಎಂಬ ಪ್ರಬಂಧ ಸಂಕಲನ ಪ್ರಕಟಗೊಂಡಿವೆ.

‘ವಿಚಾರಗಳಿಂದ ಸವಾಯಿಗಳಿಲ್ಲ’, ‘ಅಡ್ಡಗೋಡೆಯ ಮೇಲಿನ ದೀಪ’ ‘ಗಡಿನಾಡು ಭಾಷಾ ಸಮಸ್ಯೆ’ ‘ವಿನಯ ಭಂಡಾರಿ’ ‘ನೀನೊಲಿದರೆ ಕೊರಡು ಕೊನರುವುದಯ್ಯಾ’ ಕೃತಿಗಳನ್ನು ಹೊರತಂದಿದ್ದರು. ಆಕಾಶವಾಣಿ ದೂರದರ್ಶನದಲ್ಲೂ
ಅವರ ಚಿಂತನ ಹಾಗೂ ಸಂದರ್ಶನಗಳು ಪ್ರಸಾರವಾಗಿವೆ.

1992ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ವತಿಯಿಂದ ನಡೆಸಿದ ಹೈದರಾಬಾದ್ ಕರ್ನಾಟಕ ವಿಭಾಗ ಮಟ್ಟದ ಚಿಂತನ ಸ್ಪರ್ಧೆಯಲ್ಲಿ ‘ವಿಚಾರಗಳಿಂದ ಸವಾಯಿಗಳಿಲ್ಲ’ ಕೃತಿಗೆ ₹1 ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ಬಂದಿತ್ತು.

1997 ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ರಾಜಪುರೋಹಿತ ದತ್ತಿ ಕಥಾ ಸ್ಪರ್ಧೆಯಲ್ಲಿ ‘ಶ್ರಮದಾನಿಯ ಶೌರ್ಯ’ ಹಾಗೂ 1998 ರಲ್ಲಿ ‘ಕೆಂಪು ಹರಿದು ನೇಸರ ಮೂಡಿದಾಗ’ ಕತೆಗಳು ಮೆಚ್ಚುಗೆಗೆ ಪಾತ್ರವಾಗಿದ್ದವು. 1999ರಲ್ಲಿ ನಡೆದ ಸ್ಪರ್ಧೆಯಲ್ಲಿ ‘ಕಾಡಿನಲ್ಲಿ ಹಿಡಿದ ಗ್ರಹಣ ಗಂಗೆಯಲ್ಲಿ ಬಿಟ್ಟಿತ್ತು’ ಕತೆಗೆ ಪ್ರಥಮ ಬಹುಮಾನವಾಗಿ ₹2 ಸಾವಿರ ನಗದು ಮತ್ತು ಚಿನ್ನದ ಪದಕ, ಪ್ರಶಸ್ತಿ ಪತ್ರ ಲಭಿಸಿತ್ತು.

ಇವರಿಗೆ 2003 ರಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ, 2010ರಲ್ಲಿ ಹುಮನಾಬಾದ್‌ನ ಸಾಕ್ಷಿ ಪ್ರತಿಷ್ಠಾನದ ‘ಧರಿನಾಡು ಸಿರಿ ಪ್ರಶಸ್ತಿ’ ಲಭಿಸಿತ್ತು. 2011ರಲ್ಲಿ ಭಾಲ್ಕಿ ತಾಲ್ಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು. 2004 ರಿಂದ 2008 ರವರೆಗೆ ಭಾಲ್ಕಿ ತಾಲ್ಲೂಕಿನ ಧರಿನಾಡು ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT