ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್ | ಬಹಮನಿ ಕೋಟೆಯಲ್ಲಿ ಫುಡ್ ಕೋರ್ಟ್ ಆರಂಭ

Published 15 ಆಗಸ್ಟ್ 2024, 13:55 IST
Last Updated 15 ಆಗಸ್ಟ್ 2024, 13:55 IST
ಅಕ್ಷರ ಗಾತ್ರ

ಬೀದರ್: ನಗರದ ಬಹಮನಿ ಕೋಟೆಯೊಳಗೆ ಆರಂಭಿಸಿರುವ ನೂತನ ‘ಶಾಹೀನ್ ಫುಡ್ ಕೋರ್ಟ್’ಗೆ (ಎಸ್‍ಎಫ್‍ಸಿ) ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಗುರುವಾರ ಚಾಲನೆ ನೀಡಿದರು.

ಕೋಟೆಯಲ್ಲಿ ಕ್ಯಾಂಟೀನ್ ಆರಂಭ ಆಗಿರುವುದರಿಂದ ವಿವಿಧೆಡೆಯಿಂದ ಬರುವ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಬರುವ ದಿನಗಳಲ್ಲಿ ಇತರೆ ಐತಿಹಾಸಿಕ ಸ್ಮಾರಕಗಳಲ್ಲೂ ಅಗತ್ಯ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಬೀದರ್ ಕೋಟೆ ಐತಿಹಾಸಿಕ ಕೋಟೆಗಳಲ್ಲಿ ಒಂದಾಗಿದೆ. ದೇಶ, ವಿದೇಶದ ಪ್ರವಾಸಿಗರು ಕೋಟೆ ವೀಕ್ಷಣೆಗೆ ಬರುತ್ತಾರೆ. ಆದರೆ, ಕೋಟೆಯೊಳಗೆ ಕ್ಯಾಂಟೀನ್ ಇರದ ಕಾರಣ ಅವರಿಗೆ ಕುಡಿಯುವ ನೀರು, ಉಪಹಾರಕ್ಕೆ ತೊಂದರೆ ಆಗುತ್ತಿತ್ತು. ಜಿಲ್ಲಾ ಆಡಳಿತದ ಅಪೇಕ್ಷೆ ಮೇರೆಗೆ ಪ್ರವಾಸಿಗರ ಹಿತದೃಷ್ಟಿಯಿಂದ ಕ್ಯಾಂಟೀನ್ ಪ್ರಾರಂಭಿಸಲಾಗಿದೆ ಎಂದು ಶಾಹೀನ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ ಹಸೀಬ್ ಹೇಳಿದರು.

ಕ್ಯಾಂಟೀನ್ ಬೆಳಿಗ್ಗೆ 7 ರಿಂದ ಸಂಜೆ 5ರ ವರೆಗೆ ತೆರೆದಿರಲಿದೆ. ಬೇಕರಿ ತಿನಿಸು, ತಂಪು ಪಾನೀಯ, ಕುಡಿಯುವ ನೀರಿನ ಬಾಟಲಿ ಮೊದಲಾದವು ಕ್ಯಾಂಟೀನ್‍ನಲ್ಲಿ ಸಿಗಲಿವೆ. ನಗರದಿಂದ 150 ಕಿ.ಮೀ. ದೂರದಲ್ಲಿ ಇರುವ ಹೈದರಾಬಾದ್‍ಗೆ ನಿತ್ಯ ನೂರಾರು ವಾಹನಗಳಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಅವರಿಗೆ ಇದರಿಂದ ನೆರವಾಗಲಿದೆ. ಕೋಟೆ ಸುತ್ತ ಬ್ಯಾಟರಿ ಚಾಲಿತ ವಾಹನ, ಗೈಡ್‍ಗಳ ವ್ಯವಸ್ಥೆ ಮಾಡಿದಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಇನ್ನಷ್ಟು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಉಪ ವಿಭಾಗಾಧಿಕಾರಿ ಲವೀಶ್ ಒರ್ಡಿಯಾ, ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಅಬ್ದುಲ್ ಖದೀರ್, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಬೀದರ್ ವಿಭಾಗದ ಸಹಾಯಕ ಸಂರಕ್ಷಣಾಧಿಕಾರಿ ಅನಿರುದ್ಧ್ ದೇಸಾಯಿ, ಡಿಸಿಎಫ್‌ ವಾನತಿ ಎಂ.ಎಂ., ಅಬ್ದುಲ್ ಮನ್ನಾನ್ ಸೇಠ್ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT