ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಯಾರಿಕೆಯಿಂದ ಅಲೆದಾಡುತ್ತಿರುವ ಕೃಷ್ಣಮೃಗಗಳು

ವನ್ಯಜೀವಿಗಳ ನೀರಿನ ವ್ಯವಸ್ಥೆಗೆ ಮುಂದಾದ ಜಿಲ್ಲಾ ಆಡಳಿತ
Last Updated 18 ಮೇ 2019, 20:00 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲಿ ಮೂರು ತಿಂಗಳಿಂದ ಕೆಂಡದಂತಹ ಬಿಸಿಲಿದೆ. ಗ್ರಾಮಗಳಲ್ಲಿನ ಕೆರೆಗಳು ಅಷ್ಟೇ ಅಲ್ಲ, ಮಾಂಜರಾ ನದಿಯೂ ಬತ್ತಿದೆ. ಬಿಸಿಲಿನ ಝಳಕ್ಕೆ ಹುಲ್ಲು ಸಹ ಒಣಗಿದೆ. ವನ್ಯಜೀವಿಗಳು ಹೊಲ ಗದ್ದೆಗಳ ಬದುಗಳ ಮೇಲೆ ಬೆಳೆದ ಒಣ ಹುಲ್ಲು ತಿಂದು ನೀರಿಗಾಗಿ ಅಲೆದಾಡುತ್ತಿವೆ. ಪರಿಸರ ಪ್ರೇಮಿಗಳ ಒತ್ತಡಕ್ಕೆ ಮಣಿದು ಜಿಲ್ಲಾ ಆಡಳಿತ ಕೊನೆಗೂ ವನ್ಯಜೀವಿಗಳಿಗೆ ನೀರು ಒದಗಿಸಲು ಮುಂದಾಗಿದೆ.

ಜಿಲ್ಲೆಯಲ್ಲಿ ಶೇಕಡ 10ರಷ್ಟು ಕುರುಚಲು ಕಾಡು ಇದೆ. ಕೃಷ್ಣಮೃಗ, ಮೊಲ, ನರಿ, ಲಂಗೂರ ಹಾಗೂ ಕಾಡು ಹಂದಿಗಳು ಇಲ್ಲಿ ಕಾಣಸಿಗುತ್ತವೆ. ಇವುಗಳಲ್ಲಿ ನೀರಿನ ಸಮಸ್ಯೆಯಿಂದ ಕೃಷ್ಣಮೃಗಗಳೇ ಹೆಚ್ಚು ತೊಂದರೆ ಅನುಭವಿಸುತ್ತಿವೆ. ಬೀದರ್‌ ತಾಲ್ಲೂಕಿನ ಮಮದಾಪುರ, ಬೆಳ್ಳೂರ, ವಿಳಾಸಪುರ ಹಾಗೂ ಭಾಲ್ಕಿ ತಾಲ್ಲೂಕಿನ ಖಾನಾಪುರದ ಕುರಚಲು ಕಾಡಿನ ಮಧ್ಯೆ ಹಳ್ಳಕೊಳ್ಳಗಳಲ್ಲೇ ಕೃಷ್ಣಮೃಗಗಳು ವಾಸವಾಗಿವೆ.

ಅರಣ್ಯ ಇಲಾಖೆಯ ಅಧಿಕಾರಿಗಳೇ ಹೇಳುವ ಪ್ರಕಾರ ಎರಡು ಸಾವಿರ ಕೃಷ್ಣಮೃಗಗಳು ಜಿಲ್ಲೆಯಲ್ಲಿವೆ. ಪ್ರತಿ ವರ್ಷ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಪರಿತಪಿಸುವುದು ಸಾಮಾನ್ಯ. ನೀರು, ಆಹಾರ ಅರಿಸಿಕೊಂಡು ಗ್ರಾಮದ ಸಮೀಪ ಬಂದಾಗ ನಾಯಿಗಳ ಹಿಂಡು ಅವುಗಳ ಮೇಲೆ ದಾಳಿ ಇಡುತ್ತಿವೆ. ಹೀಗಾಗಿ ಅವು ನೀರಿಗಾಗಿಯೇ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುವಂತಹ ಸ್ಥಿತಿ ನಿರ್ಮಾಣವಾಗಿದೆ.

ಬೆಳ್ಳೂರು ಗ್ರಾಮದ ಹೊರವಲಯ ಹಾಗೂ ವಾಯುಪಡೆ ತರಬೇತಿ ಕೇಂದ್ರದ ಹಿಂಬದಿಯ ವಿಶಾಲವಾದ ಹುಲ್ಲುಗಾವಲು ಪ್ರದೇಶದಲ್ಲಿ ಕೃಷ್ಣಮೃಗಗಳು ಹಿಂಡುಗಳಲ್ಲಿ ಅಲೆದಾಡುತ್ತಿವೆ. ಬೆಳಗಿನ ಜಾವ ಇಲ್ಲಿ ಸಹಜವಾಗಿಯೇ ಕಣ್ಣಿಗೆ ಬೀಳುತ್ತವೆ. ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಅನುರಾಗ ತಿವಾರಿ ಇಲ್ಲಿಗೆ ಭೇಟಿ ನೀಡಿ ಅರಣ್ಯರಕ್ಷಿತ ಪ್ರದೇಶವೆಂದು ಘೋಷಣೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಈ ಪ್ರದೇಶದಲ್ಲಿ ಡಾಂಬರ್ ರಸ್ತೆ ನಿರ್ಮಾಣಕ್ಕೆ ಹಿಂದಿನ ಡಿಎಫ್ಒ ಧನಂಜಯ ಆಕ್ಷೇಪ ವ್ಯಕ್ತಪಡಿಸಿದ್ದರು. ಇವರ ವರ್ಗಾವಣೆಯ ನಂತರ ಕೃಷ ಮೃಗ ರಕ್ಷಣೆ ಯೋಜನೆಯೇ ಮೂಲೆಗುಂಪಾಗಿದೆ.

’ಅರಣ್ಯ ಇಲಾಖೆಯವರು ಪ್ರತಿ ವರ್ಷ ಮೇ ಅಂತ್ಯದ ವೇಳೆಗೆ ಕುರುಚಲು ಕಾಡಿನಲ್ಲಿ ಒಂದೆರಡು ತೊಟ್ಟಿ ಇಟ್ಟು ಚಿತ್ರ ತೆಗೆಸಿಕೊಂಡು ಪತ್ರಿಕೆಗಳಿಗೆ ಮಾಹಿತಿ ನೀಡುವ ಪರಿಪಾಠ ಬಿಟ್ಟರೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ಪ್ರಯತ್ನಿಸಿಲ್ಲ’ ಎಂದು ತೇಗಂಪುರದ ಶಿವಕುಮಾರ ಪಾಟೀಲ ಹೇಳುತ್ತಾರೆ.

ಮೇ 13 ರಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದಿದ್ದ ಕುಡಿಯುವ ನೀರು ಪೂರೈಕೆ ಹಾಗೂ ಮೇವು ಸಂಗ್ರಹ ಕುರಿತ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಎಚ್.ಆರ್‌.ಮಹಾದೇವ ಅವರು ಜಿಲ್ಲೆಯಲ್ಲಿ ಯಾವ ವಲಯಗಳಲ್ಲಿ ಎಷ್ಟು ಕಾಡು ಪ್ರಾಣಿಗಳಿವೆ, ಅರಣ್ಯ ಪ್ರದೇಶದಲ್ಲಿ ಎಷ್ಟು ಸಿಮೆಂಟ್ ತೊಟ್ಟಿಗಳನ್ನು ಇಟ್ಟರೆ ವನ್ಯಜೀವಿಗಳಿಗೆ ಅನುಕೂಲವಾಗಲಿದೆ ಎನ್ನುವ ಕುರಿತು ವರದಿ ನೀಡುವಂತೆ ಸೂಚನೆ ನೀಡಿದ್ದರು.

ಅರಣ್ಯ ಇಲಾಖೆಯ ಅಧಿಕಾರಿಗಳು ಸಮಗ್ರ ವರದಿಯನ್ನು ಸಿದ್ಧಪಡಿಸಿ ಶನಿವಾರ ಜಿಲ್ಲಾ ಆಡಳಿತಕ್ಕೆ ಒಪ್ಪಿಸಿದ್ದಾರೆ.

‘ಸಾಕು ಪ್ರಾಣಿಗಳಿಗೆ ಕೃಷಿಕರು ಹೇಗೂ ನೀರಿನ ವ್ಯವಸ್ಥೆ ಮಾಡುತ್ತಾರೆ. ಆದರೆ, ವನ್ಯಜೀವಿಗಳು ಕುಡಿಯುವ ನೀರಿಗಾಗಿ ಅಲೆದಾಡುವುದು ನೋಡಿದರೆ ಮನಕಲಕುತ್ತದೆ. ಕೃಷ್ಣಮೃಗಗಳು ಸಂಚರಿಸುವ ಮಾರ್ಗಗಳಲ್ಲೇ ನೀರಿನ ತೊಟ್ಟಿ ಇಟ್ಟು ಕನಿಷ್ಠ ನೀರು ಒದಗಿಸುವ ಕೆಲಸ ಮಾಡುವುದು ಒಳ್ಳೆಯದು’ ಎನ್ನುತ್ತಾರೆ ವಕೀಲ ಮನ್ಮಥ ಮೀನಕೇರಾ.

‘ಖಾನಾಪುರ ಸಮೀಪದ ವಿಳಾಸಪುರ ಕೆರೆ ಸಂಪೂರ್ಣ ಬತ್ತಿ ಹೋಗಿದೆ. ಮೊದಲು ಇಲ್ಲಿ ಬ್ಲ್ಯಾಕ್‌ಬಗ್‌ ರೆಸಾರ್ಟ್ ಸಮೀಪ ಗುಂಪಿನಲ್ಲಿ 40 ರಿಂದ 50 ಕೃಷ್ಣಮೃಗಗಳು ಕಾಣಸಿಗುತ್ತಿದ್ದವವು. ಇದೀಗ ಮೇವು, ನೀರಿನ ಕೊರತೆಯಿಂದ ಸೊರಗಿ ಬಡಕಲಾಗಿರುವ 10, 15 ಕೃಷ್ಣಮೃಗಗಳು ಮಾತ್ರ ಕಂಡು ಬರುತ್ತಿವೆ. ಕೃಷ್ಣಮೃಗಗಳು ಹಿಂಡುಗಳಿಂದ ಪ್ರತ್ಯೇಕಗೊಂಡಿವೆಯೋ, ಸತ್ತಿವೆಯೋ ಗೊತ್ತಾಗುತ್ತಿಲ್ಲ. ಕುಡಿಯುವ ನೀರಿಗಾಗಿ ಬೆಳಗಿನ ಜಾವ ಗ್ರಾಮದ ಪರಿಸರದಲ್ಲಿ ಅಲೆದಾಡುತ್ತಿವೆ’ ಎಂದು ಹೇಳುತ್ತಾರೆ ಖಾನಾಪುರದ ಮಾಣಿಕರಾವ್‌ ಪಾಟೀಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT