ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ರಾತ್ರಿ 8 ಗಂಟೆವರೆಗೆ ಪಡಿತರ ಅಂಗಡಿ ತೆರೆದಿಡಲು ಸೂಚನೆ

ಆಹಾರ ನಾಗರಿಕ ಸರಬರಾಜು ಸಚಿವ ಕೆ.ಗೋಪಾಲಯ್ಯ ಹೇಳಿಕೆ
Last Updated 10 ಜೂನ್ 2020, 14:52 IST
ಅಕ್ಷರ ಗಾತ್ರ

ಬೀದರ್‌: ‘ಕೂಲಿ ಕೆಲಸ ಮಾಡುವ ವ್ಯಕ್ತಿಗಳು ತಮ್ಮ ಕೆಲಸಕ್ಕೆ ರಜೆ ಹಾಕದೆ ಪಡಿತರ ಸಾಮಗ್ರಿ ಪಡೆಯುವಂತಾಗಬೇಕು. ಈ ದಿಸೆಯಲ್ಲಿ ರಾಜ್ಯದಾದ್ಯಂತ ನ್ಯಾಯ ಬೆಲೆ ಅಂಗಡಿಗಳಲ್ಲಿ ರಾತ್ರಿ 8 ಗಂಟೆ ವರೆಗೂ ಪಡಿತರ ಸಾಮಗ್ರಿ ವಿತರಣೆ ಮಾಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು’ ಎಂದು ಆಹಾರನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಗೋಪಾಲಯ್ಯ ಹೇಳಿದರು.

‘ಜನ ಸಾಮಾನ್ಯರು ಹಾಗೂ ಬಡ ಕೂಲಿ ಕಾರ್ಮಿಕರು ತಮ್ಮ ಕೆಲಸ ಮುಗಿಸಿಕೊಂಡು ಬಂದಾಗ ಪಡಿತರ ಸಾಮಗ್ರಿ ಸಿಗಬೇಕೆಂಬುದು ಆಹಾರ ಇಲಾಖೆಯ ಆಶಯವಾಗಿದೆ. ಇನ್ನು ಬೆಳಿಗ್ಗೆಯಿಂದ ರಾತ್ರಿ 8 ಗಂಟೆ ವರೆಗೂ ಪಡಿತರ ಅಂಗಡಿ ತೆರೆದಿಡಲಾಗುವುದು’ ಎಂದು ನಗರದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ಇಲಾಖೆ ಅಧಿಕಾರಿಗಳು ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಪಡಿತರ ಧಾನ್ಯಗಳ ಗುಣಮಟ್ಟ ಪರಿಶೀಲನೆ ನಡೆಸಲಿದ್ದಾರೆ. ಬೀದರ್‌ ಜಿಲ್ಲೆಯ ಗೋದಾಮುಗಳಿಗೆ ಭೇಟಿ ನೀಡಿ ಆಹಾರಧಾನ್ಯ ಗುಣಮಟ್ಟ ಪರಿಶೀಲಿಸಿದ್ದೇನೆ. ಕಲಬುರ್ಗಿ ಹಾಗೂ ಯಾದಗಿರಿ ಜಿಲ್ಲೆಗಳಿಗೂ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಲಿದ್ದೇನೆ’ ಎಂದು ಹೇಳಿದರು.

'ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜೂನ್ ತಿಂಗಳ ಪಡಿತರ ಆಹಾರ ಧಾನ್ಯ ಮಂಜೂರು ಮಾಡಿದೆ. ರಾಜ್ಯದ ಜತೆಗೆ ಹೊರ ರಾಜ್ಯಗಳಿಂದ ಬಂದಿರುವ ವಲಸೆ ಕಾರ್ಮಿಕರಿಗೂ ಪಡಿತರ ವಿತರಿಸಲಾಗುವುದು. ಆಧಾರ್‌ ಕಾರ್ಡ್‌ ತೋರಿಸಿದರೆ ಸಾಕು ಬೇರೆ ದಾಖಲೆಗಳು ಅಗತ್ಯವಿಲ್ಲ’ ಎಂದು ತಿಳಿಸಿದರು.

‘ಲಾಕ್‌ಡೌನ್‌ ಜಾರಿ ಇದ್ದರೂ ಏಪ್ರಿಲ್‌ನಲ್ಲಿ ಶೇಕಡ 91 ರಷ್ಟು ಹಾಗೂ ಮೇನಲ್ಲಿ 99 ರಷ್ಟು ಪಡಿತರ ವಿತರಣೆ ಮಾಡಲಾಗಿದೆ. ವಲಸೆ ಕಾರ್ಮಿಕರಿಗೆ ಎರಡು ತಿಂಗಳು 10 ಕೆ.ಜಿ ಅಕ್ಕಿ ಹಾಗೂ 2 ಕೆ.ಜಿ. ಬೇಳೆ ವಿತರಿಸಲಾಗಿದೆ. ಜೂನ್‌ ತಿಂಗಳಲ್ಲೂ ಪಡಿತರ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ, ಬಸವಕಲ್ಯಾಣ ಶಾಸಕ ನಾರಾಯಣರಾವ್‌, ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್., ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಲಕ್ಷ್ಮಣರಾವ್ ಬುಳ್ಳಾ ಇದ್ದರು.

ಅಂಗಡಿ ಮಾಲೀಕರಿಗೆ ₹1.55 ಲಕ್ಷ ದಂಡ

‘ಜಿಲ್ಲೆಯಲ್ಲಿ ನ್ಯಾಯ ಬೆಲೆ ಅಂಗಡಿ, ದಿನಸಿ ಅಂಗಡಿ, ಮಾಸ್ಕ್‌, ಸ್ಯಾನಿಟೈಜರ್‌ಗಳ ನಿರ್ವಹಣೆಯ ತಪಾಸಣೆ ನಡೆಸಿ ಲೋಪ ಎಸಗಿರುವವರಿಗೆ ಒಟ್ಟು ₹ 1.55 ಲಕ್ಷ ದಂಡ ವಿಧಿಸಲಾಗಿದೆ. ಒಟ್ಟು 112 ಮೊಕದ್ದಮೆಗಳನ್ನು ದಾಖಲು ಮಾಡಲಾಗಿದೆ’ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.

‘ಅನರ್ಹರು ಪಡೆದಿರುವ ಪಡಿತರ ಚೀಟಿಗಳನ್ನು ವಾಪಸ್‌ ಪಡೆಯುವ ಪ್ರಕ್ರಿಯೆ ಮುಂದುವರಿದಿದೆ. ಒಟ್ಟು 8,763 ಅರ್ಜಿಗಳನ್ನು ವಜಾ ಮಾಡಲಾಗಿದೆ. ರಾಜ್ಯದಾದ್ಯಂತ ಅಕ್ರಮವಾಗಿ ಪಡಿತರ ಚೀಟಿ ಪಡೆದವರಿಂದ ₹ 96 ಲಕ್ಷ ದಂಡ ವಸೂಲಿ ಮಾಡಲಾಗಿದೆ’ ಎಂದು ಹೇಳಿದರು.

‘ಬೀದರ್‌ ಜಿಲ್ಲೆಯಲ್ಲಿ ಒಟ್ಟು 3.89 ಲಕ್ಷ ಪಡಿತರ ಚೀಟಿಗಳಿವೆ. 191 ಜನ ಸ್ವಪ್ರೇರಣೆಯಿಂದ ಪಡಿತರ ಚೀಟಿ ಮರಳಿಸಿದ್ದಾರೆ. 467 ಕಾರ್ಡ್‌ಗಳನ್ನು ಅಧಿಕಾರಿಗಳೇ ರದ್ದು ಮಾಡಿದ್ದಾರೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT