ಬೀದರ್: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಪ್ರಕರಣದಲ್ಲಿ ಇಲ್ಲಿಯ ಜಿಲ್ಲಾ ಸೆಷನ್ಸ್ ಹಾಗೂ ವಿಶೇಷ ನ್ಯಾಯಾಧೀಶರ ನ್ಯಾಯಾಲಯವು ಸರ್ಕಾರಿ ನೌಕರರೊಬ್ಬರಿಗೆ ಐದು ವರ್ಷ ಜೈಲು ಶಿಕ್ಷೆ ಹಾಗೂ ₹ 50 ಲಕ್ಷ ದಂಡ ವಿಧಿಸಿದೆ.
ತುಳಸಿರಾಮ ಅಣ್ಣೆಪ್ಪ ನಂದಗಾಂವೆ ಶಿಕ್ಷೆಗೆ ಒಳಗಾದವರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ವಿಜಯಕುಮಾರ ಎಂ. ಆನಂದಶೆಟ್ಟಿ, ಲಂಚ ನಿಷೇಧ ಕಾಯ್ದೆಯ ಅನ್ವಯ ಬುಧವಾರ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದ್ದಾರೆ. ದಂಡ ಭರಿಸಲು ತಪ್ಪಿದ್ದಲ್ಲಿ ಹೆಚ್ಚುವರಿಯಾಗಿ ಒಂದು ವರ್ಷ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
ಬೀದರ್‌ನ ಶಿವನಗರದ ತುಳಸಿರಾಮ ನಂದಗಾಂವೆ 1983ರ ಫೆಬ್ರುವರಿ 7ರಂದು ರೇಷ್ಮೆ ಇಲಾಖೆಯಲ್ಲಿ ರೇಷ್ಮೆ ಪ್ರದರ್ಶಕ ಹುದ್ದೆಗೆ ನೇಮಕಗೊಂಡಿದ್ದರು. ನಂತರ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹಾಗೂ ನಿಯೋಜನೆ ಮೇಲೆ ಬೀದರ್ ದಕ್ಷಿಣ ಶಾಸಕರ ಆಪ್ತ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿದ್ದರು.
ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕರ್ನಾಟಕ ಲೋಕಾಯುಕ್ತದ ಬೀದರ್ ಠಾಣೆಯ ಅಧಿಕಾರಿಗಳು 2008ರ ಡಿಸೆಂಬರ್ 30ರಂದು ತುಳಸಿರಾಮ ಅವರ ಬೀದರ್‌ನ ಶಿವನಗರದ ಮನೆ ಹಾಗೂ ಬೆಂಗಳೂರಿನ ಮಲ್ಲೇಶ್ವರಂನ ಬಾಡಿಗೆ ಮನೆ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದರು. ತನಿಖೆ ಸಂದರ್ಭದಲ್ಲಿ ತುಳಸಿರಾಮ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವುದು ಕಂಡು ಬಂದಿತ್ತು.
ಲೋಕಾಯುಕ್ತದ ಬೀದರ್ ಠಾಣೆಯ ಅಧೀನ ಡಿವೈಎಸ್ಪಿ ಟಿ.ಜಿ. ರಾಯ್ಕರ್ ಅವರು ಲಂಚ ನಿಷೇಧ ಕಾಯ್ದೆಯಡಿ ತುಳಸಿರಾಮ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಆದಾಯಕ್ಕಿಂತ ₹ 36.76 ಲಕ್ಷ (ಶೇ 125.94) ಹೆಚ್ಚು ಆಸ್ತಿ ಹೊಂದಿರುವುದು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ತುಳಸಿರಾಮಗೆ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ ಎಂದು ಪ್ರಕರಣದಲ್ಲಿ ಕರ್ನಾಟಕ ಲೋಕಾಯುಕ್ತದ ಪರವಾಗಿ ವಾದ ಮಂಡಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಕೇಶವರಾವ್ ಶ್ರೀಮಾಳೆ ತಿಳಿಸಿದ್ದಾರೆ.