ಮಂಗಳವಾರ, ಸೆಪ್ಟೆಂಬರ್ 21, 2021
27 °C
ಬೀದರ್‌ ನಗರದಲ್ಲಿ 4, ಔರಾದ್‌ನಲ್ಲಿ 1 ವೃದ್ಧಾಶ್ರಮ; ವೃದ್ಧಾಶ್ರಮಗಳಲ್ಲಿ ಮನೆಯ ವಾತಾವರಣ

ಹಿರಿಯ ನಾಗರಿಕರಿಗೆ ಸರ್ಕಾರದ ಯೋಜನೆ ಆಸರೆ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಜಿಲ್ಲೆಯಲ್ಲಿ ಎರಡು ನಗರ ಹಾಗೂ ಐದು ಪಟ್ಟಣಗಳಿದ್ದರೂ ಸಾಮಾಜಿಕ ಸಂಸ್ಕಾರ ಹಳ್ಳಿಗಳ ಸೆರಗಿನಲ್ಲೇ ಅಧಿಕ ಇದೆ. ಅವಿಭಕ್ತ ಕುಟುಂಬಗಳ ಸಂಖ್ಯೆ ಕಡಿಮೆಯಾದರೂ ಹಿರಿಯರಿಗೆ ಭದ್ರತೆ ಒದಗಿಸುವಲ್ಲಿ ಹಳ್ಳಿಗಳು ಹಿಂದೆ ಬಿದ್ದಿಲ್ಲ. ಸರ್ಕಾರ ಅನಾಥ ಹಾಗೂ ದುರ್ಬಲ ವರ್ಗದ ಹಿರಿಯ ನಾಗರಿಕರಿಗೆ ನೆರವು ಒದಗಿಸಿ ಬದುಕಿನ ಸಂಧ್ಯಾಕಾಲದ ‌ದಿನಗಳನ್ನು ನೆಮ್ಮದಿಯಿಂದ ಕಳೆಯುವಂತೆ ಮಾಡಿದೆ.

ಹಿರಿಯ ನಾಗರಿಕರಿಗಾಗಿಯೇ ಬೀದರ್‌ ನಗರದಲ್ಲಿ ನಾಲ್ಕು ಹಾಗೂ ಔರಾದ್‌ನಲ್ಲಿ ಒಂದು ವೃದ್ಧಾಶ್ರಮ ಕಾರ್ಯನಿರ್ವಹಿಸುತ್ತಿದೆ. ಕಡು ಬಡತನದಿಂದ ಬಂದವರು ಹಾಗೂ ಇಳಿ ವಯಸ್ಸಿನಲ್ಲಿ ನೋಡಿ ಕೊಳ್ಳುವವರು ಇಲ್ಲದವರೇ ಇಲ್ಲಿ ಆಶ್ರಯ ಪಡೆದಿದ್ದಾರೆ.

ಬೀದರ್‌ನ ಬಿ.ಆರ್. ಅಂಬೇಡ್ಕರ್‌ ಕಲ್ಚರಲ್‌ ಆ್ಯಂಡ್ ವೆಲ್‌ಫೇರ್‌ ಸೊಸೈಟಿಯ ಜ್ಯೋತಿಬಾ ಫುಲೆ ವೃದ್ಧಾಶ್ರಮ, ಹುಡ್ಕೊ ಕಾಲೊನಿಯ ಸಂಗ್ರಾಮ ಎಜುಕೇಷನ್‌ ಸೊಸೈಟಿ, ಶಿವಲೀಲಾ ವುಮನ್ಸ್‌ ವೆಲ್‌ಫೇರ್‌ ಅಸೋಸಿಯೇಷನ್‌ನ ಮದರ್‌ ತೆರೆಸಾ ವೃದ್ಧಾಶ್ರಮ, ಅಕ್ಕಮಹಾದೇವಿ ವೃದ್ಧಾಶ್ರಮ ಹಾಗೂ ಔರಾದ್‌ನ ರಮಾಬಾಯಿ ಅಂಬೇಡ್ಕರ್‌ ವೃದ್ಧಾಶ್ರಮಗಳು ವೃದ್ಧರಿಗೆ ಆಶ್ರಯ ಕಲ್ಪಿಸಿವೆ.

ವೃದ್ಧಾಶ್ರಮಗಳಲ್ಲಿ ಮನೆಯ ವಾತಾವರಣವೇ ಇದೆ. ವೃದ್ಧರು ನಿತ್ಯ ಪತ್ರಿಕೆ ವಾಚನ, ಟಿವಿ ವೀಕ್ಷಣೆ, ಭಜನೆ, ಕೇರಂ, ಚೆಸ್‌ ಆಟಗಳಲ್ಲಿ ತೊಡಗಿಸಿಕೊಂಡು ಬದುಕಿನ ಅನುಭವಗಳನ್ನು ಹಂಚಿಕೊಳ್ಳುತ್ತ, ಹಿಂದಿನ ನೆನಪುಗಳನ್ನು ಮೆಲಕು ಹಾಕುತ್ತ ಬದುಕು ಸಾಗಿಸಿದ್ದಾರೆ.

ಊರಲ್ಲಿ ಮನೆ ಇರುವವರಿಗೆ ವೃದ್ಧಾಪ್ಯ ವೇತನ ಕೊಟ್ಟು ಅವರ ಸಬಲೀಕರಣಕ್ಕೆ ಪ್ರಯತ್ನಿಸಲಾಗುತ್ತಿದೆ. 42,557 ಮಂದಿ ಇಂದಿರಾ ಗಾಂಧಿ ವೃದ್ಧಾಪ್ಯ ವೇತನ ಹಾಗೂ 91,715 ಜನ ಸಂಧ್ಯಾ ಸುರಕ್ಷಾ ಯೋಜನೆಯಡಿ ಸರ್ಕಾರದಿಂದ ನೆರವು ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿಯ ಸಾಮಾಜಿಕ ಭದ್ರತೆ ಹಾಗೂ ಪಿಂಚಣಿ ವಿಭಾಗದ ಅಧಿಕಾರಿ ಪಾವಣಿ ಕುಲಕರ್ಣಿ ಹೇಳುತ್ತಾರೆ.

ಹಿರಿಯ ನಾಗರಿಕರ ಸಹಾಯವಾಣಿ-1090
ಸಂಕಷ್ಟದಲ್ಲಿರುವ ಹಿರಿಯ ನಾಗರಿಕರಿಗೆ ತುರ್ತು ಸೇವೆ ಒದಗಿಸಲು ಡಾ.ಅಂಬೇಡ್ಕರ್‌ ಕಲ್ಚರಲ್‌ ಸೊಸೈಟಿ ಮೂಲಕ ಹಿರಿಯ ನಾಗರಿಕರ ಸಹಾಯವಾಣಿ ನಡೆಸಲಾಗುತ್ತಿದೆ.

60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಗುರುತಿನ ಚೀಟಿ ಪಡೆಯಬಹುದಾಗಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇದೆ. ಸರ್ಕಾರದಿಂದ ಅನುಮತಿ ಪಡೆದ ಸ್ವಯಂ ಸೇವಾ ಸಂಸ್ಥೆಗಳಿಗೆ ಹಿರಿಯ ನಾಗರಿಕರ ಗುರುತಿನ ಚೀಟಿಗಳನ್ನು ವಿತರಿಸಲು ಅವಕಾಶ ಮಾಡಿಕೊಡಲಾಗಿದೆ.

171 ಹಿರಿಯ ನಾಗರಿಕರ ದೂರು: ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಹಿರಿಯ ನಾಗರಿಕರ 171 ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 158 ಪ್ರಕರಣಗಳನ್ನು ಕೌನ್ಸೆಲಿಂಗ್ ಮೂಲಕ ಇತ್ಯರ್ಥಗೊಳಿಸಲಾಗಿದೆ. ಆಸ್ತಿ ಹಂಚಿಕೆಗೆ ಸಂಬಂಧಪಟ್ಟಂತೆ ಬೀದರ್‌ ಉಪ ವಿಭಾಗಾಧಿಕಾರಿ ಬಳಿ 11 ಹಾಗೂ ಬಸವಕಲ್ಯಾಣ ಉಪ ವಿಭಾಗಾಧಿಕಾರಿ ಬಳಿ 1 ಪ್ರಕರಣ ವಿಚಾರಣೆ ಹಂತದಲ್ಲಿದೆ.

ನಗರ ಪ್ರದೇಶದಲ್ಲಿರುವ ಸುಶಿಕ್ಷಿತ ಕುಟುಂಬಗಳಿಂದಲೇ ಹಿರಿಯ ನಾಗರಿಕರಿಗೆ ಹೆಚ್ಚು ತೊಂದರೆ ಆಗುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಇಂತಹ ಪ್ರಕರಣಗಳು ಅಪರೂಪ. ಸಣ್ಣಪುಟ್ಟ ಮನಸ್ತಾಪಗಳು ಬಂದರೆ ಗ್ರಾಮದ ಮುಖಂಡರೇ ಬುದ್ಧಿವಾದ ಹೇಳಿ ಕಳಿಸುತ್ತಾರೆ ಎಂದು ಹಿರಿಯ ನಾಗರಿಕರ ಸಹಾಯವಾಣಿಯ ಮೈಕಲ್‌ ವಿವರಿಸುತ್ತಾರೆ.

ಹೊಸದಾಗಿ ಮನೆ ಸೇರುವ ಸೊಸೆಯಂದಿರು ಹಿರಿಯರಿಗೆ ಸಮಯಕ್ಕೆ ಸರಿಯಾಗಿ ತಿಂಡಿ, ಊಟ ಕೊಟ್ಟು, ಒಂದಿಷ್ಟು ಕ್ಷೇಮ ವಿಚಾರಿಸಿದರೂ ಸಾಕು. ಎಲ್ಲವೂ ಸುಸೂತ್ರವಾಗಿರುತ್ತದೆ. ಕಡೆಗಣಿಸುವುದೇ ಹಲವು ಸಮಸ್ಯೆಗೆ ಎಡೆ ಮಾಡಿಕೊಡುತ್ತದೆ ಎನ್ನುವುದು ಹಲವು ಪ್ರಕರಣಗಳಲ್ಲಿ ಕೌನ್ಸೆಲಿಂಗ್ ಸಮಯದಲ್ಲಿ ಬಹಿರಂಗವಾಗಿದೆ ಎನ್ನುವುದು ಅವರು ಹೇಳುವ ಮಾತು.

ತಿಂಗಳಿಗೆ ₹400 ವೃದ್ಧಾಪ್ಯ ವೇತನ
ಜೀವನ ನಿರ್ವಹಣೆ ಕಷ್ಟವಾಗಿರುವ ಹಿರಿಯ ನಾಗರಿಕರಿಗೆ ಸರ್ಕಾರ ತಿಂಗಳಿಗೆ ₹400 ವೃದ್ಧಾಪ್ಯ ವೇತನ ನೀಡುತ್ತಿದೆ. ಕಂದಾಯ ಇಲಾಖೆ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಹಿರಿಯ ನಾಗರಿಕರು ವಯಸ್ಸಿನ ದೃಢೀಕರಣ ಪ್ರಮಾಣಪತ್ರ, ಆದಾಯ ಪ್ರಮಾಣ ಪತ್ರ, ರಾಜ್ಯದಲ್ಲಿ ವಾಸವಾಗಿರುವ ದೃಢೀಕರಣ ಪತ್ರದ ದಾಖಲಾತಿಗಳೊಂದಿಗೆ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿ ಇದರ ಲಾಭ ಪಡೆಯಬಹುದಾಗಿದೆ.

ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ ಸಾಮಾಜಿಕ ಭದ್ರತಾ ರೂಪದಲ್ಲಿ ವಯೋವೃದ್ಧರಿಗೆ ಪ್ರತಿ ತಿಂಗಳು ₹ 600 ಸಹಾಯಧನ ನೀಡಲಾಗುತ್ತಿದೆ. ಮಕ್ಕಳ ಆದಾಯವನ್ನು ತಂದೆ– ತಾಯಿಯವರ ವಾರ್ಷಿಕ ಆದಾಯಕ್ಕೆ ಪರಿಗಣಿಸುವುದಿಲ್ಲ. ಆದರೆ, ಮನವಿದಾರರ ಮತ್ತು ಅವರ ಪತಿ ಅಥವಾ ಪತ್ನಿಯ ವಾರ್ಷಿಕ ಆದಾಯ ₹ 20 ಸಾವಿರ ಕ್ಕಿಂತ ಹೆಚ್ಚಾಗಿರಬಾರದು. ಪತಿ ಅಥವಾ ಪತ್ನಿಯ ಜಂಟಿ ಖಾತೆಯಲ್ಲಿ ₹ 1.10 ಲಕ್ಷ ಕ್ಕಿಂತ ಹೆಚ್ಚಿನ ಠೇವಣೆ ಇರಬಾರದು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ತಿಪ್ಪಣ್ಣ ಸಿರಸಗಿ ಹೇಳುತ್ತಾರೆ.

ಅತಿ ಸಣ್ಣ ರೈತರು, ಸಣ್ಣ ರೈತರು, ಕೃಷಿ ಕಾರ್ಮಿಕರು, ಮೀನುಗಾರರು ಅರ್ಜಿ ಸಲ್ಲಿಸಲು ಅರ್ಹರು. ಯಾವುದೇ ರೀತಿಯ ಮಾಸಾಶನ, ಪಿಂಚಣಿ ಹಾಗೂ ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಈ ಮಾಸಾಶನಕ್ಕೆ ಅರ್ಹರಾಗಿರುವುದಿಲ್ಲ ಎಂದು ಅವರು ವಿವರಿಸುತ್ತಾರೆ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.