ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡಹಗಲೇ ಅಜ್ಜಿಯ ಕತ್ತು ಕೊಯ್ದ ಮೊಮ್ಮಗ

ಸೇವಾ ನಿವೃತ್ತಿ ಹಣ ಕೊಡುವಂತೆ ಪೀಡಿಸುತ್ತಿದ್ದ ಮೊಮ್ಮಕ್ಕಳು
Last Updated 2 ಜುಲೈ 2019, 12:54 IST
ಅಕ್ಷರ ಗಾತ್ರ

ಬೀದರ್: ಸೇವಾ ನಿವೃತ್ತಿಯ ಹಣ ಕೊಡಲಿಲ್ಲ ಎಂಬ ಕಾರಣಕ್ಕೆಭಾಲ್ಕಿ ತಾಲ್ಲೂಕಿನ ಕಣಜಿ ಗ್ರಾಮದಲ್ಲಿ ಹಾಡಹಗಲೇ ನಡುಬೀದಿಯಲ್ಲಿ ಮೊಮ್ಮಗನೊಬ್ಬ ತನ್ನ ಅಜ್ಜಿಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಗ್ರಾಮಸ್ಥರು ಆತನನ್ನು ಹಿಡಿದು ಥಳಿಸಿ ಕಂಬಕ್ಕೆ ಕಟ್ಟಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಬೀದರ್‌ನ ಚಿದ್ರಿಯ ಲಲಿತಾಬಾಯಿ ವರ್ಧನ್‌ ಚಿದ್ರಿ (62) ಕೊಲೆಯಾದವರು. ಲಲಿತಾಬಾಯಿಯ ಮೊಮ್ಮಗ ಆರೋಪಿ ಅಖಿಲೇಶ ವಿಲಾಸ ಚಿದ್ರಿ (21)ಯನ್ನು ಧನ್ನೂರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಲಲಿತಾಬಾಯಿ ಅವರ ಪತಿ ವರ್ಧನ್‌ 1993ರಲ್ಲಿ ಸೇನೆಯಲ್ಲಿದ್ದಾಗ ಮೃತಪಟ್ಟಿದ್ದಾರೆ. ಇವರಿಗೆ ಮಗ ಹಾಗೂ ಮಗಳು ಇದ್ದಾರೆ. ಮಗ ವಿಲಾಸನಿಗೆ ಮೂವರು ಗಂಡು ಮಕ್ಕಳಿದ್ದು, ಅಖಿಲೇಶ ಮೂರನೆಯವ. ಪತಿಯ ನಿಧನದ ನಂತರ ಲಲಿತಾಬಾಯಿಗೆ ಪರಿಹಾರ ಹಣ ಬಂದಿತ್ತು. ಅಲ್ಲದೆ, ಸರ್ಕಾರ ಅವರಿಗೆ ಕಣಜಿಯ ಬಿಸಿಎಂ ಹಾಸ್ಟೆಲ್‌ನಲ್ಲಿ ಅಡುಗೆ ಮಾಡುವ ಕೆಲಸಕೊಟ್ಟಿತ್ತು. ಇಲ್ಲಿ ನಿವೃತ್ತಿ ಹೊಂದಿದ ನಂತರ ಸಹ ಒಂದಿಷ್ಟು ಹಣ ಬಂದಿತ್ತು. ಟೇಲರಿಂಗ್‌ ಮಾಡುತ್ತಿದ್ದ ಮಗ ವಿಲಾಸ ಮೃತಪಟ್ಟಿದ್ದಾರೆ.

ಲಲಿತಾಬಾಯಿ ಬಳಿ ₹ 11 ಲಕ್ಷ ಇರುವುದು ಮಕ್ಕಳು ಹಾಗೂ ಮೊಮ್ಮಕ್ಕಳಿಗೆ ಗೊತ್ತಿತ್ತು. ಸೊಸೆ ಹಾಗೂ ಮೊಮ್ಮಗ ತಮ್ಮ ಸಾಲ ತೀರಿಸಲು ಹಣ ಕೊಡುವಂತೆ ಒತ್ತಾಯಿಸಿದ್ದರು ಎನ್ನಲಾಗಿದೆ. ಲಲಿತಾಬಾಯಿ ಈಚೆಗೆ ಅವರಿಗೆ ₹ 1 ಲಕ್ಷ ಕೊಟ್ಟಿದ್ದರು. ಮತ್ತೆ ಹಣ ಕೊಡುವಂತೆ ದುಂಬಾಲು ಬಿದ್ದಿದ್ದರು.

‘ಹಣ ಕೊಟ್ಟರೆ ಖರ್ಚಾಗುತ್ತದೆ. ಬೀದರ್‌ನ ನೌಬಾದ್‌ನಲ್ಲಿ ಎರಡು ನಿವೇಶನಗಳಿದ್ದು, ಅಲ್ಲಿ ಮನೆ ಕಟ್ಟಿಸಿ ನಿಮ್ಮ ಹೆಸರಿಗೆ ಮಾಡಿಕೊಡುತ್ತೇನೆ ಎಂದು ಹೇಳಿದ್ದರು. ಮಂಗಳವಾರ ಅಖಿಲೇಶ ಮತ್ತೆ ಹಣ ಕೇಳಿ ಕರೆ ಮಾಡಿದ್ದಾನೆ. ಯಾವ ಕಾರಣಕ್ಕೂ ಹಣ ನಿಮ್ಮ ಕೈಗೆ ಕೊಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದಾಗ ಅಖಿಲೇಶ ಬೀದರ್‌ನಿಂದ ಬೆಳಿಗ್ಗೆ ಗ್ರಾಮಕ್ಕೆ ಬಂದು ನೀರು ತುಂಬಿಕೊಳ್ಳುತ್ತಿದ್ದ ಅಜ್ಜಿಯ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಅಜ್ಜಿ ರಕ್ಷಣೆಗೆ ಕೂಗಾಡಿದ್ದಾಳೆ. ಅಷ್ಟರಲ್ಲಿ ಎರಡು ಮೂರು ಬಾರಿ ಇರಿದು ಕತ್ತು ಕೊಯ್ದು ಹಾಕಿದ್ದಾನೆ’ ಎಂದು ಮೂಲಗಳು ತಿಳಿಸಿವೆ.

ಗ್ರಾಮದ ಜನ ಆರೋಪಿಯನ್ನು ಹಿಡಿದು ಮನಬಂದಂತೆ ಹೊಡೆದಿದ್ದಾರೆ. ನಂತರ ಕಂಬಕ್ಕೆ ಕಟ್ಟಿ ಹಾಕಿ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT