ಭಾನುವಾರ, ಏಪ್ರಿಲ್ 11, 2021
27 °C

ಮುಕ್ತ ಮಾರುಕಟ್ಟೆಯಲ್ಲೇ ಜೋಳಕ್ಕೆ ಎಂಎಸ್‌ಪಿ ₹2,620, ಮಾರುಕಟ್ಟೆ ಬೆಲೆ ₹ 3,500

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆಯಲ್ಲಿ ಜೋಳವನ್ನೂ ಖರೀದಿಸಲು ಅವಕಾಶ ಕಲ್ಪಿಸಿದೆ. ಸರ್ಕಾರ ಜೋಳಕ್ಕೆ ನಿಗದಿಪಡಿಸಿದ ಬೆಲೆಗಿಂತ ಮುಕ್ತ ಮಾರುಕಟ್ಟೆಯಲ್ಲಿಯೇ ರೈತರಿಗೆ ಉತ್ತಮ ಬೆಲೆ ದೊರೆಯುತ್ತಿದೆ. ಕನಿಷ್ಠ ಬೆಂಬಲ ಬೆಲೆ ಮೌಲ್ಯ ಕಳೆದುಕೊಂಡಿದೆ.

ಪ್ರತಿ ಕ್ವಿಂಟಲ್‌ ಜೋಳಕ್ಕೆ ಗುಣಮಟ್ಟಕ್ಕೆ ಅನುಗುಣವಾಗಿ ಸರ್ಕಾರ ₹ 2,620ರಿಂದ ₹ 2,640 ಬೆಲೆ ನಿಗದಿ ಮಾಡಿದೆ. ಆದರೆ ಮುಕ್ತ ಮಾರುಕಟ್ಟೆಯಲ್ಲಿ ₹ 3,200ರಿಂದ ₹ 4,000 ವರೆಗೂ ಮಾರಾಟವಾಗುತ್ತಿದೆ. ಸರ್ಕಾರ ಗೊತ್ತುಪಡಿಸಿದ ಬೆಲೆಯಿಂದ ರೈತರಿಗೆ ಅನುಕೂಲವಾಗಿಲ್ಲ.

ರೈತರಿಂದ ಹೈಬ್ರೀಡ್‌ ಬಿಳಿ ಜೋಳ, ಮಾಲ್ದಂಡಿ ಬಿಳಿ ಜೋಳ ಖರೀದಿಸಲು ಜಿಲ್ಲಾ ಕಾರ್ಯಪಡೆ ಸಮಿತಿ ನಿರ್ಧರಿಸಿದೆ. ಜಿಲ್ಲೆಯಲ್ಲಿ ಐದು ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.

ಬೀದರ್‌ನ ಮೈಲೂರ್‌ನಲ್ಲಿರುವ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಸಗಟು ಮಳಿಗೆ (94828 72583), ಔರಾದ್‌ನ ಎಪಿಎಂಸಿ ಆವರಣದಲ್ಲಿರುವ ನಿಗಮದ ಸಗಟು ಮಳಿಗೆ (94485 69155), ಬಸವಕಲ್ಯಾಣದ ಕೆಐಎಡಿಬಿಯಲ್ಲಿನ ನಿಗಮದ ಮಳಿಗೆ (97404 92482), ಭಾಲ್ಕಿ ಎಪಿಎಂಸಿ ಆವರಣದಲ್ಲಿರುವ ನಿಗಮದ ಮಳಿಗೆ (94828 72583) ಹಾಗೂ ಹುಮನಾಬಾದ್‌ನ ನಿಗಮದ ಮಳಿಗೆ (88845 63795)ಯಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಜೋಳ ಮಾರಾಟಕ್ಕೆ ನೋಂದಣಿ ಮಾಡಿಕೊಳ್ಳಲು ಮಾರ್ಚ್‌ 15ರ ವರೆಗೆ ಅವಕಾಶ ಇದೆ.

ರೈತರ ನೋಂದಣಿ: ‌ಖರೀದಿ ಕೇಂದ್ರಗಳಲ್ಲಿ ಆನ್‍ಲೈನ್ ಮುಖಾಂತರ ನೋಂದಣಿ ಶುರು ಮಾಡಲಾಗಿದೆ.
ರೈತರು ಕೃಷಿ ಇಲಾಖೆಯಿಂದ ಪಡೆದಿರುವ ಫ್ರೂಟ್ಸ್ ಐ.ಡಿ., (ರೈತರ ನೊಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ), ಆಧಾರ್ ಕಾರ್ಡ್, ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯ ಪಾಸ್‍ಬುಕ್‍ನ ಮುಖ ಪುಟದ ಝೆರಾಕ್ಸ್ ಪ್ರತಿಯೊಂದಿಗೆ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬೇಕು.

ಪ್ರಸಕ್ತ ಸಾಲಿನಲ್ಲಿ ರೈತರಿಂದ ಫ್ರೂಟ್ಸ್ ಐ.ಡಿ. (ಉದಾ: ಎಫ್.ಐಡಿ 2205000013125) ಪಡೆಯುವುದು ಕಡ್ಡಾಯ. ರೈತರ ಬಳಿ ಫ್ರೂಟ್ಸ್ ಐ.ಡಿ. ಇಲ್ಲದಿದ್ದಲ್ಲಿ ಅಥವಾ ಫ್ರೂಟ್ಸ್ ಐ.ಡಿ. ಮಾಹಿತಿ ಪರಿಷ್ಕರಿಸಬೇಕಿದ್ದಲ್ಲಿ ಕೃಷಿ ಇಲಾಖೆಯನ್ನು ಸಂಪರ್ಕಿಸಬಹುದು.

ಫ್ರೂಟ್ಸ್ ಐ.ಡಿ. ಲಭ್ಯವಿಲ್ಲದಿದ್ದಲ್ಲಿ ರೈತರ ಹೆಸರು ನೋಂದಣಿ ಆಗದು. ರೈತರು ಖರೀದಿ ವಿವರಗಳನ್ನು ಒಪ್ಪಿ ನಮೂದಿಸಿದ ನಂತರ ಸ್ವೀಕೃತಿಯನ್ನು ಮುದ್ರಿಸಿ ಅವರಿಗೆ ನೀಡಲಾಗುವುದು. ವಿವರಗಳಿಗೆ ಕೃಷಿ ಇಲಾಖೆಯ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು