ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಸಂಸ್ಕೃತಿ ಮಹತ್ವ ಸಾರುವ ‘ಹೋಳಾ’ ಹಬ್ಬ

Last Updated 4 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಔರಾದ್: ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ವಿಶೇಷ ಸ್ಥಾನವಿದೆ. ಕೃಷಿಕರು ಅವುಗಳನ್ನು ಪೂಜಿಸಿ ಗೌರವಿಸುತ್ತಾರೆ. ರಾಸುಗಳಿಗೆ ಗೌರವಿಸುವ ಸಲುವಾಗಿಯೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೋಳಾ ಹಬ್ಬ ಆಚರಿಸಲಾಗುತ್ತದೆ.

ಮಹಾರಾಷ್ಟ್ರದಲ್ಲಿ ಹೆಚ್ಚಾಗಿ ಕಂಡು ಬರುವ ಈ ಆಚರಣೆ ಜಿಲ್ಲೆಯ ಔರಾದ್ ಹಾಗೂ ಕಮಲನಗರ ತಾಲ್ಲೂಕಿನ ರೈತರಿಗೂ ಇದು ಅಚ್ಚುಮೆಚ್ಚಿನ ಹಬ್ಬ. ಮಹಾರಾಷ್ಟ್ರದಲ್ಲಿ ಈ ಹಬ್ಬಕ್ಕೆ ಪೋಳಾ (ಎತ್ತು) ಎಂದು ಕರೆಯುತ್ತಾರೆ. ನಮ್ಮಲ್ಲಿ ಹೋಳಾ ಎಂದು ಕರೆಯಲಾಗುತ್ತದೆ. ಇದೇ ರೀತಿಯ ಹಬ್ಬವನ್ನು ರಾಜ್ಯದ ಬೇರೆ ಬೇರೆ ಕಡೆ ಹಾಗೂ ಜಿಲ್ಲೆಯ ಕೆಲ ಕಡೆ ಕಾರಹುಣ್ಣಿಮೆ ಎಂದು ಆಚರಿಸುತ್ತಾರೆ. ಅದೂ ಹುಣ್ಣಿಮೆಗೆ ಆಚರಿಸಿದರೆ ಹೋಳಾ ಅಮವಾಸೆ ದಿನ ಆಚರಿಸುತ್ತಾರೆ.

ಎತ್ತುಗಳು ಕೃಷಿಯ ಅವಿಭಾಜ್ಯ ಅಂಗ. ಅವು ಮಳೆ, ಗಾಳಿ, ಬಿಸಿಲು ಲೆಕ್ಕಿಸದೆ ರೈತನ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸುತ್ತವೆ. ಈ ಮೂಕ ಪ್ರ್ರಾಣಿಗಳಿಗೆ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ಈ ಹೋಳಾ ಹಬ್ಬ ಆಚರಿಸಲಾಗುತ್ತದೆ ಎಂದು ಹೇಳಲಾಗುತ್ತದೆ.

ಹಬ್ಬದ ಹಿಂದಿನ ದಿನ ರೈತರು ಎತ್ತುಗಳ ಹೆಗಲಿಗೆ ಅರಸಿಣ ಮತ್ತು ಎಣ್ಣೆಯಿಂದ ಮಾಲಿಶ್ ಮಾಡುತ್ತಾರೆ. ಹಬ್ಬದ ದಿನ ಬೆಳಿಗ್ಗೆ ಸ್ನಾನ ಮಾಡಿಸಿ ಕೊಂಬುಗಳಿಗೆ ಬಣ್ಣ ಹಚ್ಚುತ್ತಾರೆ. ಕೊರಳಲ್ಲಿ ಕವಡೆ (ಮತಾಟಿ) ಗೆಜ್ಜೆನಾದದ ಸರಮಾಲೆ, ಟೊಂಕಿಗೆ ಕರಿದಾರ, ಬೆನ್ನ ಮೇಲೆ ಬಣ್ಣದ ಶಾಲು, ಹಣೆಗೆ ರಂಗು ರಂಗಿನ ಬಾಸಿಂಗ್ ತೊಡಿಸಿ ಸಿಂಗರಿಸುತ್ತಾರೆ.

ಹೀಗೆ ಸಿಂಗಾರಗೊಂಡ ಊರಿನ ಎಲ್ಲರ ಎತ್ತು ಹಾಗೂ ಹೋರಿಗಳು ಒಂದೆಡೆ ಸೇರಿಸಲಾಗುತ್ತದೆ. ನಂತರ ಹನುಮಾನ ದೇವರ ದರ್ಶನ ಮಾಡಿ ದೇವಸ್ಥಾನಕ್ಕೆ ಐದು ಸುತ್ತು ಹಾಕಲಾಗುತ್ತದೆ. ರಾತ್ರಿ ಮಹಿಳೆಯರು ವಿಧಿವತ್ತಾಗಿ ಎತ್ತುಗಳಿಗೆ ಪೂಜಿಸಿ ಬೆಲ್ಲ ತುಪ್ಪದಿಂದ ಮಾಡಿದ ಹೊಳಿಗೆ, ಕರ್ಚಿಕಾಯಿ ತಿನ್ನಿಸುತ್ತಾರೆ. ಹೀಗೆ ರೈತರು ಇಡೀ ದಿನ ಉಪವಾಸ ಉಳಿದು ರಾತ್ರಿ ಎತ್ತುಗಳಿಗೆ ನೈವೈದ್ಯ ತಿನ್ನಿಸಿದ ನಂತರವೇ ತಾವು ಊಟ ಮಾಡುವ ರೂಢಿ ಹಾಕಿಕೊಂಡಿದ್ದಾರೆ.

ಸಂಜೆ ಹೊತ್ತು ನಡೆಯುವ ಎತ್ತುಗಳ ಮೆರವಣಿಗೆ ನೋಡಲು ಜನ ಮುಗಿ ಬೀಳುತ್ತಾರೆ. ಕೆಲ ಊರುಗಳಲ್ಲಿ ಅತ್ಯುತ್ತಮವಾಗಿ ಸಿಂಗಾರಗೊಂಡ ಎತ್ತುಗಳಿಗೆ ಬಹುಮಾನ ಕೊಡುವ ಪದ್ಧತಿ ಇದೆ. ಔರಾದ್ ಪಟ್ಟಣದಲ್ಲಿ ಈಗಲೂ ದೇಶಮುಖ ಮನೆತನದವರು ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಕೊಡುವುದನ್ನು ಮುಂದುವರೆಸಿಕೊಂಡು ಬಂದಿದ್ದಾರೆ.
ಇಂತಹ ಆಧುನಿಕ ಹಾಗೂ ಮೊಬೈಲ್ ಯುಗದಲ್ಲೂ ಹೋಳಾದಂತಹ ಹಬ್ಬ ತನ್ನ ವೈಶಿಷ್ಟ್ಯದಿಂದ ಜನಮನ ಸೆಳೆಯುತ್ತಿರುವುದು ಅದ್ಭುತವೇ ಸರಿ.

ಈಗಲೂ ನಮಗೆ ಹೋಳಾ ಹಬ್ಬ ಬಂದರೆ ತುಂಬಾ ಖುಷಿ. ವರ್ಷವೀಡಿ ನಮ್ಮ ಜತೆ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸುವ ಎತ್ತುಗಳಿಗೆ ಪೂಜಿಸುವ ಬಹುದೊಡ್ಡ ಹಬ್ಬ.
-ಶಿವಕುಮಾರ ಜೀರ್ಗೆ, ಠಾಣಾಕುಶನೂರ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT