ಭಾನುವಾರ, ಜೂಲೈ 5, 2020
23 °C
ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಚ್‌.ಆರ್. ಮಹಾದೇವ ಸೂಚನೆ

ಕ್ವಾರಂಟೈನ್ ಪೂರೈಸಿದವರಿಗೆ ಹೋಮ್ ಕ್ವಾರಂಟೈನ್

‌ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಹೊರ ರಾಜ್ಯಗಳಿಂದ ಜಿಲ್ಲೆಗೆ ಬಂದು ಏಳು ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ಪೂರೈಸಿದವರಿಗೆ ಮತ್ತು ಸ್ಯಾಂಪಲ್ ನೀಡಿದ ಎಲ್ಲರನ್ನೂ ಬಿಡುಗಡೆ ಮಾಡಿ, ಸರ್ಕಾರದ ಹೊಸ ಮಾರ್ಗಸೂಚಿಯಂತೆ ಹೋಮ್ ಕ್ವಾರಂಟೈನ್‍ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಎಚ್.ಆರ್.ಮಹಾದೇವ ಹೇಳಿದರು.

ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಿ ಮಾತನಾಡಿದ ಅವರು, ಸ್ಯಾಂಪಲ್ ನೀಡದೇ ಇರುವವರನ್ನು ಮತ್ತು ಕಡ್ಡಾಯ ಏಳು ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ಪೂರೈಸದೇ ಇರುವವರನ್ನು ಬಿಡುಗಡೆ ಮಾಡಬಾರದು ಎಂದು ತಿಳಿಸಿದರು.

ಜಿಲ್ಲೆಯ ವಿವಿಧ ವಸತಿ ನಿಲಯಗಳು ಮತ್ತು ವಸತಿ ಶಾಲೆಗಳಲ್ಲಿ ಈಗ ಸಾವಿರಾರು ಸಂಖ್ಯೆಯಲ್ಲಿ ಹೊರ ರಾಜ್ಯಗಳ ಜನರು ಸಾಂಸ್ಥಿಕ ಕ್ವಾರಂಟೈನ್‍ದಲ್ಲಿದ್ದಾರೆ. ನಮ್ಮನ್ನು ಬೇಗ ಬಿಡುಗಡೆ ಮಾಡಿ ಎಂಬುದು ಅಲ್ಲಿನ ಕೆಲವರ ಒತ್ತಾಯ ಕೂಡ ಆಗಿದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಈಗ ಹೋಮ್ ಕ್ವಾರಂಟೈನ್ಗೆ ಹೋಗುವವರ ಮೇಲೆ ತಹಶೀಲ್ದಾರ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ, ತಾಲ್ಲೂಕು ಆರೋಗ್ಯಾಧಿಕಾರಿ, ಪಿಡಿಒ, ಗ್ರಾಮ ಲೆಕ್ಕಾಧಿಕಾರಿ ಹಾಗೂ ತಾಲ್ಲೂಕು ಮಟ್ಟದ ಇತರೆ ಇಲಾಖೆಗಳ ಅಧಿಕಾರಿಗಳು ಹೆಚ್ಚಿನ ನಿಗಾ ಇಡಬೇಕು ಎಂದು ಸೂಚಿಸಿದರು.

ಬಹಳಷ್ಟು ಜನರು ಮಹಾರಾಷ್ಟ್ರ ರಾಜ್ಯದಿಂದ ಬಂದಿರುವ ಸಾಧ್ಯತೆ ಇರುವುದರಿಂದ ಅವರ ಬಗ್ಗೆ ಎಚ್ಚರಿಕೆ ವಹಿಸಬೇಕು. ಸಾಂಸ್ಥಿಕ ಕ್ವಾರಂಟೈನ್‍ದಿಂದ ಬಿಡುಗಡೆಯಾಗಿ ಜಿಲ್ಲೆಯ ಪ್ರತಿಯೊಂದು ಹಳ್ಳಿಗೂ ಹೋಗುವ ಕಾರಣ ಒಬ್ಬರಿಂದ ನೂರಾರು ಜನರಿಗೆ ವೈರಸ್ ಹರಡುವ ಸಾಧ್ಯತೆ ಇದೆ. ಆದ್ದರಿಂದ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ತಹಶೀಲ್ದಾರರು ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಹೋಮ್ ಕ್ವಾರಂಟೈನ್‌ಗೆ ಹೋಗುವವರಿಗೆ ಕೈ ಮೇಲೆ ಅಳಿಸಿ ಹೋಗದ ಹಾಗೆ ಕಡ್ಡಾಯ ಸೀಲ್ ಹಾಕಬೇಕು. ಅವರ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ಹೋಮ್ ಕ್ವಾರಂಟೈನದಲ್ಲಿರುವಾಗ ಹೇಗೆ ನಡೆದುಕೊಳ್ಳಬೇಕು ಎನ್ನುವ ಮಾಹಿತಿಯ ಕರಪತ್ರವನ್ನು ನೀಡಬೇಕು. ಅವರ ಮನೆ ಎಲ್ಲಿದೆ ಎಂಬುದ್ದನ್ನು ಖಾತರಿ ಮಾಡಿಕೊಂಡು ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ ಎನ್ನುವ ಸ್ಟೀಕರ್‌ ಅಂಟಿಸಲು ಕ್ರಮ ವಹಿಸಬೇಕು. ಹೋಮ್ ಕ್ವಾರಂಟೈನ್‍ಗೆ ಹೋಗುವವರ ಮೇಲೆ ಒಂದು ವಾರ ಕಾಲ ನಿಗಾ ಇಡಬೇಕು. ಅವರು ಎಲ್ಲಿಯೂ ಅಡ್ಡಾಡದ ಹಾಗೆ ನೋಡಿಕೊಳ್ಳಬೇಕು. ಹೋಮ್ ಕ್ವಾರಂಟೈನ್ ಮಾಡಿದ ನಂತರ ಅವರ ವಿವರವನ್ನು ಹೋಮ್ ಕ್ವಾರಂಟೈನ್ ಆ್ಯಪ್‍ನಲ್ಲಿ ಅಪ್‌ಡೇಟ್ ಮಾಡಬೇಕು ಎಂದರು.

ಬಾಕಿ ಉಳಿದವರ ಸ್ಯಾಂಪಲ್‌ಗಳನ್ನು ಕೂಡ ಬೇಗ ಪಡೆದುಕೊಂಡು ಅವರನ್ನು ಕೂಡ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು ಎಂದು ಸಲಹೆ ಮಾಡಿದರು.

ನಮ್ಮ ಮನೆಯಲ್ಲಿ ಜಾಗ ಇಲ್ಲ. ನಮ್ಮ ಮನೆಯಲ್ಲಿ ರೋಗಿಗಳಿದ್ದಾರೆ. ಗರ್ಭಿಣಿಯರು ಇದ್ದಾರೆ. ಅವರಿಗೆ ತೊಂದರೆಯಾಗುವ ಕಾರಣ ನಾವು ಇನ್ನಷ್ಟು ದಿನ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿಯೇ ಇರುತ್ತೇವೆ. ನಮ್ಮ ಸ್ಯಾಂಪಲ್ ವರದಿ ಬಂದ ಬಳಿಕವೇ ನಾವು ಹೋಮ್ ಕ್ವಾರಂಟೈನ್‌ಗೆ ಹೋಗುತ್ತೇವೆ ಎಂದು ಯಾರಾದರು ತಿಳಿಸಿದ್ದಲ್ಲಿ ಅವರಿಗೆ ಇನ್ನಷ್ಟು ದಿನ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿಯೇ ಮುಂದುವರಿಯಲು ಅವಕಾಶ ನೀಡಬೇಕು ಎಂದರು.

ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಬಾಕಿ ಉಳಿದವರ ಗಂಟಲು ದ್ರವ ಮಾದರಿ ಸಂಗ್ರಹ ಕಾರ್ಯ ಕೂಡ ಬೇಗ ನಡೆಸಬೇಕು ಎಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಿಇಓ ಗ್ಯಾನೇಂದ್ರಕುಮಾರ ಗಂಗ್ವಾರ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಬೀದರ್‌ ಉಪ ವಿಭಾಗಾಧಿಕಾರಿ ಅಕ್ಷಯ್ ಶ್ರೀಧರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿ.ಜಿ.ರೆಡ್ಡಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು