ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ ಜಿಲ್ಲೆಯಲ್ಲಿ ಕುದುರೆ, ಕತ್ತೆಗಳ ಅಂತರರಾಜ್ಯ ಸಂಚಾರ ನಿಷೇಧ

ಗ್ಲ್ಯಾಂಡರ್ಸ್‌ ರೋಗದಿಂದ ಎರಡು ಕುದುರೆಗಳ ಸಾವು
Last Updated 19 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಬೀದರ್: ಮಾರಕ ಗ್ಲ್ಯಾಂಡರ್ಸ್‌ ರೋಗದಿಂದ ನಗರದ ಚಿದ್ರಿಯಲ್ಲಿ ಎರಡು ಕುದುರೆಗಳು ಮೃತಪಟ್ಟ ಪರಿಣಾಮ ಕುದುರೆ ಹಾಗೂ ಕತ್ತೆಗಳ ಅಂತರರಾಜ್ಯ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಅಷ್ಟೇ ಅಲ್ಲ, ಬೀದರ್‌ ಜಿಲ್ಲೆಯ ಗಡಿಯಲ್ಲಿ ಪೊಲೀಸ್‌ ಕಣ್ಗಾವಲು ಹಾಕಲಾಗಿದೆ. ನೆರೆಯ ತೆಲಂಗಾಣ ಹಾಗೂ ಮಹಾರಾಷ್ಟ್ರ ಸರ್ಕಾರಗಳಿಗೂ ಸಂದೇಶ ರವಾನೆ ಮಾಡಲಾಗಿದೆ.

ಗ್ಲ್ಯಾಂಡರ್ಸ್‌ ಹೊಸ ರೋಗ ಅಲ್ಲ. ಆದರೆ, ರೋಗ ಕಾಣಿಸಿಕೊಂಡ ಕುದುರೆ ನಿಧಾನವಾಗಿ ಅಸ್ವಸ್ಥಗೊಳ್ಳುತ್ತ ಆರೇಳು ತಿಂಗಳ ನಂತರ ಸಾವಿಗೀಡಾಗುತ್ತದೆ. ಉತ್ತರ ಭಾರತದ ರಾಜ್ಯಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಈ ರೋಗವು ತೆಲಂಗಾಣದ ಮೂಲಕ ರಾಜ್ಯಕ್ಕೆ ಮೊದಲ ಬಾರಿಗೆ ಪ್ರವೇಶ ಮಾಡಿದೆ.

‘1950ರಲ್ಲಿ ಮುಂಬೈನಲ್ಲಿ ಹಾಗೂ 1986ರಲ್ಲಿ ಹರಿಯಾಣದಲ್ಲಿ ಗ್ಲ್ಯಾಂಡರ್ಸ್‌ ರೋಗದಿಂದ ಅತಿ ಹೆಚ್ಚು ಕುದುರೆಗಳು ಮೃತಪಟ್ಟಿದ್ದವು. ದೇಶದ ಬೇರೆ ಬೇರೆ ಕಡೆ ಮೃತಪಟ್ಟಿರುವ ದಾಖಲೆ ಇದೆ. ಇದೀಗ ಬೀದರ್‌ನಲ್ಲಿ ಎರಡು ಕುದುರೆಗಳು ಗ್ಲ್ಯಾಂಡರ್ಸ್‌ ರೋಗದಿಂದ ಮೃತಪಟ್ಟಿರುವುದು ದೃಢಪಟ್ಟಿದೆ’ ಎಂದು ಪಶು ಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ಗೌತಮ ಅರಳಿ ತಿಳಿಸಿದರು.

ಹೈದರಾಬಾದ್‌ನ ಕುದುರೆ ಮಾಲೀಕರೊಬ್ಬರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಎರಡು ಕುದುರೆಗಳನ್ನು ಬೀದರ್‌ನ ಚಿದ್ರಿಯ ವ್ಯಕ್ತಿಗೆ ಕೊಟ್ಟಿದ್ದರು. ಅವರು ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಪಶು ಆಸ್ಪತ್ರೆಗೆ ಚಿಕಿತ್ಸೆಗೆ ತಂದಿದ್ದರು. ಪಶುವೈದ್ಯರು ಕುದುರೆಗಳ ರಕ್ತದ ಮಾದರಿಯನ್ನು ಪಡೆದು ಪರೀಕ್ಷೆಗಾಗಿ ಹರಿಯಾಣಾದ ರಾಷ್ಟ್ರೀಯ ಅಶ್ವ ಅನುಸಂಧಾನ ಕೇಂದ್ರಕ್ಕೆ ಕಳಿಸಿದ್ದರು. ಕುದುರೆಗಳಿಗೆ ಗ್ಲ್ಯಾಂಡರ್ಸ್‌ ಸೋಂಕು ಇರುವುದು ಪರೀಕ್ಷೆಯಿಂದ ಪತ್ತೆಯಾಗಿದೆ.

ಹರಿಯಾಣದ ವರದಿ ಬಂದ ತಕ್ಷಣ ಪಶು ವೈದ್ಯಕೀಯ ವಿಶ್ವವಿದ್ಯಾಲಯವು ತಕ್ಷಣ ಪಶು ಸಂಗೋಪನಾ ಇಲಾಖೆಗೆ ಮಾಹಿತಿ ನೀಡಿದೆ. ಜಿಲ್ಲಾಧಿಕಾರಿಯು ಪಶು ಸಂಗೋಪನೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಸರ್ಕಾರಕ್ಕೂ ವರದಿ ಕಳಿಸಿದ್ದಾರೆ.

ಪಶು ಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಧನಂಜಯ್ ಎಂ. ಅವರು ಅಕ್ಟೋಬರ್ 15ರಂದು ಬೀದರ್‌ನ ಚಿದ್ರಿಯ 5 ಕಿ.ಮೀ ವ್ಯಾಪ್ತಿ ಪ್ರದೇಶವನ್ನು ಗ್ಲ್ಯಾಂಡರ್ಸ್‌ ಪೀಡಿತ ವಲಯ ಎಂದು ಘೋಷಿಸಿದ್ದಾರೆ. ಹೀಗಾಗಿ 25 ಕಿ.ಮೀ ವ್ಯಾಪ್ತಿಯಲ್ಲಿರುವ 15 ಕುದುರೆಗಳ ರಕ್ತ ಮಾದರಿ ಸಂಗ್ರಹಿಸಲಾಗಿದೆ.

ಕುದುರೆಯೊಂದಿಗೆ ಒಡನಾಟ ಹೊಂದಿರುವವರಿಗೂ ಸೋಂಕು ತಗಲುವ ಸಾಧ್ಯತೆ ಇದೆ. ಹೀಗಾಗಿ ಕುದುರೆ ನೋಡಿಕೊಳ್ಳುತ್ತಿರುವವರ ರಕ್ತ ಮಾದರಿ ಪಡೆಯಲಾಗಿದೆ. ಕುದುರೆ ಮಾಲೀಕರ ಮನೆಗೆ ತೆರಳಿ ತಿಳಿವಳಿಕೆ ನೀಡುವ ಕಾರ್ಯ ಆರಂಭಿಸಲಾಗಿದೆ.

‘ನಗರ ಪ್ರದೇಶದಲ್ಲಿರುವ ಎಲ್ಲ ಕುದುರೆಗಳನ್ನು ನಗರದಿಂದ ಹೊರಗೆ ಒಯ್ಯುವಂತೆ ಮಾಲೀಕರಿಗೆ ಸೂಚನೆ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ಎಚ್‌.ಆರ್.ಮಹಾದೇವ ತಿಳಿಸಿದ್ದಾರೆ.

ಏನಿದು ಗ್ಲ್ಯಾಂಡರ್ಸ್‌?
ಬರ್ಕೊಲ್ಡಿಯಾ ಮ್ಯಾಲಿ ಎನ್ನುವ ಬ್ಯಾಕ್ಟೇರಿಯಾದ ಸೋಂಕಿನಿಂದ ಹರಡುವ ಗ್ಲ್ಯಾಂಡರ್ಸ್‌ ರೋಗವು ಕುದುರೆ ಅಥವಾ ಕತ್ತೆಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ.

ಗ್ಲ್ಯಾಂಡರ್ಸ್‌ ಮೊದಲ ಹಂತದಲ್ಲಿ ಕುದುರೆಯ ಮುಖ ಹಾಗೂ ಕಾಲುಗಳ ಮೇಲೆ ಹುಣ್ಣುಗಳಾಗುತ್ತವೆ.

ಎರಡನೇ ಹಂತದಲ್ಲಿ ಮೂಗು ಸೋರಿಕೆಯಿಂದ ಹಾಗೂ ಮೂರನೇ ಹಂತದಲ್ಲಿ ಶ್ವಾಸಕೋಶದ ಮೂಲಕ ದೇಹದಲ್ಲಿ ರೋಗ ಹರಡುತ್ತದೆ. ಇದರಿಂದ ಕುದುರೆ ಸಹಿಸಿಕೊಳ್ಳಲಾಗದಷ್ಟು ನೋವಿನಿಂದ ಬಳಲುತ್ತದೆ.

ಕುದುರೆಗಳು ಒಂದೇ ಬುಟ್ಟಿಯಲ್ಲಿ ಕಾಳು ಅಥವಾ ಹೊಟ್ಟು ತಿನ್ನುವುದರಿಂದ, ಕುದುರೆ ಮೂಗಿನಿಂದ ಬಿದ್ದ ದ್ರವ್ಯದಿಂದ ಅಥವಾ ಅವುಗಳ ಮೈಕೈ ಸವರುವುದರಿಂದ ಸೋಂಕು ಹರಡುತ್ತದೆ. ರೋಗ ಕಾಣಿಸಿಕೊಂಡ ಆರೇಳು ತಿಂಗಳಲ್ಲಿ ಕುದುರೆ ಸಾವಿಗೀಡಾಗುತ್ತದೆ. ಗ್ಲ್ಯಾಂಡರ್ಸ್‌ ರೋಗಕ್ಕೆ ಮದ್ದಿಲ್ಲ. ಹೀಗಾಗಿ ರೋಗಪೀಡಿತ ಕುದುರೆಗಳನ್ನು ಕೊಂದು ನೆಲದಲ್ಲಿ ಆಳವಾಗಿ ಅಗೆದು ಹೂಳಬೇಕು ಎಂದು ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಮೆಡಿಸಿನ್‌ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ರವೀಂದ್ರ ಭುಯಾರ್ ತಿಳಿಸಿದ್ದಾರೆ.

*
ಬೀದರ್‌ನ ಬರೀದ್‌ಶಾಹಿ ಉದ್ಯಾನ, ಮೆರವಣಿಗೆ ಹಾಗೂ ಟಾಂಗಾಗಳಿಗೆ ಕುದುರೆ ಬಳಕೆಯನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
-ಎಚ್‌.ಆರ್.ಮಹಾದೇವ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT