ಭಾನುವಾರ, ಮೇ 22, 2022
25 °C
ಬಿಎಸ್‌ಪಿ ರಾಜ್ಯ ಘಟಕದ ಕಾರ್ಯದರ್ಶಿ ಸೇರಿ ಹಲವರ ಬಂಧನ

ಹುಮನಾಬಾದ್‌ ತಹಶೀಲ್ದಾರ್‌ ಮೇಲೆ ಹಲ್ಲೆ, ಹಲವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಮನವಿ ಸ್ವೀಕರಿಸಲು ಬರಲಿಲ್ಲ ಎಂದು ಆಕ್ರೋಶಗೊಂಡ ಪ್ರತಿಭಟನಾನಿರತ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು, ಶುಕ್ರವಾರ ಹುಮನಾಬಾದ್ ತಹಶೀಲ್ದಾರ್‌ ಕಚೇರಿಗೆ ನುಗ್ಗಿ ಕುರ್ಚಿಗಳನ್ನು ಧ್ವಂಸಗೊಳಿಸಿದ್ದು, ತಹಶೀಲ್ದಾರ್ ಪ್ರದೀಪ್‌ ಹಿರೇಮಠ ಮೇಲೆ ಹಲ್ಲೆ ನಡೆಸಿದ್ದಾರೆ.

ಘಟನೆಗೆ ಸಂಬಂಧಿಸಿ ಬಿಎಸ್‌ಪಿ ರಾಜ್ಯ ಘಟಕದ ಕಾರ್ಯದರ್ಶಿ ಅಂಕುಶ್ ಗೋಖಲೆ ಹಾಗೂ ಅವರ ಬೆಂಬಲಿಗರನ್ನು ಹುಮನಾಬಾದ್‌ ಪೊಲೀಸರು ಬಂಧಿಸಿದ್ದಾರೆ.

ಡಾ.ಬಿ.ಆರ್.ಅಂಬೇಡ್ಕರ್‌ ಅವರಿಗೆ ಅವಮಾನ ಮಾಡಿರುವ ರಾಯಚೂರು ಜಿಲ್ಲಾ ನ್ಯಾಯಾಧೀಶರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ಬಿಎಸ್‌ಪಿ ಕಾರ್ಯಕರ್ತರು, ಮನವಿಪತ್ರ ಸ್ವೀಕರಿಸಲು ಸ್ಥಳಕ್ಕೆ ಬರುವಂತೆ ತಹಶೀಲ್ದಾರರಿಗೆ ಮನವಿ ಮಾಡಿದರು. 

‘ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಆಹಾರ ಪೂರೈಕೆ ಮಾಡುವವಿತರಕರೊಂದಿಗೆ ಸಭೆ ನಡೆಸುತ್ತಿದ್ದೆ.  ಅಂಕುಶ್‌ ಗೋಖಲೆ ಅವರು ಮನವಿಪತ್ರ ಸ್ವೀಕರಿಸುವಂತೆ ಬಂದಿದ್ದರು. ಸಭೆ ಮುಗಿದ ತಕ್ಷಣ ಮನವಿ ಸ್ವೀಕರಿಸುತ್ತೇನೆ.
ಐದು ನಿಮಿಷ ಕಾಯುವಂತೆ ಹೇಳಿದೆ.ಅವರು ಈಗಲೇ ತೆಗೆದುಕೊಳ್ಳುವಂತೆಒತ್ತಾಯಿಸಿದಾಗ ಗ್ರೇಡ್‌–2 ತಹಶೀಲ್ದಾರ್‌
ಬಳಿ ಕೊಡುವಂತೆ ಸೂಚಿಸಿದೆ. ಅಷ್ಟಕ್ಕೇ ಅವರು ಕಿರುಚಾಡುತ್ತ ನನ್ನತ್ತ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಾಲಿನಿಂದ ಗುಪ್ತಾಂಗಕ್ಕೆ ಒದ್ದಿದ್ದಾರೆ. ಅವರ ಹಿಂಬಾಲಕರು ಅಂಗಿ ಹಿಡಿದು ಎಳೆದಾಡಿದ್ದಾರೆ’ ಎಂದು ತಹಶೀಲ್ದಾರ್‌ ದೂರು ನೀಡಿದ್ದಾರೆ. ಹಲ್ಲೆಯ ವಿಡಿಯೊ ವೈರಲ್‌ ಆಗಿದೆ.

ಸಿಬ್ಬಂದಿ ಪ್ರತಿಭಟನೆ: ತಹಶೀಲ್ದಾರ್ ಪ್ರದೀಪ್‌ ಹಿರೇಮಠ ಅವರು ಹುಮನಾಬಾದ್ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದರು. ಹಲ್ಲೆ ಖಂಡಿಸಿ ತಹಶೀಲ್ದಾರ್‌ ಕಚೇರಿ ಸಿಬ್ಬಂದಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಕಿಶೋರಬಾಬು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಬಂಧನ: ಬಿಎಸ್‌ಪಿ ರಾಜ್ಯ ಘಟಕದ ಕಾರ್ಯದರ್ಶಿ ಅಂಕುಶ್ ಗೋಖಲೆ, ಮುಜಿದ್‌ ಪಟೇಲ್, ರಾಜಕುಮಾರ ಶಿಂಧೆ, ದೇವೇಂದ್ರ, ದತ್ತಾತ್ತೇಯ ಅವರನ್ನು ಹುಮನಾಬಾದ್‌ ಪೊಲೀಸರು ಬಂಧಿಸಿದ್ದಾರೆ. ಉಳಿದ ಆರೋಪಿಗಳ ಶೋಧ ನಡೆದಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು