ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಮನಾಬಾದ್ ವೀರಭದ್ರೇಶ್ವರ ಸ್ವಾಮಿ ಜಾತ್ರೆ: ಸರ್ವ ಧರ್ಮೀಯರ ಸಂಗಮ

ಗುಂಡು ಅತಿವಾಳ
Published 26 ಜನವರಿ 2024, 5:53 IST
Last Updated 26 ಜನವರಿ 2024, 5:53 IST
ಅಕ್ಷರ ಗಾತ್ರ

ಹುಮನಾಬಾದ್: ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನೇಕ ಧಾರ್ಮಿಕ ಕ್ಷೇತ್ರಗಳಿವೆ. ಅದರಲ್ಲಿ ಹುಮನಾಬಾದ್‌ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನ ಕೂಡ ಪ್ರಮುಖವಾದುದು.

ಇಷ್ಟೇ ಅಲ್ಲ, ಪಟ್ಟಣದಲ್ಲಿ ಪ್ರತಿ ವರ್ಷ ನಡೆಯುವ ಜಾತ್ರೆಗೆ ಹೆಚ್ಚಿನ ಮಹತ್ವ ಇದೆ. ಸರ್ವಧರ್ಮೀಯರ ಜಾತ್ರೆಯಾಗಿಯೂ ಪ್ರಸಿದ್ಧಿ ಪಡೆದಿದೆ. ಜಾತಿ, ಮತ, ಪಂಥ ಎಂಬ ಭೇದವಿಲ್ಲದೆ ಎಲ್ಲರೂ ಭಾಗವಹಿಸುತ್ತಾರೆ.

ಜಾತ್ರೆಯಲ್ಲಿ ಬೀದರ್, ಕಲಬುರಗಿ ಸೇರಿದಂತೆ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರದ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ. ವೀರಭದ್ರೇಶ್ವರನ ಸಾನ್ನಿಧ್ಯಕ್ಕೆ ಬಂದು ಪುನೀತರಾಗುತ್ತಾರೆ. 

ಮಕರ ಸಂಕ್ರಮಣದ ದಿನ ಶುರುವಾಗುವ ಈ ಜಾತ್ರೆಯಲ್ಲಿ ಪಲ್ಲಕ್ಕಿ ಉತ್ಸವ, ಅಗ್ನಿ ತುಳಿಯುವುದು ಹಾಗೂ ರಥೋತ್ಸವ ಪ್ರಮುಖ ಆಚರಣೆಗಳು. ಪ್ರತಿವರ್ಷ ಜನವರಿ 26ರಂದು ಜರುಗುವ ಅದ್ಧೂರಿ ರಥೋತ್ಸವಕ್ಕೆ ಜನಸಾಗರವೇ ಹರಿದು ಬರುತ್ತದೆ. ಭಕ್ತರು ಯಾವುದೇ ಮೂಲೆಯಲ್ಲಿದ್ದರೂ ಆ ದಿನ ಆರಾಧ್ಯದೈವನ ತೇರು ಕಣ್ತುಂಬಿಕೊಳ್ಳಲು ಬರುತ್ತಾರೆ. 

ಹಿನ್ನೆಲೆ:

ಜಯಸಿಂಹ ನಗರ ಎಂಬುದು ಹುಮನಾಬಾದ್‍ನ ಪುರಾತನ ಹೆಸರು. ಈ ಭಾಗದಲ್ಲಿ ಆಳ್ವಿಕೆ ನಡೆಸಿದ ರಾಜಾ ರಾಮಚಂದ್ರ ವೀರಭದ್ರೇಶ್ವರ ದೇಗುಲ ನಿರ್ಮಿಸಿದ್ದರು ಎಂದು ಹೇಳಲಾಗುತ್ತದೆ.  ವೀರಭದ್ರೇಶ್ವರ ದೇವಸ್ಥಾನ ನಿರ್ಮಿಸಿದ ನಂತರ ಗರ್ಭಗುಡಿಯಲ್ಲಿ ಮೂರ್ತಿ ಸ್ಥಾಪಿಸುವ ದಿನ ಸಮೀಪಿಸಿದಾಗ ರಾಜಾ ರಾಮಚಂದ್ರನ ಕನಸಿನಲ್ಲಿ ಸ್ವತಃ ವೀರಭದ್ರೇಶ್ವರ ದೇವರು ಬಂದು, ಗಡವಂತಿ ಗ್ರಾಮದ ದೇವಸ್ಥಾನ ದಲ್ಲಿರುವ ತನ್ನ ಮೂರ್ತಿಯನ್ನು ಪ್ರತಿಷ್ಠಾಪಿಸುವಂತೆ ಆಜ್ಞಾಪಿಸಿದನಂತೆ. ಕನಸಿನಲ್ಲಿ ಆದ ದಿವ್ಯದರ್ಶನದಿಂದ ಗಡವಂತಿ ಗ್ರಾಮಕ್ಕೆ ಹೋಗಿ ವೀರಭದ್ರೇ ಶ್ವರ ಮೂರ್ತಿಯನ್ನು ತಂದು ಹುಮನಾಬಾದ್ ದೇಗುಲ ದಲ್ಲಿ ವಿಧಿ–ವಿಧಾನ ಗಳಂತೆ ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪನೆ ನೆರವೇರಿಸಿದ ಎಂಬ ನಂಬಿಕೆ ಭಕ್ತರದು.

ಈ ದೇವಸ್ಥಾನ ವಾಸ್ತುಶಿಲ್ಪ, ಕಲೆಯ ಖನಿ. ಸೂಕ್ಷ್ಮ ಕುಸುರಿ ಕೆತ್ತನೆಯ ಅತ್ಯಾಕರ್ಷಕವಾದ ಸುಂದರ ಗೋಪುರ ಭಕ್ತರನ್ನು ತನ್ನೆಡೆಗೆ ಸೆಳೆಯುತ್ತದೆ. ದೇಗುಲದ ಗರ್ಭಗುಡಿಯಲ್ಲಿರುವ ಮೂರ್ತಿ ನೋಡಿದರೆ ಸಾಕ್ಷಾತ್ ವೀರಭದ್ರೇಶ್ವರನೇ ಕಣ್ಣೆದುರು ನಿಂತಂತಹ ಅನುಭೂತಿ. ಗರ್ಭಗುಡಿಯಲ್ಲಿರುವ ದೇವರ ಮಂಟಪ ಕತ್ತಲೆಯಲ್ಲಿದ್ದರೂ ಮೂರ್ತಿ ಸದಾ ಝಗಮಗಿಸುತ್ತಿದೆ. ಭಕ್ತರಿಗೆ ಕ್ಷಣಹೊತ್ತು ವಿಭಿನ್ನವಾದ ಅನುಭವ ಉಂಟು ಮಾಡುತ್ತದೆ. ಗರ್ಭಗುಡಿಯ ಮುಂಭಾಗದಲ್ಲಿ 8 ಕಲ್ಲಿನ ಕಂಬಗಳು, ಅದರ ಎದುರು 16 ಕಂಬಗಳು, ಅದರ ಮೇಲೆ 49 ಗಿಳಿಗಳು, ಮೂರು ಗೊಂಬೆ ಆಕಾರದ ಚಿತ್ರಗಳು, ಇದರ ಮುಂದೆ ಗಿಡಗಳು, ಕೆಳಭಾಗದಲ್ಲಿ ಕಲ್ಲಿನ ಗೋಲಾಕಾರದ ದೀಪಗಳಂತಿರುವ ಶಿಲ್ಪಗಳು ಕಣ್ಮನ ಸೆಳೆಯುತ್ತವೆ.

ಉತ್ತರದ ನಾಗರಶೈಲಿ ಹಾಗೂ ದಕ್ಷಿಣದ ದ್ರಾವಿಡ ಪದ್ಧತಿಯ ಸಂಗಮ ದಂತಿರುವ ದೇಗುಲದಲ್ಲಿ ಗರ್ಭ ಗೋಪುರ ಹಿಮಾಲಯದ ಕೇದಾರ, ಒಡಿಶಾದ ಭುವನೇಶ್ವರಿ ದೇವಾಲಯಗಳನ್ನು ನೆನಪಿಸಿದರೆ, ಮುಖ್ಯದ್ವಾರದ ಮೇಲ್ಭಾಗದ ವಿನ್ಯಾಸ ದಕ್ಷಿಣದ ಮಧುರೈ, ಕಾಂಚಿನಗರ ದೇಗುಲಗಳನ್ನು ನೆನಪಿಸುವಂತಿದೆ. ಪೂರ್ವದ್ವಾರದ ಮೇಲೆ ಆದಿಕೇಶವನ ಕೆಳಗೆ ದೇವರ ಮೂರ್ತಿ ಇದ್ದು, ನಾಲ್ಕು ದಿಕ್ಕಿನಲ್ಲಿ ನಂದಿ ವಿಗ್ರಹಗಳಿವೆ. ಮೊದಲ ಸಾಲಿನ ಮಧ್ಯದಲ್ಲಿ ಪಾಂಡುರಂಗ ವಿಠ್ಠಲ ಸೊಂಟದ ಮೇಲೆ ಕೈಯಿಟ್ಟು ಭಕ್ತರ ಇಷ್ಠಾರ್ಥಗಳನ್ನು ಪೂರೈಸಲು ನಿಂತಂತೆ ಭಾಸವಾಗುತ್ತದೆ. ಎರಡೂ ಕೊನೆಗಳಲ್ಲಿ ಗರುಡ ಹಾಗೂ ಹನುಮಂತ ದೇವರು ಕೈಜೋಡಿಸಿ ನಿಂತಿರುವುದು ಗಮನ ಸೆಳೆಯುತ್ತದೆ.

ಮಹಾದ್ವಾರದ ಎದುರು 16 ಕಂಬಗಳ ವಿಶಾಲ ಮಂಟಪ ಅಂದಿನ ಶ್ರಮಜೀವಿಗಳ ಕಲಾ ಕೌಶಲ ಬಿಂಬಿಸುತ್ತದೆ. ಸೂರ್ಯೋದಯದ ಮೊದಲ ಕಿರಣ ಮಹಾದ್ವಾರದಿಂದ ನಂದಿ ಕೊಂಬಿನ ಮೂಲಕ ಗರ್ಭಗುಡಿಯಲ್ಲಿರುವ ವೀರಭದ್ರೇಶ್ವರ ಬಲಭಾಗದ ಹೆಬ್ಬಟ್ಟಿನ ಮೇಲೆ ಬೀಳುವುದು ವಿಶೇಷ. ದೇವಸ್ಥಾನದ ನಿರ್ಮಾತೃಗಳ ಬುದ್ಧಿಕ್ಷಮತೆ, ನಿರ್ಮಾಣ ಶೈಲಿಗೆ ಹಿಡಿದ ಕೈಗನ್ನಡಿ.

ಗರ್ಭಗುಡಿಯ ಮುಂಭಾಗದಲ್ಲಿ ಹಾಗೂ ಎಡಭಾಗದಲ್ಲಿ ತಲಾ ನಾಲ್ಕು ಕಲ್ಲಿನ ಕಂಬಗಳಿವೆ. ಎಡಭಾಗಕ್ಕೆ ಭದ್ರಕಾಳಿ, ಬಲಗಡೆ ಸಣ್ಣ ನಂದಿ ಪ್ರತಿಮೆ, ನಂದಿ ಸುತ್ತಲೂ 16 ಸುಂದರ ಕುಸುರಿ ಕೆತ್ತನೆಯ ಕಂಬಗಳ ಮಂಟಪಗಳಿವೆ. ಇಂತಹ ವಿಶಿಷ್ಟ ದೇಗುಲದ ಗುಡಿಯೊಳಗೆ ಹೆಜ್ಜೆ ಇಡುತ್ತಿದ್ದಂತೆ ವ ದೇವರ ಮೂರ್ತಿ ಭಕ್ತಿ ಉಕ್ಕಿ ಹರಿಯುವಂತೆ ಮಾಡುತ್ತದೆ. ಸ್ಥಳೀಯರು ಪ್ರತಿದಿನ ದೇವರ ದರ್ಶನ ಮಾಡಿ ಪ್ರಸಾದದ ರೂಪದಲ್ಲಿ ನೀಡಲಾಗುವ ಹೂಗಳನ್ನು ತೆಗೆದುಕೊಂಡು ದೈನದಿಂದ ಚಟುವಟಿಕೆಗಳಲ್ಲಿ ತೊಡಗುತ್ತಾರೆ.

ಜಂಜಾಟದ ಬದುಕಿನಲ್ಲಿ ನೆಮ್ಮದಿ ಕಾಣುವ ಸದಾಶಯದೊಂದಿಗೆ ದೇಗುಲಕ್ಕೆ ಭೇಟಿ ನೀಡುವ ಭಕ್ತರು ದೇವರ ಎದುರಿನ ಮಂಟಪದಲ್ಲಿ ಕುಳಿತು ಧ್ಯಾನ ಮಾಡಿ ಸಂತೋಷದಿಂದ ಹಿಂತಿರುಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT