ಶನಿವಾರ, ಸೆಪ್ಟೆಂಬರ್ 18, 2021
30 °C
ವಿಶ್ವ ಸ್ತನ್ಯಪಾನ ಸಪ್ತಾಹ ಉದ್ಘಾಟನೆ ಕಾರ್ಯಕ್ರಮದಲ್ಲಿ ಡಾ. ಶರಣ ಬುಳ್ಳಾ ಹೇಳಿಕೆ

ಬೀದರ್: ತಾಯಿ ಹಾಲಿನಲ್ಲಿ ಇದೆ ರೋಗ ನಿರೋಧಕ ಶಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ತಾಯಿ ಎದೆಹಾಲು ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದು ಬ್ರಿಮ್ಸ್ ಆಸ್ಪತ್ರೆಯ ಮಕ್ಕಳ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಶರಣ ಬುಳ್ಳಾ ಹೇಳಿದರು.

ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ (ಬಿ) ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ವತಿಯಿಂದ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹ ಉದ್ಘಾಟನೆ ಹಾಗೂ ಕೋವಿಡ್ ಲಸಿಕೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಯಿ ಹಾಲು ಎಲ್ಲ ಪೋಷಕಾಂಶಗಳನ್ನು ಹೊಂದಿರುತ್ತದೆ. ಮಕ್ಕಳ ಆರೋಗ್ಯಪೂರ್ಣ ಬೆಳವಣಿಗೆಗೆ ನೆರವಾಗುತ್ತದೆ ಎಂದು ತಿಳಿಸಿದರು.

ಪೌಡರ್ ಹಾಲಿನಿಂದ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ. ಶ್ವಾಸಕೋಶ, ಹೊಟ್ಟೆಗೆ ಸಂಬಂಧಿಸಿದ ಅನೇಕ ರೋಗಗಳಿಗೂ ಕಾರಣವಾಗುತ್ತದೆ. ಎದೆಹಾಲು ಕುಡಿಸುವುದು ಮಗುವಿಗೆ ಅಷ್ಟೇ ಅಲ್ಲ, ತಾಯಿಯ ಆರೋಗ್ಯಕ್ಕೂ ಒಳ್ಳೆಯದು ಎಂದು ಹೇಳಿದರು.

ಜನಿಸಿದ ತಕ್ಷಣ ಮಗುವಿಗೆ ಎದೆಹಾಲು ಕುಡಿಸಬೇಕು. ಆರು ತಿಂಗಳವರೆಗೆ ನಿತ್ಯ 6 ರಿಂದ 8 ಬಾರಿ ಸ್ತನ್ಯಪಾನ ಮಾಡಿಸಬೇಕು ಎಂದು ಸಲಹೆ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಅಧ್ಯಕ್ಷ ಡಾ. ನಿತೇಶಕುಮಾರ ಬಿರಾದಾರ ಮಾತನಾಡಿ, ಕೋವಿಡ್ ಸೋಂಕಿನ ನಿರ್ಮೂಲನೆಗೆ ಪ್ರತಿಯೊಬ್ಬರೂ ಲಸಿಕೆ ಪಡೆಯಬೇಕು ಎಂದು ಹೇಳಿದರು.

ಕೋವಿಡ್ ಲಸಿಕೆ ಬಗ್ಗೆ ಗಾಳಿ ಸುದ್ದಿಗಳನ್ನು ನಂಬಬಾರದು. ಲಸಿಕೆ ಸಂಪೂರ್ಣ ಸುರಕ್ಷಿತವಾಗಿದೆ. ಹೀಗಾಗಿ ಅರ್ಹರು ಲಸಿಕೆ ಪಡೆಯಬೇಕು. ಸಂಬಂಧಿಕರು, ಸ್ನೇಹಿತರು, ನೆರೆ ಹೊರೆಯವರಿಗೆ ಲಸಿಕೆ ತೆಗೆದುಕೊಳ್ಳಲು ಪ್ರೇರೇಪಿಸಬೇಕು ಎಂದು ತಿಳಿಸಿದರು.

ವೈದ್ಯರು ಸೇರಿದಂತೆ ಕೋವಿಡ್ ವಾರಿಯರ್‍ಗಳ ನಿರಂತರ ಶ್ರಮದಿಂದಾಗಿ ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಬಂದಿದೆ. ಸೋಂಕನ್ನು ಸಂಪೂರ್ಣ ತಡೆಯಲು ಚಾಚೂತಪ್ಪದೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದರು.

ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಕಲ್ಲಪ್ಪ ಮಜಗೆ, ಮಕ್ಕಳ ತಜ್ಞೆ ಡಾ. ಸಂಧ್ಯಾ ರೆಡ್ಡಿ ಉಪಸ್ಥಿತರಿದ್ದರು. ತಾಯಂದಿರು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

ಎದೆಹಾಲು ಮಹತ್ವ: ತಾಯಂದಿರಿಗೆ ಅರಿವು ಕಾರ್ಯಕ್ರಮ
ಬೀದರ್‌:
ಭಾರತೀಯ ಕುಟುಂಬ ಯೋಜನಾ ಸಂಸ್ಥೆಯ ಬೀದರ್‌ ಶಾಖೆಯಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ತಾಯಿಯ ಎದೆಹಾಲಿನ ಮಹತ್ವದ ಕುರಿತು ಅರಿವು ಕಾರ್ಯಕ್ರಮ ನಡೆಯಿತು.

ಸಂಸ್ಥೆಯ ಶಾಖಾ ವ್ಯವಸ್ಥಾಪಕ ಶ್ರೀನಿವಾಸ ಬಿರಾದಾರ ಮಾತನಾಡಿ, ‘ಮಹಿಳೆಯರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡಬೇಕು. ಮಕ್ಕಳ ಆರೈಕೆಯನ್ನು ಉತ್ತಮ ರೀತಿಯಲ್ಲಿ ಮಾಡಬೇಕು’ ಎಂದರು.

‘ಕುಟುಂಬ ಯೋಜನಾ ವಿಧಾನಗಳನ್ನು ಅಳವಡಿಸಿಕೊಳ್ಳುವುದರಿಂದ ಮಕ್ಕಳ ನಡುವೆ ಅಂತರವಿಡಲು ಸಹಾಯಕವಾಗಲಿದೆ. ಇದರಿಂದ ತಾಯಿ ಹಾಗೂ ಮಗು ಇಬ್ಬರು ಆರೋಗ್ಯದಿಂದ ಇರಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

ವೈಧ್ಯಾಧಿಕಾರಿ ಡಾ.ರಾಜಶೇಖರ ಲಕ್ಕಶೆಟ್ಟಿ ಮಾತನಾಡಿ, ‘ಇಂದಿನ ಮಹಿಳೆಯರು ನಾನಾ ಕಾರಣಗಳಿಂದಾಗಿ ಮಕ್ಕಳಿಗೆ ಸರಿಯಾದ ಕ್ರಮದಲ್ಲಿ ಎದೆ ಹಾಲು ಉಣಿಸದ ಕಾರಣ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಿದೆ’ ಎಂದು ಹೇಳಿದರು.

‘ಮಗು ಜನಿಸಿದ ಅರ್ಧ ಗಂಟೆಯ ಒಳಗೆ ಎದೆಹಾಲು ಉಣಿಸುವುದರಿಂದ ಇನ್ನೂ ಹೆಚ್ಚಿನ ರೋಗ ನಿರೋಧಕ ಶಕ್ತಿ ಪಡೆಯಲು ಸಾಧ್ಯ. ತಾಯಂದಿರು ತಮ್ಮ ಮಕ್ಕಳಿಗೆ 2 ವರ್ಷಗಳವರೆಗೆ ಎದೆಹಾಲು ಉಣಿಸುವುದು ಒಳ್ಳೆಯದು’ ಎಂದು ಸಲಹೆ ನೀಡಿದರು.

ವೈದ್ಯರಾದ ಡಾ.ಚಿನ್ನಮ್ಮ ಅವರು ಮಹಿಳೆಯರ, ಮಕ್ಕಳ ಆರೋಗ್ಯ ಹಾಗೂ ಪೌಷ್ಟಿಕಾಂಶ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ 40 ತಾಯಂದಿರರು, ಆಶಾ ಕಾರ್ಯಕರ್ತೆಯರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು