ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ನೋಟು ಚಲಾವಣೆ: ಏಳು ಜನರಿಗೆ ಶಿಕ್ಷೆ

Last Updated 23 ಜನವರಿ 2019, 15:27 IST
ಅಕ್ಷರ ಗಾತ್ರ

ಬೀದರ್: ನಕಲಿ ನೋಟುಗಳನ್ನು ಚಲಾವಣೆ ಮಾಡಿ ದೇಶದ ಅರ್ಥವ್ಯವಸ್ಥೆಯನ್ನು ಬುಡಮೇಲು ಮಾಡಲು ಯತ್ನಿಸಿದ ಹಾಗೂ ದೇಶದ್ರೋಹದ ಆರೋಪದ ಮೇಲೆ ಏಳು ಆರೋಪಿಗಳಿಗೆ ಶಿಕ್ಷೆ ವಿಧಿಸಿ ಇಲ್ಲಿಯ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಧೀಶ ಎಂ.ಚಂದ್ರಶೇಖರ ರೆಡ್ಡಿ ತೀರ್ಪು ನೀಡಿದ್ದಾರೆ.

ನಕಲಿ ನೋಟು ಚಲಾವಣೆಯ ಮುಖ್ಯ ಆರೋಪಿಗಳಾದ ಪಶ್ಚಿಮ ಬಂಗಾಳ ಮೂಲದ ಜುಗುನು ಮೊಲ್ದಾರ್‌ ಹಾಗೂ ಸರ್ದುಲಾ ಮೊಲ್ದಾರ್‌ಗೆ ಆರು ವರ್ಷ ಶಿಕ್ಷೆ ಹಾಗೂ ತಲಾ ₹ 10 ಸಾವಿರ ದಂಡ ವಿಧಿಸಿದ್ದಾರೆ.

ಭಾಲ್ಕಿ ತಾಲ್ಲೂಕಿನ ದಾಡಗಿಯ ಕಾವಲುಗಾರ ಯುವರಾಜ್ ಕಾಂಬಳೆ, ಹರನಾಳ ಗ್ರಾಮ ಪಂಚಾಯಿತಿ ಸದಸ್ಯ ಪ್ರವೀಣ ಕರುಣೆ,
ವಾಹನ ಚಾಲಕ ಗಣೇಶ ಅಂಬಿಗಾರ, ಕುರಬಖೇಳಗಿಯ ರಾಜಕುಮಾರ ಕಾಶೆಪ್ಪ ಧನ್ನೂರೆ ಹಾಗೂ ಭಾಲ್ಕಿಯ ರಾಜಕುಮಾರ ಮೋರೆಗೆಅವರಿಗೆ ಮೂರು ವರ್ಷ ಶಿಕ್ಷೆ ಹಾಗೂ ತಲಾ₹ 10 ಸಾವಿರ ದಂಡ ವಿಧಿಸಿದ್ದಾರೆ.

ಜುಗುನು ಮೊಲ್ದಾರ್‌ ಹಾಗೂ ಸರ್ದುಲಾ ಮೊಲ್ದಾರ್ ಜಿಲ್ಲೆಯಲ್ಲಿ ಖೋಟಾ ನೋಟುಗಳ ಚಲಾವಣೆ ಮಾಡಲು ಮುಂಬೈ ಮೂಲಕ ಬಂದು ಭಾಲ್ಕಿಯ ಅಂಬಿಕಾ ಲಾಡ್ಜ್‌ನಲ್ಲಿ ನೆಲೆಸಿದ್ದರು. 2013ರ ಅಕ್ಟೋಬರ್ 12 ರಂದು ಭಾಲ್ಕಿ ತಾಲ್ಲೂಕಿನ ಆರು ಯುವಕರಿಗೆ ನಕಲಿ ನೋಟು ಕೊಟ್ಟಿದ್ದರು.

ಖಚಿತ ಮಾಹಿತಿ ಮೇರೆಗೆ ಭಾಲ್ಕಿ ಪೊಲೀಸರು ಲಾಡ್ಜ್‌ ಮೇಲೆ ದಾಳಿ ನಡೆಸಿದಾಗ ₹ 40 ಸಾವಿರ ಮೌಲ್ಯದ ನಕಲಿ ನೋಟು, ₹ 60 ಸಾವಿರ ಅಸಲಿ ನೋಟು ಹಾಗೂ ಒಂದು ಮೊಬೈಲ್‌ ಪತ್ತೆಯಾಗಿತ್ತು. ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿ ರಾಜಕುಮಾರ ಮೋರೆ ಹಾಗೂ ಪ್ರವೀಣ ಕರುಣೆ ಬಳಿ ಒಂದು ಲಕ್ಷ ಮೌಲ್ಯದ ಖೋಟಾ ನೋಟು, ರಾಜಕುಮಾರ ಧನ್ನೂರೆಯಿಂದ ₹10 ಸಾವಿರ, ಯುವರಾಜ್‌ನಿಂದ ₹50 ಸಾವಿರ, ಗಣೇಶನಿಂದ ₹ 15 ಸಾವಿರ ಹಾಗೂ ಸಂತೋಷ ಬಳಿಯಿಂದ ₹26 ಸಾವಿರ ಮೌಲ್ಯದ ನಕಲಿ ನೋಟು ವಶಪಡಿಸಿಕೊಂಡಿದ್ದರು.

ಭಾಲ್ಕಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಹೆಚ್ಚುವರಿ ಅಭಿಯೋಜಕ ಭೀಮಾಶಂಕರ ಅಂಬಲಗಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT