ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅನುಭವ ಮಂಟಪ, ಜಿಲ್ಲಾ ಭವನ 2025ಕ್ಕೆ ಉದ್ಘಾಟನೆ: ಈಶ್ವರ ಬಿ. ಖಂಡ್ರೆ ಘೋಷಣೆ

ಸ್ವಾತಂತ್ರ್ಯ ದಿನಾಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಘೋಷಣೆ
Published : 15 ಆಗಸ್ಟ್ 2024, 13:59 IST
Last Updated : 15 ಆಗಸ್ಟ್ 2024, 13:59 IST
ಫಾಲೋ ಮಾಡಿ
Comments

ಬೀದರ್‌: ‘ಬೀದರ್‌ ಜಿಲ್ಲಾಡಳಿತ ಭವನ ಹಾಗೂ ಬಸವಕಲ್ಯಾಣದ ಅನುಭವ ಮಂಟಪ 2025ರ ಡಿಸೆಂಬರ್‌ನೊಳಗೆ ಉದ್ಘಾಟಿಸಲಾಗುವುದು’ ಎಂದು ಅರಣ್ಯ, ಪರಿಸರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.

ಜಿಲ್ಲಾಡಳಿತದಿಂದ ನಗರದ ಜಿಲ್ಲಾ ನೆಹರೂ ಕ್ರೀಡಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ಲೋಕೋಪಯೋಗಿ ಇಲಾಖೆಯು ಕಟ್ಟಡದ ವಿನ್ಯಾಸ ಸಿದ್ಧಪಡಿಸಿದ್ದು, ₹75ಕೋಟಿ ಖರ್ಚು ಬರಲಿದೆ. ಎರಡು ವಾರಗಳಲ್ಲಿ ಈ ವಿಷಯ ಸಚಿವ ಸಂಪುಟದ ಮುಂದೆ ಬರಲಿದೆ. ಅಲ್ಲಿ ಚರ್ಚಿಸಿ, ಆಡಳಿತಾತ್ಮಕ ಒಪ್ಪಿಗೆ ಪಡೆದು, ಟೆಂಡರ್‌ ಕರೆದು ಎರಡ್ಮೂರು ತಿಂಗಳೊಳಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ವಿವರಿಸಿದರು.

ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ₹270 ಕೋಟಿ ಈಗಾಗಲೇ ಖರ್ಚಾಗಿದೆ. ನಮ್ಮ ಸರ್ಕಾರ ಬಂದ ನಂತರ ₹100 ಕೋಟಿ ಅನುದಾನ ಕೊಡಲಾಗಿದೆ. ಈಗಾಗಲೇ ₹70 ಕೋಟಿ ಖರ್ಚಾಗಿದೆ. ಇನ್ನೂ ₹30 ಕೋಟಿ ಜಿಲ್ಲಾಧಿಕಾರಿ ಖಾತೆಯಲ್ಲಿದೆ. ಅಗತ್ಯಕ್ಕೆ ತಕ್ಕಂತೆ ಅನುದಾನ ನೀಡಲಾಗುವುದು. 2025ರ ಡಿಸೆಂಬರ್‌ನೊಳಗೆ ಅನುಭವ ಮಂಟಪ ಹಾಗೂ ಜಿಲ್ಲಾಡಳಿತ ಭವನ ಉದ್ಘಾಟಿಸಲಾಗುವುದು ಎಂದು ತಿಳಿಸಿದರು.

ಬೀದರ್‌ನಲ್ಲಿ ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ₹16 ಕೋಟಿ ಮಂಜೂರು ಮಾಡಲಾಗಿದೆ. ಮೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.

ಬೀದರ್‌ ಜಿಲ್ಲೆಯಲ್ಲಿ ಈ ವರ್ಷ ಒಟ್ಟು 20 ಲಕ್ಷ ಸಸಿಗಳನ್ನು ನೆಡುವ ಗುರಿ ಹಾಕಿಕೊಳ್ಳಲಾಗಿದೆ. ಈಗಾಗಲೇ ಅರಣ್ಯ ಇಲಾಖೆಯವರು 15 ಲಕ್ಷ ಸಸಿಗಳನ್ನು ನೆಟ್ಟಿದ್ದಾರೆ. ಈ ತಿಂಗಳೊಳಗೆ ಇನ್ನುಳಿದ 5 ಲಕ್ಷ ಸಸಿಗಳನ್ನು ನೆಡುವರು. ಮುಂದಿನ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ 1 ಕೋಟಿ ಸಸಿ ಗುರಿ ಇದೆ. ಜಿಲ್ಲೆಯಲ್ಲಿ ಹೋದ ವರ್ಷ 5 ಲಕ್ಷ ಸಸಿಗಳನ್ನು ನೆಡಲಾಗಿತ್ತು. ಇದರಲ್ಲಿ ಶೇ 30ರಷ್ಟು ಸಸಿಗಳು ಸತ್ತು ಹೋಗಿದ್ದು, ಪುನಃ ನೆಡಲು ಸೂಚಿಸಲಾಗಿದೆ. ಈ ಸಲ ಎತ್ತರದ ಸಸಿಗಳನ್ನು ನೆಡಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಒಟ್ಟು ₹1 ಸಾವಿರ ಕೋಟಿ ಮೊತ್ತದ ಯೋಜನೆಗಳು ನಡೆಯುತ್ತಿವೆ. ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸಲು ಕಾರ್ಯಕ್ರಮ ರೂಪಿಸಲಾಗಿದೆ. ಜಿಲ್ಲೆಯಲ್ಲಿ ಅರ್ಧಕ್ಕೆ ನಿಂತಿರುವ ಹಾಗೂ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಸಂಬಂಧ ಮುಖ್ಯಮಂತ್ರಿ ಜೊತೆ ಚರ್ಚಿಸಿದ್ದೇನೆ. ₹250 ಕೊಟಿಯಲ್ಲಿ ಜಿಲ್ಲೆಯ ಬ್ರಿಜ್‌ ಕಂ ಬ್ಯಾರೇಜ್‌, ಕೆರೆ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದ್ದು, ಅನುಮೋದನೆ ಹಂತದಲ್ಲಿವೆ ಎಂದು ವಿವರಿಸಿದರು.

ಪೌರಾಡಳಿತ ಸಚಿವ ರಹೀಂ ಖಾನ್, ಸಂಸದ ಸಾಗರ್‌ ಖಂಡ್ರೆ, ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ ಪಾಟೀಲ, ಎಂ.ಜಿ. ಮುಳೆ, ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ನಗರಸಭೆ ಅಧ್ಯಕ್ಷ ಮೊಹಮ್ಮದ್‌ ಗೌಸ್‌, ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ,‌ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಡಿಸಿಎಫ್ ವಾನತಿ ಎಂ.ಎಂ. ಹಾಜರಿದ್ದರು.

‘ಹೆದ್ದಾರಿ ಬಗ್ಗೆ ತನಿಖೆ ಬಳಿಕ ಕ್ರಮ’

‘ಬೀದರ್‌–ಕಮಲನಗರ ಹೆದ್ದಾರಿ ಗುಣಮಟ್ಟದ ಬಗ್ಗೆ ತನಿಖೆಗೆ ಈಗಾಗಲೇ ಪತ್ರ ಬರೆದಿದ್ದೇನೆ. ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳ ತಂಡ ರಚಿಸಿ ತನಿಖೆ ನಡೆಸಿ ವರದಿ ತರಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಸಚಿವ ಈಶ್ವರ ಬಿ. ಖಂಡ್ರೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಹೆದ್ದಾರಿ ನಿರ್ಮಾಣದಲ್ಲಿ ಏನಾದರೂ ನ್ಯೂನತೆಗಳಿರುವುದು ತನಿಖೆಯಿಂದ ಗೊತ್ತಾದರೆ ಅದನ್ನು ಸರಿಪಡಿಸಲಾಗುವುದು. ಈ ಹಿಂದೆ ನಾನು ಶಾಸಕನಿದ್ದಾಗ ಹೆದ್ದಾರಿ ಮೇಲ್ದರ್ಜೆಗೇರಿಸಲಾಗಿತ್ತು. ಆಗಲೂ ಅದರ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಹಲವಾರು ಸಲ ಪತ್ರ ಬರೆದಿದ್ದೆ ಎಂದು ನೆನಪಿಸಿದರು.

‘ವಿಮಾನಯಾನಕ್ಕೆ ಎರಡು ತಿಂಗಳಲ್ಲಿ ಟೆಂಡರ್‌’

‘ಬೀದರ್‌ನಿಂದ ನಾಗರಿಕ ವಿಮಾನಯಾನ ಸೇವೆ ಪುನರಾರಂಭಿಸುವ ಸಂಬಂಧ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಬೃಹತ್‌ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಸಂಸದ ಸಾಗರ್‌ ಖಂಡ್ರೆ ಕೂಡ ನವದೆಹಲಿಯಲ್ಲಿ ನಾಗರಿಕ ವಿಮಾನಯಾನ ಸಚಿವರನ್ನು ಭೇಟಿ ಮಾಡಿ ವಸ್ತುಸ್ಥಿತಿ ವಿವರಿಸಿದ್ದಾರೆ. ಉಡಾನ್‌ ಯೋಜನೆಯಡಿ ಎರಡು ತಿಂಗಳಲ್ಲಿ ಟೆಂಡರ್‌ ಕರೆದು ವಿಮಾನಯಾನಕ್ಕೆ ಚಾಲನೆ ನೀಡಲಾಗುವುದು’ ಎಂದು ಸಚಿವ ಈಶ್ವರ ಬಿ. ಖಂಡ್ರೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಶೇ 80ರಷ್ಟು ಹಣ ಕೇಂದ್ರ ಸರ್ಕಾರ ಕೊಡುತ್ತದೆ. ಮಿಕ್ಕುಳಿದ ಶೇ 20ರಷ್ಟು ಹಣ ಭದ್ರತೆ ಸೇರಿದಂತೆ ಅಗತ್ಯ ಸೌಲಭ್ಯ ರಾಜ್ಯ ಸರ್ಕಾರ ಕಲ್ಪಿಸಿಕೊಡುತ್ತದೆ. ಒಂದುವೇಳೆ ಕೇಂದ್ರ ಸರ್ಕಾರ ಹಣ ಕೊಡದಿದ್ದರೆ ರಾಜ್ಯ ಸರ್ಕಾರದಿಂದಲೇ ನಿರ್ವಹಣೆ ಮಾಡಲಾಗುವುದು. ‘ಸ್ಟಾರ್‌ ಏರ್‌’ ‘ಇಂಡಿಗೋ’ ವಿಮಾನಯಾನ ಕಂಪನಿಗಳ ಜೊತೆ ಮಾತನಾಡಿ ಟೆಂಡರ್‌ ಕರೆಯಲು ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ’ ಎಂದು ತಿಳಿಸಿದರು.

‘ರಾಷ್ಟ್ರಭಕ್ತಿ ಗುತ್ತಿಗೆ ಪಡೆದವರಂತೆ ಚೀರಾಟ’

‘ಕೆಲವರು ನಾವೇ ರಾಷ್ಟ್ರಭಕ್ತಿ ಗುತ್ತಿಗೆ ಪಡೆದಿದ್ದೇವೆ ಎಂಬಂತೆ ಚೀರಾಡುತ್ತಾರೆ. ಆದರೆ ವಾಸ್ತವ ಹಾಗಲ್ಲ. ಪ್ರತಿಯೊಬ್ಬರಲ್ಲೂ ರಾಷ್ಟ್ರದ ಬಗ್ಗೆ ಭಕ್ತಿ ಗೌರವ ಇರುತ್ತದೆ. ಅನೇಕರ ತ್ಯಾಗ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ’ ಎಂದು ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಸಂಘಟನೆಗಳು ಸುಳ್ಳು ಬಿತ್ತುವ ಕೆಲಸ ಮಾಡುತ್ತಿವೆ. ಈ ದೇಶದಲ್ಲಿ ಎಲ್ಲರೂ ಸಾಮರಸ್ಯದಿಂದ ಬದುಕಬೇಕು. ಬೀದರ್‌ ಜಿಲ್ಲೆ ಸರ್ವಜನಾಂಗದ ಶಾಂತಿಯ ತೋಟವಾಗಿದೆ ಎಂದು ಹೇಳಿದರು.

ಆಕರ್ಷಕ ಪಥ ಸಂಚಲನ

ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಅಂಗವಾಗಿ ನೆಹರೂ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಪ್ರಧಾನ ಕಾರ್ಯಕ್ರಮದಲ್ಲಿ ಪೊಲೀಸ್‌ ಅರಣ್ಯ ಇಲಾಖೆ ಸೇರಿದಂತೆ ವಿವಿಧ ತುಕಡಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಕಾರ್ಯಕ್ರಮದ ಕೊನೆಯಲ್ಲಿ ವಿವಿಧ ಶಾಲಾ ಮಕ್ಕಳು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು. ದೇಶಭಕ್ತಿ ಗೀತೆಗಳಿಗೆ ಮಕ್ಕಳು ಹೆಜ್ಜೆ ಹಾಕಿ ಮನಸೂರೆಗೊಳಿಸಿದರು.

‘ಯಾರ ಮಂತ್ರಿ ಸ್ಥಾನವೂ ಹೋಗೊಲ್ಲ’

‘ಯಾರ ಮಂತ್ರಿ ಸ್ಥಾನವೂ ಹೋಗೊಲ್ಲ. ಪೌರಾಡಳಿತ ಸಚಿವ ರಹೀಂ ಖಾನ್‌ ಅವರು ಬೀದರ್‌ ನಗರಕ್ಕೆ ₹300 ಕೋಟಿ ಅನುದಾನ ಮಂಜೂರು ಮಾಡಿಸಿದ್ದಾರೆ. ಅವರನ್ನು ಮಂತ್ರಿ ಸ್ಥಾನದಿಂದ ಕೈಬಿಡುತ್ತಾರೆ ಎನ್ನುವುದು ಸುಳ್ಳು. ರಹೀಂ ಖಾನ್‌ ಅವರು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಮಧ್ಯ ಪ್ರವೇಶಿಸಿ ಮಾತನಾಡಿದ ಸಚಿವ ರಹೀಂ ಖಾನ್‌ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಇಬ್ಬರಷ್ಟೇ ಸಚಿವರಿದ್ದೇವೆ ಎಂದು ಹೇಳಿದರು.

‘ಗ್ಯಾರಂಟಿ ಯೋಜನೆ ನಿಲ್ಲಲ್ಲ’

‘ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಎಲ್ಲ ಐದೂ ಗ್ಯಾರಂಟಿಗಳು ಯಥಾಪ್ರಕಾರ ಮುಂದುವರಿಯಲಿವೆ. ಸಚಿವ ಸಂಪುಟದ ಕೆಲ ಸಹದ್ಯೋಗಿಗಳು ಅವರ ವೈಯಕ್ತಿಕ ಸಲಹೆ ಕೊಟ್ಟಿದ್ದಾರೆ. ಅದನ್ನು ಸಚಿವ ಸಂಪುಟದಲ್ಲಿ ಚರ್ಚಿಸುತ್ತೇವೆ’ ಎಂದು ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು. ಆರ್ಥಿಕವಾಗಿ ಸದೃಢರಾಗಿದ್ದೇವೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲು ₹2 ಸಾವಿರ ಕೋಟಿ ಕೊಡಲಾಗುತ್ತಿದೆ. ಹಣವಿಲ್ಲದಿದ್ದರೆ ಇದು ಹೇಗೆ ಸಾಧ್ಯವಾಗುತ್ತಿತ್ತು ಎಂದು ಮಾಧ್ಯಮದವರಿಗೆ ಮರು ಪ್ರಶ್ನೆ ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT