ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಟಕಚಿಂಚೋಳಿ: ಮೂಲಸೌಕರ್ಯ ವಂಚಿತ ಉಚ್ಚಾ ಗ್ರಾಮ

ಸಮರ್ಪಕ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲದೇ ಗ್ರಾಮಸ್ಥರ ಪರದಾಟ
Last Updated 27 ಜುಲೈ 2021, 4:05 IST
ಅಕ್ಷರ ಗಾತ್ರ

ಖಟಕಚಿಂಚೋಳಿ: ಹೋಬಳಿಯ ಉಚ್ಚಾ ಗ್ರಾಮದ ಮುಸ್ಲಿಮರ ಓಣಿಯಲ್ಲಿ ಸೂಕ್ತವಾದ ರಸ್ತೆ, ಚರಂಡಿ ಸೇರಿದಂತೆ ಮೂಲ ಸೌಕರ್ಯಗಳಿಲ್ಲದೆ ಜನರು ಪರದಾಡುವಂತಾಗಿದೆ.

ಸಮೀಪದ ಮೊರಂಬಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಉಚ್ಚಾ ಗ್ರಾಮವು ಈಗಾಗಲೇ ನೂರಕ್ಕೆ ನೂರರಷ್ಟು ಕೋವಿಡ್ ಲಸಿಕೆ ಪಡೆದ ಗ್ರಾಮವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ, ಸೂಕ್ತವಾದ ಚರಂಡಿ ವ್ಯವಸ್ಥೆ ಇಲ್ಲದೇ ಎಲ್ಲೆಡೆ ಗಬ್ಬು ನಾರುತ್ತಿದೆ.

ಉಚ್ಚಾ ಗ್ರಾಮವು ಸುಮಾರು 4 ಸಾವಿರ ಜನಸಂಖ್ಯೆಯನ್ನು ಹೊಂದಿದೆ. 5 ಜನ ಪಂಚಾಯಿತಿ ಸದಸ್ಯರು ಇದ್ದಾರೆ. ಆದರೆ ಗ್ರಾಮದಲ್ಲಿ ರಸ್ತೆ, ಚರಂಡಿ ಇಲ್ಲದಿರುವುದರಿಂದ ಜನರು ಆತಂಕದಲ್ಲಿ ಜೀವನ ಸಾಗಿಸುತ್ತಿದ್ದಾರೆ.

‘ಪ್ರತಿದಿನ ಗಲೀಜು ರಸ್ತೆ ಮೇಲೆಯೇ ನೂರಾರು ಜನ ಓಡಾಡುತ್ತಾರೆ. ರಸ್ತೆಯಲ್ಲಿ ಕಲುಷಿತ ನೀರು ಸಂಗ್ರಹವಾಗುತ್ತಿರುವುದಿಂದ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ. ಅಲ್ಲದೇ ಇದರಿಂದಾಗಿ ಸ್ಥಳೀಯರಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಪಂಚಾಯಿತಿ ಅಧಿಕಾರಿಗಳು ಚರಂಡಿ ಸ್ವಚ್ಛತೆ ಕಾರ್ಯ ಮಾಡಿಲ್ಲ. ಔಷಧ ಸಿಂಪಡಿಸಿಲ್ಲ. ಚರಂಡಿ ಕೊಳಚೆ ನೀರಿನಿಂದಾಗಿ ಸೊಳ್ಳೆಗಳ ಕಾಟ ವಿಪರೀತವಾಗಿದೆ’ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ತೆರೆದ ಚರಂಡಿಗಳು ದುರ್ವಾಸನೆ ಬೀರುತ್ತಿದ್ದು, ನಿವಾಸಿಗಳು ತೊಂದರೆ ಪಡುವಂತಾಗಿದೆ. ತಿಂಗಳು ಕಳೆದರೂ ಸ್ವಚ್ಛಗೊಳ್ಳದ ಚರಂಡಿಗಳಿಂದ ರೋಗದ ಭೀತಿ ಎದುರಾಗಿದೆ. ಆದರೆ, ನಿವಾಸಿಗಳ ಸಂಕಷ್ಟಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸ್ಪಂದಿಸುತ್ತಿಲ್ಲ’ ಎಂದು ರುಕ್ಸಾನಾ ಸಾಬೋದ್ದಿನ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಈಗಾಗಲೇ ಮನವಿ ಸಲ್ಲಿಸಿದರೂ 15ನೇ ಹಣಕಾಸು ಯೋಜನೆಯಡಿ ಹಣವಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು ಎಂಬ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ’ ಎಂದು ಸ್ಥಳೀಯ ನಿವಾಸಿ ಮಹೇಶ ಸಜ್ಜನ ಹೇಳುತ್ತಾರೆ.

‘ಗ್ರಾಮದ ಸಮಸ್ಯೆಗಳನ್ನು ಬಗೆಹರಿಸಬೇಕಾದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಜನಪ್ರತಿನಿಧಿಗಳು ಸಾರ್ವಜನಿಕರ ಸಮಸ್ಯೆಗಳು ತಮಗೆ ಸಂಬಂಧವೇ ಇಲ್ಲ ಎನ್ನುವಂತೆ ಇದ್ದಾರೆ. ಇದು ಗ್ರಾಮಸ್ಥರಲ್ಲಿ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT